Karnataka Budget 2023: ವಿಜಯಪುರದಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ ಅನುಮೋದನೆ
ವಿಜಯಪುರ, ಜುಲೈ, 07: ಸಿಎಂ ಹಾಗೂ ಹಣಕಾಸು ಮಂತ್ರಿಯಾದ ಸಿದ್ದರಾಮಯ್ಯ ಅವರು ಶುಕ್ರವಾರ (ಜುಲೈ 07) 2023ನೇ ಸಾಲಿನ ರಾಜ್ಯದ ಅಯವ್ಯಯವನ್ನು ಮಂಡನೆ ಮಾಡಿದ್ದಾರೆ. ಈ ವೇಳೆ ವಿಜಯಪುರದಲ್ಲಿ ಹೊಸ ವಿಮಾನ ನಿಲ್ದಾಣ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಪ್ರವಾಸೋದ್ಯಮ, ಕೈಗಾರಿಕಾ ವಲಯವನ್ನು ಉತ್ತೇಜಿಸುವ ಉದ್ದೇಶದಿಂದ ಮತ್ತು ವಿಪತ್ತು ನಿರ್ವಹಣಾ ಕ್ರಮಗಳನ್ನು ಬೆಂಬಲಿಸುವ ಉದ್ದೇಶದಿಂದ ನಮ್ಮ ಸರ್ಕಾರವು ಧರ್ಮಸ್ಥಳ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಏರ್‌ಸ್ಟ್ರಿಪ್‌ಗಳನ್ನು ಅಭಿವೃದ್ಧಿಪಡಿಸುತ್ತದೆ.
ಹಾಗೆಯೇ ವಿಜಯಪುರ ವಿಮಾನ ನಿಲ್ದಾಣದ ಸಿವಿಲ್ ಕಾಮಗಾರಿ ಪೂರ್ಣಗೊಂಡು ಈ ವರ್ಷ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.

ಅಲ್ಲದೆ ಮಹಿಳೆಯರಿಗೆ ರಾಜ್ಯ ಸರ್ಕಾರಿ ಸ್ವಾಮ್ಯದ ನಾಲ್ಕು ಸಾರಿಗೆ ನಿಗಮಗಳಾದ BMTC,KSRTC, NWKRTC ಹಾಗೂ KKRTCಗಳಲ್ಲಿ ʻಶಕ್ತಿʼಯೋಜನೆಯಡಿ ಉಚಿತ ಪ್ರಯಾಣ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ. ಇದು ದುಡಿಯುವ, ಓದುವ ಹೆಣ್ಣು ಮಕ್ಕಳ ಕನಸುಗಳಿಗೆ ರೆಕ್ಕೆ ಮೂಡಿಸುವ ಯೋಜನೆ ಆಗಿದೆ.
ಎಲ್ಲ ವರ್ಗದ ಮಹಿಳೆಯರಿಗೂ ವೇಗದೂತ, ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸುವುದರಿಂದ ಬಡತನದ ಕಾರಣ ತಮ್ಮ ಸುತ್ತ ತಾವೇ ನಿರ್ಮಿಸಿಕೊಂಡ ಬೇಲಿಯನ್ನು ಅಳಿಸಿ, ನಿರ್ಬಂಧಗಳನ್ನು ಹೋಗಲಾಡಿಸಿ, ಶಿಕ್ಷಣ, ಉದ್ಯೋಗ, ಪ್ರವಾಸ, ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಲು ಉತ್ತಮ ಅವಕಾಶ ಕಲ್ಪಿಸಿದಂತಾಗಿದೆ ಎಂದರು.
ಹಾಗೆಯೇ ದೂರದ ಸ್ಥಳಗಳಿಗೂ ಹೋಗಿ ಉದ್ಯೋಗ ಕೈಗೊಳ್ಳಲು ಈ ಯೋಜನೆ ಸಹಾಕಾರಿಯಾಗಲಿದೆ. ಪ್ರಯಾಣ ವೆಚ್ಚದ ಉಳಿತಾಯ ಅವರಿಗೆ ದೈನಂದಿನ ಬದುಕಿನಲ್ಲಿ ಮತ್ತಷ್ಟು ಬಲ ತುಂಬಲಿದೆ. ಈ ಯೋಜನೆ ಜಾರಿಯಾದ ನಂತರ ಇಲ್ಲಿಯವರೆಗಿನ 25 ದಿನಗಳಲ್ಲಿ
13 ಕೋಟಿಗೂ ಹೆಚ್ಚು ಟಿಕೆಟ್‌ಗಳನ್ನು ನೀಡಲಾಗಿದ್ದು, ಪ್ರತಿದಿನ ಸರಾಸರಿ 50-60 ಲಕ್ಷ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.
ಸರ್ಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವುದರಿಂದ ಮಹಿಳೆಯರಿಗೆ ನಿರ್ಭೀತಿಯಿಂದ ಯಾವುದೇ ಸಮಯದಲ್ಲೂ ಪ್ರಯಾಣಿಸಲು ಸುರಕ್ಷಿತ ವಾತಾವರಣ ಮೂಡಿದೆ. ಮಹಿಳೆಯರಿಂದ ಈ ಯೋಜನೆಗೆ ದೊರೆತಿರುವ ಅಭೂತಪೂರ್ವ ಸ್ಪಂದನೆಯು ಧನ್ಯತೆಯ ಭಾವ ಮೂಡಿಸಿದೆ. ʻಶಕ್ತಿʼ ಯೋಜನೆಗಾಗಿ ವಾರ್ಷಿಕ ಸುಮಾರು 4,000 ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆಯಿದೆ.
ಕರ್ನಾಟಕ ರಾಜ್ಯ ರಸ್ತೆ ಸುರಕ್ಷತೆ ನಿಧಿಯಡಿ 2023-24ನೇ ಸಾಲಿನಿಂದ ಸಾರಿಗೆ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಲೋಕೋಪಯೋಗಿ ಇಲಾಖೆಗಳಿಗೆ ಪ್ರತ್ಯೇಕವಾಗಿ ಅನುದಾನವನ್ನು ಒದಗಿಸುವುದರ ಮೂಲಕ ರಸ್ತೆ ಸುರಕ್ಷತೆ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಈ ಉದ್ದೇಶಕ್ಕಾಗಿ 2023-24ನೇ ಸಾಲಿನಲ್ಲಿ 450 ಕೋಟಿ ರೂಪಾಯಿಗಳನ್ನು ಒದಗಿಸಲಾಗಿರುತ್ತದೆ ಎಂದರು.
ರಾಜ್ಯದ ಹಲವಾರು ಪ್ರದೇಶಗಳಲ್ಲಿನ ವಾಯುಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಈ ಉದ್ದೇಶಕ್ಕಾಗಿ ಸ್ಥಾಪಿಸಲಾಗಿರುವ ಹಸಿರು ತೆರಿಗೆ ನಿಧಿಯಲ್ಲಿ ಲಭ್ಯವಿರುವ ಮೊತ್ತದಲ್ಲಿ 2023-24ನೇ ಸಾಲಿಗೆ 35 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಿದೆ.
ಯಾವ ಇಲಾಖೆಗೆ ಎಷ್ಟು ಅನುದಾನ?
1. ಶಿಕ್ಷಣ ಇಲಾಖೆ - 37,000 ಕೋಟಿ ರೂಪಾಯಿ ಅನುದಾನ ಮೀಸಲು
2. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ - 24,000 ಕೋಟಿ ರೂ.
3. ಇಂಧನ ಇಲಾಖೆ 22,000 ಕೋಟಿ ರೂ.
4. ನೀರಾವರಿ ಇಲಾಖೆ - 19,000 ಕೋಟಿ ರೂ.
5. ಗ್ರಾಮೀಣಾಭಿವೃದ್ಧಿ & ಪಂಚಾಯತ್ರಾಜ್ ಇಲಾಖೆ - 18,000 ಕೋಟಿ ರೂ.
6. ಒಳಾಡಳಿತ ಮತ್ತು ಸಾರಿಗೆ ಇಲಾಖೆ 16,000 ಕೋಟಿ ರೂ.
7. ಕಂದಾಯ ಇಲಾಖೆ - 16,000 ಕೋಟಿ ರೂ.
8. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- 14,000 ಕೋಟಿ ರೂ.
9. ಸಮಾಜ ಕಲ್ಯಾಣ ಇಲಾಖೆ - 11,000 ಕೋಟಿ ರೂ. ಮೀಸಲು
10. ಲೋಕೋಪಯೋಗಿ ಇಲಾಖೆ 10,000 ಕೋಟಿ ರೂ.
11. ಕೃಷಿ ಮತ್ತು ತೋಟಗಾರಿಕೆ ಇಲಾಖೆ- 5,800 ಕೋಟಿ ರೂ.
12. ಪಶು ಸಂಗೋಪನೆ & ಮೀನುಗಾರಿಕೆ ಇಲಾಖೆ - 3,024 ಕೋಟಿ ರೂ.












Click it and Unblock the Notifications