ಆಧಾರ್ ಅಲ್ಲ, ಪ್ಯಾನ್ ಅಲ್ಲ, ಪಾಸ್‌ಪೋರ್ಟ್ ಕೂಡ ಅಲ್ಲ; ಹಾಗಾದರೆ ಭಾರತದ ಪೌರತ್ವ ಸಾಬೀತು ಹೇಗೆ?
ನಿಮ್ಮಲ್ಲಿ ಪಾಸ್‌ಪೋರ್ಟ್ ಇರಬಹುದು. ಆದರೆ ಅದು ಭಾರತೀಯ ಪೌರತ್ವದ ಪುರಾವೆ ಅಲ್ಲ. ಹಾಗಂತ ವಿದೇಶಾಂಗ ಸಚಿವಾಲಯ (MEA) ಖಚಿತವಾಗಿ ಹೇಳಿದೆ. ಪೌರತ್ವ ಮತ್ತು ಸರ್ಕಾರಿ ಸೌಲಭ್ಯಗಳಿಗೆ ಅರ್ಹತೆಯ ಪುರಾವೆಯಾಗಿ ಪಾಸ್‌ಪೋರ್ಟ್‌ಗಳ ಬಳಕೆ ಮಾಡಬಹುದಾ ಅಂತ ಪ್ರಶ್ನೆ, ವಿವಾದ, ಗೊಂದಲ ಇತ್ತು. ಈ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ಗೊಂದಲ ಪರಿಹರಿಸಲು ಇಲಾಖೆ ಸ್ಪಷ್ಟನೆ ನೀಡಿದೆ. ʼಭಾರತೀಯ ಪಾಸ್‌ಪೋರ್ಟ್ ಕಟ್ಟುನಿಟ್ಟಾಗಿ ಪ್ರಯಾಣ ದಾಖಲೆ. ಅದನ್ನು ಪೌರತ್ವದ ನಿರ್ಣಾಯಕ ಪುರಾವೆಯಾಗಿ ಪರಿಗಣಿಸಬಾರದುʼ ಎಂದು ಸ್ಪಷ್ಟಪಡಿಸಿದೆ.
ಇದರ ಹಿಂದೆಯೇ ಪತ್ರಕರ್ತ ರಾಜದೀಪ್ ಸರ್‌ದೇಸಾಯಿ ಅವರು ವ್ಯಂಗ್ಯವಾಗಿ ಒಂದು ಟ್ವೀಟ್ ಮಾಡಿದ್ದಾರೆ. "ನನ್ನತ್ರ ಆಧಾರ್ ಇದೆ. ಆದ್ರೆ ಅದು ಪೌರತ್ವದ ದಾಖಲೆ ಅಲ್ಲ. ನನ್ನತ್ರ ಪ್ಯಾನ್ ಕಾರ್ಡ್ ಇದೆ. ನನ್ನತ್ರ ವೋಟರ್ ಐಡಿ ಇದೆ. ಅದೆರಡೂ ಪೌರತ್ವದ ದಾಖಲೆಯಲ್ಲ. ನನ್ನತ್ರ ಪಾಸ್‌ಪೋರ್ಟ್ ಇದೆ. ಆದ್ರೆ ಅದೂ ಪೌರತ್ವದ ದಾಖಲೆ ಅಲ್ಲ. ಹಾಗಾದ್ರೆ ಯಾವುದು ಭಾರತೀಯ ಪೌರತ್ವದ ದಾಖಲೆ. ಯಾರು ಕೊಡ್ತಾರೆ ಅದನ್ನು?ʼʼ ಎಂದು ಅವರು ಕೇಳಿದ್ದಾರೆ.

ಹಾಗಾದ್ರೆ ಯಾಕೆ ಈ ಗೊಂದಲ? ಪಾಸ್‌ಪೋರ್ಟ್ ಭಾರತೀಯ ಪೌರತ್ವದ ಅಂತಿಮ ಸಾಕ್ಷಿಯಲ್ಲ ಯಾಕೆ? ಇಲ್ಲಿದೆ ಸಂಪೂರ್ಣ ವಿವರ.
ಪಾಸ್‌ಪೋರ್ಟ್ ಪೌರತ್ವದ ದಾಖಲೆ ಅಲ್ಲ
ಇತ್ತೀಚೆಗೆ ವಿದೇಶಾಂಗ ಸಚಿವಾಲಯದ (MEA) ಹಿರಿಯ ಅಧಿಕಾರಿಯೊಬ್ಬರು ಹೇಳಿದ ಒಂದು ಮಾತು ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. "ಭಾರತೀಯ ಪಾಸ್‌ಪೋರ್ಟ್ ಪೌರತ್ವದ (Citizenship) ಅಂತಿಮ ಪುರಾವೆಯಲ್ಲ" ಎಂಬ ಅವರ ಹೇಳಿಕೆ ಅನೇಕರಿಗೆ ಆಶ್ಚರ್ಯ ಉಂಟುಮಾಡಿತು.
ಬಹಳಷ್ಟು ಜನರ ಮನಸ್ಸಿನಲ್ಲಿ ತಕ್ಷಣ ಒಂದು ಪ್ರಶ್ನೆ ಮೂಡಿತು. "ಹಾಗಾದರೆ ಪಾಸ್‌ಪೋರ್ಟ್ ಕೂಡ ಪೌರತ್ವದ ಸಾಕ್ಷಿಯಲ್ಲ ಅಂದರೆ, ಭಾರತದ ಪ್ರಜೆಯೆಂದು ಸಾಬೀತುಪಡಿಸಲು ಯಾವ ದಾಖಲೆ ಬೇಕು?" ಈ ಪ್ರಶ್ನೆಗೆ ಉತ್ತರ ಹುಡುಕಬೇಕಾದರೆ ಮೊದಲು "ಪೌರತ್ವ" ಮತ್ತು "ಪಾಸ್‌ಪೋರ್ಟ್" ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಬೇಕು.
ಪೌರತ್ವ ಎಂದರೇನು?
ಪೌರತ್ವ ಎಂದರೆ ಒಬ್ಬ ವ್ಯಕ್ತಿ ಮತ್ತು ದೇಶದ ನಡುವಿನ ಕಾನೂನುಬದ್ಧ ಸಂಬಂಧ. ಅಂದರೆ, ನೀವು ಭಾರತದ ಪ್ರಜೆಯೇ? ನಿಮಗೆ ಮತದಾನದ ಹಕ್ಕು ಇದೆಯೇ? ನೀವು ಚುನಾವಣೆಯಲ್ಲಿ ಸ್ಪರ್ಧಿಸಬಹುದೇ? ಭಾರತೀಯ ಸಂವಿಧಾನದ ಅಡಿಯಲ್ಲಿ ನಿಮಗೆ ಸಿಗುವ ಹಕ್ಕುಗಳು ಯಾವುವು? ಇವೆಲ್ಲವೂ ನಿಮ್ಮ ಪೌರತ್ವದ ಮೇಲೆ ಅವಲಂಬಿತವಾಗಿರುತ್ತವೆ.
ಭಾರತದಲ್ಲಿ ಪೌರತ್ವವನ್ನು ʼCitizenship Act, 1955ʼ ನಿರ್ಧರಿಸುತ್ತದೆ. ಭಾರತೀಯ ಕಾನೂನಿನ ಪ್ರಕಾರ ಪೌರತ್ವ ಪಡೆಯಲು ಹಲವು ಮಾರ್ಗಗಳಿವೆ.
1. ಜನನದ ಮೂಲಕ (By Birth)- ಭಾರತದಲ್ಲಿ ಜನಿಸಿದವರಿಗೆ ಕೆಲವು ಷರತ್ತುಗಳ ಅಡಿಯಲ್ಲಿ ಪೌರತ್ವ ಸಿಗುತ್ತದೆ.
2. ವಂಶಾವಳಿಯ ಮೂಲಕ (By Descent)- ಪೋಷಕರು ಭಾರತೀಯರಾಗಿದ್ದರೆ ವಿದೇಶದಲ್ಲಿ ಜನಿಸಿದ ಮಕ್ಕಳಿಗೂ ಪೌರತ್ವ ಸಿಗಬಹುದು.
3. ನೋಂದಣಿಯ ಮೂಲಕ (By Registration)- ಕೆಲವು ವಿಶೇಷ ವರ್ಗದ ಜನರು ನೋಂದಣಿಯ ಮೂಲಕ ಪೌರತ್ವ ಪಡೆಯಬಹುದು.
4. ಸ್ವಾಭಾವಿಕೀಕರಣದ ಮೂಲಕ (By Naturalisation)- ದೀರ್ಘಕಾಲ ಭಾರತದಲ್ಲಿ ವಾಸಿಸಿರುವ ವಿದೇಶಿಗರು ಕೆಲವು ಷರತ್ತುಗಳನ್ನು ಪೂರೈಸಿದರೆ ಭಾರತೀಯ ಪೌರತ್ವ ಪಡೆಯಬಹುದು.
5. ಹೊಸ ಪ್ರದೇಶ ಸೇರ್ಪಡೆಯ ಮೂಲಕ- ಭಾರತಕ್ಕೆ ಹೊಸ ಪ್ರದೇಶ ಸೇರಿದ್ದರೆ ಅಲ್ಲಿನ ನಿವಾಸಿಗಳಿಗೆ ಪೌರತ್ವ ಸಿಗಬಹುದು.
ಪಾಸ್‌ಪೋರ್ಟ್ ಎಂದರೇನು?
ಪಾಸ್‌ಪೋರ್ಟ್ ಎಂದರೆ ಮುಖ್ಯವಾಗಿ ಒಂದು ಪ್ರಯಾಣ ದಾಖಲೆ. ಇದು ನಿಮಗೆ ವಿದೇಶಕ್ಕೆ ಹೋಗಲು, ವಿದೇಶದಲ್ಲಿ ನಿಮ್ಮ ಗುರುತನ್ನು ಸಾಬೀತುಪಡಿಸಲು, ನಿಮ್ಮ ರಾಷ್ಟ್ರೀಯತೆಯನ್ನು ತೋರಿಸಲು ಸಹಾಯ ಮಾಡುತ್ತದೆ. ಅಂದರೆ ಪಾಸ್‌ಪೋರ್ಟ್‌ನ ಮುಖ್ಯ ಉದ್ದೇಶ ಪ್ರಯಾಣ. ಪೌರತ್ವ ನಿರ್ಧರಿಸುವುದು ಅದರ ಮುಖ್ಯ ಉದ್ದೇಶವಲ್ಲ.
ಹಾಗಾದರೆ ಪಾಸ್‌ಪೋರ್ಟ್ ಯಾಕೆ ಪೌರತ್ವದ ಅಂತಿಮ ಸಾಕ್ಷಿಯಲ್ಲ? ಇದಕ್ಕೆ ಪ್ರಮುಖ ಕಾರಣ ʼPassports Act, 1967ʼ. ಈ ಕಾನೂನಿನ ಸೆಕ್ಷನ್ 20 ಪ್ರಕಾರ ಕೆಲವು ವಿಶೇಷ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ ಭಾರತೀಯ ನಾಗರಿಕರಲ್ಲದ ವ್ಯಕ್ತಿಗೂ ಪಾಸ್‌ಪೋರ್ಟ್ ನೀಡಬಹುದು. ಇದು ಅಪರೂಪದ ಸಂದರ್ಭವಾದರೂ ಕಾನೂನಿನಲ್ಲಿ ಅವಕಾಶ ಇದೆ.
ಇತರರಿಗೂ ನೀಡಬಹುದು
ಹೀಗಾಗಿ, ಪಾಸ್‌ಪೋರ್ಟ್ ಇದೆ ಅಂದರೆ ಆತ ಭಾರತೀಯ ನಾಗರಿಕನೇ ಎಂದು 100% ಖಚಿತವಾಗಿ ಹೇಳಲು ಕಾನೂನು ಅವಕಾಶ ಕೊಡುವುದಿಲ್ಲ. ಒಬ್ಬ ವ್ಯಕ್ತಿ ಭಾರತೀಯ ಪಾಸ್‌ಪೋರ್ಟ್ ಪಡೆದಿದ್ದಾರೆ ಎಂದು ಊಹಿಸೋಣ. ಆದರೆ ನಂತರ ಅಧಿಕಾರಿಗಳಿಗೆ ಈ ಮಾಹಿತಿಗಳು ಅನುಮಾನಾಸ್ಪದವಾಗಿ ಕಾಣಬಹುದು- ಜನನ ದಾಖಲೆಗಳಲ್ಲಿ ವ್ಯತ್ಯಾಸ, ಪೋಷಕರ ಪೌರತ್ವದ ಬಗ್ಗೆ ಗೊಂದಲ, ವಲಸೆ ಇತಿಹಾಸದಲ್ಲಿ ಸಮಸ್ಯೆ ಇರಬಹುದು.
ಆಗ ಏನಾಗುತ್ತದೆ? ಆ ವ್ಯಕ್ತಿಯ ಪಾಸ್‌ಪೋರ್ಟ್ ಅವರಿಗೆ ನೆರವಾಗಬಹುದು. ಆದರೆ ಅಂತಿಮ ನಿರ್ಧಾರ ಪಾಸ್‌ಪೋರ್ಟ್ ನೋಡಿ ಆಗುವುದಿಲ್ಲ. ಅವರ ಪೌರತ್ವವನ್ನು Citizenship Act ಅಡಿಯಲ್ಲಿ ಮತ್ತೆ ಪರಿಶೀಲಿಸಲಾಗುತ್ತದೆ.
ಹಾಗಾದರೆ ಪಾಸ್‌ಪೋರ್ಟ್ ಏನನ್ನು ಸಾಬೀತುಪಡಿಸುತ್ತದೆ?
- ಪಾಸ್‌ಪೋರ್ಟ್ ಮುಖ್ಯವಾಗಿ ನಿಮ್ಮ ಗುರುತು (Identity). ನೀವು ಯಾರು ಎಂಬುದನ್ನು ತೋರಿಸುತ್ತದೆ.
- ನಿಮ್ಮ ರಾಷ್ಟ್ರೀಯತೆ (Nationality). ಭಾರತವು ನಿಮ್ಮನ್ನು ತನ್ನ ಪ್ರಜೆ ಎಂದು ಪರಿಗಣಿಸಿ ಪಾಸ್‌ಪೋರ್ಟ್ ನೀಡಿದೆ ಎಂಬುದನ್ನು ಸೂಚಿಸುತ್ತದೆ.
- ನಿಮ್ಮ ಪ್ರಯಾಣ ಹಕ್ಕು. ಅಂತರರಾಷ್ಟ್ರೀಯ ಪ್ರಯಾಣಕ್ಕೆ ಅನುಮತಿ ನೀಡುತ್ತದೆ.
- ಆದರೆ ಅದು "ಪೌರತ್ವ ಪ್ರಮಾಣ ಪತ್ರ" ಅಲ್ಲ.
ಆಧಾರ್ ಕಾರ್ಡ್ ಪೌರತ್ವದ ಸಾಕ್ಷಿಯಲ್ಲವೇ?
ಇಲ್ಲ. ಆಧಾರ್ ಕಾರ್ಡ್ ಕೇವಲ ಗುರುತಿನ ಚೀಟಿ. ಆಧಾರ್ ಪಡೆಯಲು ಭಾರತೀಯ ನಾಗರಿಕರಾಗಿರಲೇಬೇಕೆಂಬ ನಿಯಮ ಇಲ್ಲ. ಭಾರತದಲ್ಲಿ ವಾಸಿಸುವ ಕೆಲ ವಿದೇಶಿ ನಿವಾಸಿಗಳೂ ಆಧಾರ್ ಪಡೆಯಬಹುದು. ಆದ್ದರಿಂದ ಆಧಾರ್ ಪೌರತ್ವದ ದಾಖಲೆ ಅಲ್ಲ.
ಮತದಾರರ ಗುರುತಿನ ಚೀಟಿ?
ವೋಟರ್ ಐಡಿ ಪಡೆಯಲು ಸಾಮಾನ್ಯವಾಗಿ ಭಾರತೀಯ ನಾಗರಿಕರಾಗಿರಬೇಕು. ಆದರೆ ಚುನಾವಣಾ ಆಯೋಗವೂ ಇದನ್ನು ಪೌರತ್ವದ ಅಂತಿಮ ಪುರಾವೆ ಎಂದು ಪರಿಗಣಿಸುವುದಿಲ್ಲ. ಅದು ಚುನಾವಣಾ ಉದ್ದೇಶಕ್ಕಾಗಿ ನೀಡುವ ಗುರುತಿನ ದಾಖಲೆ.
ಹಾಗಾದರೆ ಪೌರತ್ವದ ಅಂತಿಮ ದಾಖಲೆ ಯಾವುದು?
ಇಲ್ಲಿಯೇ ಜನರಿಗೆ ಗೊಂದಲವಾಗುತ್ತದೆ. ಭಾರತದಲ್ಲಿ ಒಂದೇ ಒಂದು "Citizenship Certificate" ಎಲ್ಲರಿಗೂ ನೀಡುವ ವ್ಯವಸ್ಥೆ ಇಲ್ಲ. ಬದಲಿಗೆ ಹಲವು ದಾಖಲೆಗಳನ್ನು ಒಟ್ಟಿಗೆ ಪರಿಶೀಲಿಸಲಾಗುತ್ತದೆ.
ಉದಾಹರಣೆಗೆ:
* ಜನನ ಪ್ರಮಾಣ ಪತ್ರ
* ಪೋಷಕರ ದಾಖಲೆಗಳು
* ಶಾಲಾ ದಾಖಲೆಗಳು
* ಭೂ ದಾಖಲೆಗಳು
* ಪೌರತ್ವ ಪ್ರಮಾಣ ಪತ್ರ (ಅಗತ್ಯವಿದ್ದರೆ)
* ವಲಸೆ ದಾಖಲೆಗಳು
ಇವೆಲ್ಲವನ್ನು ನೋಡಿ ಅಧಿಕಾರಿಗಳು ಅಥವಾ ನ್ಯಾಯಾಲಯ ನಿರ್ಧಾರ ಮಾಡಬಹುದು.
I have a VOTER ID card, but NO, it is not proof of citizenship.
— Rajdeep Sardesai (@sardesairajdeep) June 25, 2026
I have a AADHAR card but NO, it is not proof of citizenship
I have a PAN Card, but NO, it is not proof of citizenship.
I have a PASSPORT but NO, it is not proof of citizenship.
So who will give me a CITIZENSHIP…
ವಿದೇಶಾಂಗ ಸಚಿವಾಲಯ ಈಗ ಈ ಸ್ಪಷ್ಟನೆ ಯಾಕೆ ನೀಡಿತು?
ಇತ್ತೀಚಿನ ದಿನಗಳಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ, ನಾಗರಿಕತೆ ಕುರಿತ ಚರ್ಚೆಗಳು, ಗುರುತಿನ ದಾಖಲೆಗಳ ಬಗ್ಗೆ ವಿವಾದಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಹಲವರು "ನನ್ನ ಬಳಿ ಭಾರತೀಯ ಪಾಸ್‌ಪೋರ್ಟ್ ಇದೆ. ಅದು ಸಾಕಲ್ಲವೇ?" ಎಂದು ಪ್ರಶ್ನಿಸುತ್ತಿದ್ದರು. ಇದಕ್ಕೆ ಉತ್ತರವಾಗಿ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ.
ಇದರಿಂದ ಸಾಮಾನ್ಯ ಜನರು ಆತಂಕ ಪಡಬೇಕಿಲ್ಲ. ಪಾಸ್‌ಪೋರ್ಟ್ ಹೊಂದಿರುವ ಬಹುತೇಕ ಜನರಿಗೆ ಯಾವುದೇ ಸಮಸ್ಯೆ ಇಲ್ಲ. ಪಾಸ್‌ಪೋರ್ಟ್ ಪಡೆಯುವ ಮೊದಲು ಸರ್ಕಾರ ಸಾಕಷ್ಟು ದಾಖಲೆಗಳನ್ನು ಪರಿಶೀಲಿಸುತ್ತದೆ. ಆದ್ದರಿಂದ ಪಾಸ್‌ಪೋರ್ಟ್ ಬಹಳ ಬಲವಾದ ದಾಖಲೆ. ಆದರೆ ಕಾನೂನು ದೃಷ್ಟಿಯಿಂದ ನೋಡಿದರೆ ಅದು ಪೌರತ್ವದ ʼಅಂತಿಮ ಮತ್ತು ಪ್ರಶ್ನಿಸಲಾಗದ ಸಾಕ್ಷಿ (conclusive proof) ಅಲ್ಲ.
ಭಾರತೀಯ ಪಾಸ್‌ಪೋರ್ಟ್ ಅತ್ಯಂತ ಮಹತ್ವದ ದಾಖಲೆ. ಅದು ನಿಮ್ಮ ಗುರುತು ಮತ್ತು ರಾಷ್ಟ್ರೀಯತೆಯನ್ನು ಸಾಬೀತುಪಡಿಸುತ್ತದೆ. ಆದರೆ ಭಾರತೀಯ ಪೌರತ್ವವನ್ನು ಅಂತಿಮವಾಗಿ ನಿರ್ಧರಿಸುವುದು ಪಾಸ್‌ಪೋರ್ಟ್ ಅಲ್ಲ. ʼCitizenship Act, 1955ʼ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಕಾನೂನು ಪ್ರಕ್ರಿಯೆಗಳು.
(ಬರಹ: ಭವಾನಿ ಭಟ್)














Click it and Unblock the Notifications