ಭಾರತದ ಅಮ್ಮಂದಿರ ಕಂಡು ತನ್ನ ಮಕ್ಕಳ ಪಾಲನೆ ಕಲಿತ ಯುರೋಪಿಯನ್ ಮಹಿಳೆ! ಮಗು ಬೆಳೆಸುವ ರೀತಿಯೇ ಬದಲಾದ ಬಗ್ಗೆ ಹೆಮ್ಮೆ
ಮಕ್ಕಳನ್ನು ಹೀಗೆಯೇ ಬೆಳೆಸಬೇಕು, ಹಾಗೆಯೇ ಲಾಲಿಸಬೇಕು, ಇಷ್ಟೇ ಪ್ರೀತಿಸಬೇಕು ಎನ್ನುವ ನಿರ್ದಿಷ್ಟ ನಿಯಮಗಳಿಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ, ಮಕ್ಕಳಿಗೆ ಒಳ್ಳೆಯದಾಗುವ ರೀತಿಯಲ್ಲಿ ಮಕ್ಕಳನ್ನು ಬೆಳೆಸಬಹುದು. ಕೆಲವೊಂದು ರೀತಿ ನೀತಿಗಳನ್ನು ಇನ್ನೊಬ್ಬರನ್ನು ನೋಡಿಯೂ ಕಲಿತುಕೊಳ್ಳಬಹುದು, ಅಳವಡಿಸಿಕೊಳ್ಳಲೂಬಹುದು. ಅದು ನಿಮ್ಮ ತಾಯಿಯಿಂದಲೇ ಆಗಬಹುದು, ಸ್ನೇಹಿತರಿಂದಲೂ ಆಗಬಹುದು ಇಲ್ಲಾ ನಿಮ್ಮದಲ್ಲದ ಬೇರೆಯೇ ಸಂಸ್ಕೃತಿಯಿಂದಲೂ ಆಗಬಹುದು. ಇಲ್ಲಿ ಮುಖ್ಯವಾಗಿರುವುದು ಮಕ್ಕಳ ಪೋಷಣೆ ಹೇಗೆ ಆಗುತ್ತಿದೆ ಎನ್ನುವುದಷ್ಟೇ.
ಕ್ಸೆನಿಯಾ ಕಲಾಗೆ ಎನ್ನುವ ಯುರೋಪಿಯನ್ ಮಹಿಳೆಗೆ ನಾಲು ಮಕ್ಕಳು. ಇವರು ಮದುವೆಯಾಗಿದ್ದು ಭಾರತೀಯ ಮೂಲದವರನ್ನು. ಇವರು ಈಗ ಭಾರತಕ್ಕೆ ಶಿಫ್ಟ್ ಆಗಿದ್ದಾರೆ, ಇವರು ಭಾರತಕ್ಕೆ ಬಂದು ನೆಲೆ ನಿಲ್ಲಲು ಇವರ ಮಕ್ಕಳು ಕಾರಣ ಅಲ್ಲವೇ ಅಲ್ಲ. ಅಂದರೆ ಮಕ್ಕಳು ಭಾರತದಲ್ಲಿ ಬೆಳೆಯಲಿ ಎನ್ನುವ ಕಾರಣಕ್ಕೆ ಇವರು ನಮ್ಮ ದೇಶಕ್ಕೆ ಮರಳಿ ಬಂದವರಲ್ಲ. ಆದರೆ ಇಲ್ಲಿಗೆ ಬಂದ ಮೇಲೆ ನಮ್ಮಲ್ಲಿ ಮಕ್ಕಳನ್ನು ಬೆಳೆಸುವ ರೀತಿ ಇವರಿಗೆ ಇಷ್ಟವಾಗಿದೆ.ಇಲ್ಲಿಯ ಪದ್ದತಿಗಳನ್ನು ತನಗೇ ಅರಿವಿಲ್ಲದಂತೆ ಮೈಗೂಡಿಸಿ ಕೊಂಡಿದ್ದಾರೆ. ಇದರ ಬಗ್ಗೆ ಕ್ಸೆನಿಯಾಗೆ ಬಹಳ ಹೆಮ್ಮೆಯೂ ಇದೆ.

ಈ ಬಗ್ಗೆ ಕ್ಸೆನಿಯಾ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು ಈ ವರ್ಷಗಳಲ್ಲಿ ಅಳವಡಿಸಿಕೊಂಡ ಭಾರತೀಯ ಪೋಷಕರ ಸಂಪ್ರದಾಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಒಟ್ಟಿಗೆ ಮಲಗುವ ಪದ್ದತಿ:
ಇಡೀ ಕುಟುಂಬ ಒಂದೇ ಹಾಸಿಗೆಯ ಮೇಲೆ ಮಲಗುವ ಪದ್ದತಿ ಕ್ಸೆನಿಯಾಗೆ ಇಷ್ಟವಾಗಿದೆ. ಅವರ ಪ್ರಕಾರ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಕ್ಕಳು ಐದು ವರ್ಷ ವಯಸ್ಸಿನಲ್ಲೇ ತಮ್ಮದೇ ಆದ ಕೋಣೆಯಲ್ಲಿ ಮಲಗಲು ಆರಂಭಿಸುತ್ತಾರೆ. ಆದರೆ ಇಲ್ಲಿ ಮಕ್ಕಳೊಂದಿಗೆ ಒಂದೇ ಕೋಣೆಯಲ್ಲಿ ಒಂದೇ ಹಾಸಿಗೆಯಲ್ಲಿ ಮಲಗುವ ಅನುಭವ ಅವರಿಗೆ ಹಿತ ಎನಿಸಿದೆ. ಹೀಗೆ ಒಟ್ಟಿಗೆ ಮಲಗುವಾಗ ಪೋಷಕರು ಮತ್ತು ಮಕ್ಕಳ ಬಾಂಧವ್ಯ ಗಟ್ಟಿಯಾಗುವುದನ್ನು ಅವರು ನಿಧಾನವಾಗಿ ಅರಿತುಕೊಂಡರು. "ನಾನು ತಾಯಿಯಾಗುವ ಮೊದಲು ಯಾವುದೇ ಮಗುವಿನೊಂದಿಗೆ ಒಂದೇ ಹಾಸಿಗೆಯಲ್ಲಿ ಮಲಗಿರಲಿಲ್ಲ, ಆದರೆ ನನ್ನ ಮಕ್ಕಳೊಂದಿಗೆ ಹೀಗೆ ಮಲಗಿರುವುದು ಆರಂಭಿಕ ದಿನಗಳಿಂದಲೇ ಅವರೊಂದಿಗೆ ವಿಶೇಷ ಬಾಂಧವ್ಯ ಬೆಳೆಯುವುದಕ್ಕೆ ಸಹಾಯ ಮಾಡಿತು ಎಂದಿದ್ದಾರೆ.
ಎಣ್ಣೆ ಮಸಾಜ್‌ಗಳು:
ಕ್ಸೆನಿಯಾ ಮನಗೆದ್ದ ಮತ್ತೊಂದು ವಿಚಾರ ಎಂದರೆ ಎಣ್ಣೆ ಮಸಾಜ್. ಇದು ಭಾರತದಲ್ಲಿ ಆಚರಣೆಯಲ್ಲಿರುವ ಅತ್ಯಂತ ಹಳೆಯ ಪದ್ದತಿ.ಬೆಚ್ಚಗಿನ ಎಣ್ಣೆಯಿಂದ ಮಗುವಿಗೆ ಮಸಾಜ್ ಮಾಡುವದರಿಂದ ಮಗುವಿನ ಕೈ ಕಾಲು ಸಡಿಲವಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ಈ ರೀತಿ ಅಜ್ಜಿಯರು, ಮಗುವಿಗೆ ಮಾಡುವ ಮಸಾಜ್ ಸಂಪ್ರದಾಯ ಕ್ಸೆನಿಯಾ ಮನ ಗೆದ್ದಿದೆ.
ಮಗುವಿಗೆ ಹೆಸರಿಡುವ ರೀತಿ:
ಕ್ಸೆನಿಯಾ ಬಹಳವಾಗಿ ಇಷ್ಟಪಟ್ಟ ಒಂದು ಸಂಪ್ರದಾಯವೆಂದರೆ ಮಗುವಿಗೆ ಹೆಸರಿಡುವ ರೀತಿ. "ಹೆಸರನ್ನು ಆಯ್ಕೆ ಮಾಡಲು ಎಷ್ಟು ಯೋಚಿಸಬೇಕು. ಮಗುವಿಗೆ ಇಡುವ ಹೆಸರುಗಳು ಸಂಸ್ಕೃತಿ, ಇತಿಹಾಸ ಮತ್ತು ಮೌಲ್ಯಗಳಿಗೆ ಎಷ್ಟು ಆಳವಾಗಿ ಸಂಬಂಧಿಸಿವೆ ಎಂಬುದನ್ನು ಯೋಚಿಸಿ ನಾಮಕರಣ ಮಾಡುವ ಪದ್ದತಿಯನ್ನು ನಾನು ಇಷ್ಟಪಡುತ್ತೇನೆ ಎನ್ನುತ್ತಾರೆ ಕ್ಸೆನಿಯಾ .ಅಲ್ಲದೆ ಅವರು ತಮ್ಮ ಮಕ್ಕಳಿಗೆ ಭಾರತೀಯ ಹೆಸರುಗಳನ್ನೇ ಇಟ್ಟಿದ್ದಾರೆ.
ಭಾರತೀಯ ತಾಯಂದಿರು ಉಡುವ ಸೀರೆಗಳೆಂದರೆ ಬಲು ಇಷ್ಟ:
ಭಾರತೀಯ ತಾಯಂದಿರು ತಮ್ಮ ಮಕ್ಕಳ ಹುಟ್ಟುಹಬ್ಬಕ್ಕೆ ಸುಂದರವಾದ ಬಟ್ಟೆಗಳನ್ನು ತೊಡುತ್ತಾರೆ. ಅದರಲ್ಲೂ ಹೆಚ್ಚಾಗಿ ಸೀರೆ ಮತ್ತು ಸಾಂಪ್ರದಾಯಿಕ ಉಡುಪುಗಳನ್ನು ಧರಿಸುತ್ತಾರೆ. ಇದು ಕ್ಸೆನಿಯಾಗೆ ಇಷ್ಟವಾಗಿದೆ. ಕ್ಸೆನಿಯಾ ಕೂಡಾ ತನ್ನ ಮಕ್ಕಳ ಹುಟ್ಟುಹಬ್ಬಕ್ಕೆ ಸೀರೆ ಉಡುತ್ತಾರೆ. ಈ ರೀತಿ ಮಾಡುವುದರಿಂದ ಮಗುವಿನ ಹುಟ್ಟುಹಬ್ಬ ತಾಯಿಗೆ ಎಷ್ಟು ವಿಶೇಷ ದಿನವಾಗಿದೆ ಎನ್ನುವುದನ್ನು ನೆನಪಿಸುತ್ತದೆಯಂತೆ. ಸಾಧ್ಯವಾದಾಗಲೆಲ್ಲಾ, ಅವರು ತನ್ನ ಮಕ್ಕಳ ಹುಟ್ಟುಹಬ್ಬದ ಸಂದರ್ಭಗಳಲ್ಲಿ ಸೀರೆಯನ್ನೇ ಉಡುತ್ತಾರೆಯಂತೆ.
ನೋಡಿ ಕಲಿತದ್ದಾದರೂ ಈಗ ಎಲ್ಲವೂ ಅವರದ್ದೇ ಸಂಪ್ರದಾಯ:
ಕ್ಸೆನಿಯಾಳ ಕಥೆಯು ಪೂರ್ವ ಮತ್ತು ಪಶ್ಚಿಮದ ನಡುವಿನ ವ್ಯತ್ಯಾಸವಲ್ಲ ಅಥವಾ ಭಾರತೀಯ ಮತ್ತು ಯುರೋಪಿಯನ್ ಪೋಷಕರ ನಡುವಿನ ಭಿನ್ನತೆಯೂ ಅಲ್ಲ. ಪೋಷಕರು ಕಲಿಕೆಗೆ ಮುಕ್ತರಾದಾಗ ಯಾವ ರೀತಿಯಲ್ಲೆಲ್ಲಾ ಪಾಸಿಟಿವ್ ಬದಲಾವಣೆಗಳು ಆಗಬಹುದು ಎನ್ನುವುದನ್ನು ಇದು ತೋರಿಸುತ್ತದೆ. ಅದು ಅಜ್ಜಿ ಮಾಡುವ ಮಸಾಜ್ ಇರಲಿ, ಮಗುವನ್ನು ಜೊತೆಯಲ್ಲಿಯೇ ಮಲಗಿಸುವುದಾಗಿರಲಿ, ಅರ್ಥಪೂರ್ಣ ನಾಮಕರಣವಾಗಿರಲಿ ಅಥವಾ ಹುಟ್ಟುಹಬ್ಬಕ್ಕೆ ತಾಯಿ ರೆಡಿಯಾಗುವ ರೀತಿಯಿರಲಿ, ಎಲ್ಲವೂ ಕೇಳುವುದಕ್ಕೆ ಸಾಮಾನ್ಯ ವಿಷಯಗಳೇ. ಆದರೆ ಮಕ್ಕಳು ಬೆಳೆದಂತೆ ನಮ್ಮ ಜೊತೆಯಲ್ಲಿಯೇ ಸಾಗುವ ನೆನಪುಗಳು, ಆಚರಣೆಗಳು ಮತ್ತು ಸಂಪ್ರದಾಯಗಳಾಗಿ ಮಾರ್ಪಡುತ್ತವೆ. ಕ್ಸೆನಿಯಾ ಹೇಳುವಂತೆ, ಒಂದು ದಿನ ನಾವು ಸಾಗಿ ಬಂದ ದಿನಗಳನ್ನು ಹಿಂತಿರುಗಿ ನೋಡಿದಾಗ ಆ ದಿನಗಳು ಅತ್ಯಂತ ಸುಂದರ ಕತೆಗಳಂತೆ ನೆನಪಿರುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications