ಸರಕಾರಿ ನೌಕರರಿಗೆ ಬೆಲೆಯೇರಿಕೆ ತಲೆಬಿಸಿ ಇಲ್ಲ! ತುಟ್ಟಿಭತ್ಯೆ (DA) ಬಗ್ಗೆ ತಿಳಿದುಕೊಳ್ಳಿ! 2026ರಲ್ಲಿ ಎಷ್ಟು?
ಎಲ್ಲರಿಗೂ ಬೆಲೆಯೇರಿಕೆಯ ಬಿಸಿ ತಟ್ಟುತ್ತದೆ. ಆದರೆ ಸರ್ಕಾರಿ ನೌಕರರಿಗೆ ಅದು ತಟ್ಟದಂತೆ ಒಂದು ಹಣಕಾಸಿನ ವ್ಯವಸ್ಥೆ ಇದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ವೇತನ ಹೆಚ್ಚಳದಷ್ಟೇ ಮುಖ್ಯವಾಗಿರುವ ಒಂದು ಪದವಿದೆ. ಅದೇ ಡಿಎ (Dearness Allowance - ತುಟ್ಟಿಭತ್ಯೆ). ಪ್ರತಿ ಆರು ತಿಂಗಳಿಗೊಮ್ಮೆ ಡಿಎ ಏರಿಕೆ ಅಥವಾ ಇಳಿಕೆಯ ಬಗ್ಗೆ ಸುದ್ದಿಗಳು ಬರುತ್ತಲೇ ಇರುತ್ತವೆ. ಆದರೆ ಡಿಎ ಎಂದರೇನು? ಅದು ಯಾಕೆ ಕೊಡಲಾಗುತ್ತದೆ? ಎಷ್ಟು ಹಣ ಸಿಗುತ್ತದೆ? ತೆರಿಗೆ ಇದೆಯೇ? ಎಂಬ ಪ್ರಶ್ನೆಗಳು ಹಲವರಿಗೆ ಇರುತ್ತವೆ.
ಡಿಎ ಎಂದರೇನು?
ಡಿಎ ಎಂದರೆ ತುಟ್ಟಿಭತ್ಯೆ. ಹಣದುಬ್ಬರದಿಂದಾಗಿ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗುವಾಗ, ನೌಕರರ ಖರೀದಿ ಸಾಮರ್ಥ್ಯ ಕಡಿಮೆಯಾಗದಂತೆ ಸರ್ಕಾರ ನೀಡುವ ಹೆಚ್ಚುವರಿ ಭತ್ಯೆಯೇ ಡಿಎ.
ಸರಳವಾಗಿ ಹೇಳುವುದಾದರೆ, ಇಂದು 100 ರೂಪಾಯಿಗೆ ಸಿಗುವ ವಸ್ತುಗಳು ಮುಂದಿನ ವರ್ಷ 110 ಅಥವಾ 120 ರೂಪಾಯಿಗೆ ಏರಬಹುದು. ಆಗ ನೌಕರರ ಸಂಬಳದ ಮೌಲ್ಯ ಕುಸಿಯದಂತೆ ಸರ್ಕಾರ ಹೆಚ್ಚುವರಿ ಹಣ ನೀಡುತ್ತದೆ. ಅದೇ ಡಿಎ.

ಡಿಎ ಯಾಕೆ ಮುಖ್ಯ?
ಬೆಲೆ ಏರಿಕೆ ಎಲ್ಲರ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಆಹಾರ, ಮನೆ ಬಾಡಿಗೆ, ಸಾರಿಗೆ, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲ ವೆಚ್ಚಗಳೂ ಹೆಚ್ಚಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಡಿಎ ನೌಕರರಿಗೆ ಆರ್ಥಿಕ ರಕ್ಷಣೆ ನೀಡುತ್ತದೆ. ಇದರಿಂದ ಹಣದುಬ್ಬರದ ಹೊಡೆತವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದು.
ಯಾರಿಗೆ ಡಿಎ ಸಿಗುತ್ತದೆ? ಕೇಂದ್ರ ಸರ್ಕಾರಿ ನೌಕರರು, ರಾಜ್ಯ ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ಸಂಸ್ಥೆಗಳ (PSU) ನೌಕರರು, ಸರ್ಕಾರಿ ಪಿಂಚಣಿದಾರರು ಇವರಿಗೆ ಡಿಎ ಅಥವಾ ಡಿಯರ್‌ನೆಸ್ ರಿಲೀಫ್ (DR) ರೂಪದಲ್ಲಿ ಈ ಸೌಲಭ್ಯ ಸಿಗುತ್ತದೆ.
ಡಿಎ ಎಷ್ಟು ಬಾರಿ ಹೆಚ್ಚಾಗುತ್ತದೆ?
ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಡಿಎ ಪರಿಷ್ಕರಣೆ ಮಾಡಲಾಗುತ್ತದೆ. ಜನವರಿ 1ರಿಂದ ಹಾಗೂ ಜುಲೈ 1ರಿಂದ. ಅಂದರೆ ಪ್ರತಿ ಆರು ತಿಂಗಳಿಗೊಮ್ಮೆ ಹಣದುಬ್ಬರದ ಸ್ಥಿತಿಯನ್ನು ಪರಿಶೀಲಿಸಿ ಸರ್ಕಾರ ಹೊಸ ಡಿಎ ದರವನ್ನು ಘೋಷಿಸುತ್ತದೆ.
ಡಿಎ ಲೆಕ್ಕಾಚಾರಕ್ಕೆ AICPI-IW (All India Consumer Price Index for Industrial Workers) ಎಂಬ ಸೂಚ್ಯಂಕವನ್ನು ಬಳಸಲಾಗುತ್ತದೆ. ಇದು ದೇಶದ ವಿವಿಧ ಭಾಗಗಳಲ್ಲಿ ವಸ್ತು ಮತ್ತು ಸೇವೆಗಳ ಬೆಲೆಯಲ್ಲಿ ಆಗುವ ಬದಲಾವಣೆಗಳನ್ನು ಅಳೆಯುತ್ತದೆ. ಈ ಅಂಕಿ-ಅಂಶಗಳ ಆಧಾರದ ಮೇಲೆ ಡಿಎ ಶೇಕಡಾವಾರು ನಿರ್ಧರಿಸಲಾಗುತ್ತದೆ.
ಈಗಿನ ಡಿಎ ಎಷ್ಟು?
2026ರ ಜನವರಿಯಿಂದ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ದರವನ್ನು 58%ರಿಂದ 60%ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಯಾರ ಮೂಲ ವೇತನ (Basic Pay) ₹50,000 ಇದ್ದರೆ,
60% ಡಿಎ = ₹30,000
ಒಟ್ಟು ಡಿಎ = ತಿಂಗಳಿಗೆ ₹30,000
ಇದು ಮೂಲ ವೇತನಕ್ಕೆ ಹೆಚ್ಚುವರಿಯಾಗಿ ಸಿಗುತ್ತದೆ.
ಡಿಎಯ ಎರಡು ವಿಧಗಳು
1. Industrial Dearness Allowance (IDA): ಇದು ಮುಖ್ಯವಾಗಿ ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರಿಗೆ ಅನ್ವಯಿಸುತ್ತದೆ. ಹಣದುಬ್ಬರ ಮತ್ತು ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಇದನ್ನು ಪರಿಷ್ಕರಿಸಲಾಗುತ್ತದೆ.
2. Variable Dearness Allowance (VDA): ಇದು ಕನಿಷ್ಠ ವೇತನ ಕಾಯ್ದೆಯಡಿ ಬರುವ ಕಾರ್ಮಿಕರಿಗೆ ಅನ್ವಯಿಸುತ್ತದೆ. ಹಣದುಬ್ಬರದ ಪ್ರಮಾಣಕ್ಕೆ ಅನುಗುಣವಾಗಿ ಇದನ್ನು ಪರಿಷ್ಕರಿಸಲಾಗುತ್ತದೆ.
ಪಿಂಚಣಿದಾರರಿಗೆ ಏನು ಸಿಗುತ್ತದೆ?
ನಿವೃತ್ತ ಸರ್ಕಾರಿ ನೌಕರರಿಗೆ ಡಿಎ ಬದಲು ʼಡಿಯರ್‌ನೆಸ್ ರಿಲೀಫ್ (DR)ʼ ಸಿಗುತ್ತದೆ. ಸರ್ಕಾರ ಡಿಎ ಹೆಚ್ಚಿಸಿದಾಗ ಅದೇ ಪ್ರಮಾಣದಲ್ಲಿ ಪಿಂಚಣಿದಾರರ ಡಿಆರ್ ಕೂಡ ಹೆಚ್ಚಾಗುತ್ತದೆ. ಇದರಿಂದ ನಿವೃತ್ತಿಯ ನಂತರವೂ ಹಣದುಬ್ಬರದ ಹೊರೆ ಸ್ವಲ್ಪ ಕಡಿಮೆಯಾಗುತ್ತದೆ.
ಡಿಎಗೆ ತೆರಿಗೆ ಇದೆಯೇ? ಹೌದು. ಡಿಎ ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತದೆ. ಇದು ನೌಕರರ ಆದಾಯದ ಭಾಗವಾಗಿರುವುದರಿಂದ ಆದಾಯ ತೆರಿಗೆ ಲೆಕ್ಕಾಚಾರದಲ್ಲಿ ಸೇರಿಸಲಾಗುತ್ತದೆ. ವೇತನ ಸ್ಲಿಪ್ ಮತ್ತು ಫಾರ್ಮ್-16 ನಲ್ಲಿಯೂ ಡಿಎ ವಿವರಗಳು ಇರುತ್ತವೆ.
ಡಿಎ ಮತ್ತು HRA ನಡುವಿನ ವ್ಯತ್ಯಾಸ
ಬಹಳಷ್ಟು ಮಂದಿ ಡಿಎ ಮತ್ತು ಎಚ್‌ಆರ್‌ಎ (House Rent Allowance) ಒಂದೇ ಎಂದು ಭಾವಿಸುತ್ತಾರೆ. ಆದರೆ ಎರಡರ ಉದ್ದೇಶ ಬೇರೆ ಬೇರೆ.
ಡಿಎ ಹಣದುಬ್ಬರದಿಂದ ರಕ್ಷಣೆ ನೀಡುತ್ತದೆ ಹಾಗೂ ಸಂಪೂರ್ಣ ತೆರಿಗೆಗೆ ಒಳಪಟ್ಟಿದೆ. ಎಚ್‌ಆರ್‌ಎ ಮನೆ ಬಾಡಿಗೆ ವೆಚ್ಚಕ್ಕೆ ಸಹಾಯ ಮಾಡುವುದು. ಇದಕ್ಕೆ ಕೆಲವು ಷರತ್ತುಗಳಡಿ ತೆರಿಗೆ ವಿನಾಯಿತಿ ಸಿಗಬಹುದು.
ಸದ್ಯ ಜುಲೈ 2026ರ ಡಿಎ ಹೆಚ್ಚಳಕ್ಕಾಗಿ ಸರ್ಕಾರಿ ನೌಕರರು ಕಾಯುತ್ತಿದ್ದಾರೆ. ಅಂತಾರಾಷ್ಟ್ರೀಯ ತೈಲ ಬೆಲೆ, ಹಣದುಬ್ಬರ, ಗ್ರಾಹಕ ಬೆಲೆ ಸೂಚ್ಯಂಕ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಸರ್ಕಾರ ಹೊಸ ಡಿಎ ದರವನ್ನು ಘೋಷಿಸಲಿದೆ. ಆದರೆ ಅಧಿಕೃತ ಪ್ರಕಟಣೆ ಬರುವವರೆಗೆ ಸಾಮಾಜಿಕ ಜಾಲತಾಣ ಅಥವಾ ಅನಧಿಕೃತ ವೆಬ್‌ಸೈಟ್‌ಗಳಲ್ಲಿನ ಮಾಹಿತಿಯನ್ನು ನಂಬಬಾರದು.
ಒಟ್ಟಾರೆಯಾಗಿ, ಡಿಎ ಎನ್ನುವುದು ಹಣದುಬ್ಬರದ ವಿರುದ್ಧ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ದೊರೆಯುವ ಆರ್ಥಿಕ ಕವಚ. ಬೆಲೆ ಏರಿಕೆಯಿಂದ ಸಂಬಳದ ಮೌಲ್ಯ ಕುಸಿಯದಂತೆ ಕಾಪಾಡುವಲ್ಲಿ ಡಿಎ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಪ್ರತಿ ಡಿಎ ಪರಿಷ್ಕರಣೆ ಲಕ್ಷಾಂತರ ಸರ್ಕಾರಿ ನೌಕರರು ಮತ್ತು ನಿವೃತ್ತರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ.
(ಬರಹ: ಭವಾನಿ ಭಟ್)














Click it and Unblock the Notifications