ಮಣಿಪಾಲ್ ನ ಈ ವ್ಯಾಪಾರಿಯನ್ನು ಅಣ್ಣಾ ಅಂತ ಕರೆಯಬಾರದಂತೆ!

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಉಡುಪಿ: ''ದಯವಿಟ್ಟು ನನ್ನನು ಅಣ್ಣಾ ಎಂದು ಕರೆಯಬೇಡಿ'' - ಇದು ಕಾಲೇಜು ಹುಡುಗರು ರಾಖೀ ಹಬ್ಬದ ದಿನದಂದು ಮಾಡಿಕೊಂಡ ವಿನಂತಿಯಲ್ಲ ಅಥವಾ ಹೋರಾಟಗಾರ ಅಣ್ಣಾ ಹಜಾರೆ ಕೊಟ್ಟ ಕರೆಯೂ ಅಲ್ಲ.

ಇದು ಮಂಗಳೂರಿನಲ್ಲಿ ಹಣ್ಣಿನ ವ್ಯಾಪಾರಿಯೊಬ್ಬ ತನ್ನ ಅಂಗಡಿಯ ಮುಂದೆ ತಗುಲುಹಾಕಿರುವ ಬೋರ್ಡು !

ಹೌದು. ನಿಮಗೆ ಅಚ್ಚರಿಯಾಗಬಹುದು. ಯಾಕಂದ್ರೆ, ಸಾಮಾನ್ಯವಾಗಿ ಹಣ್ಣಿನ ಅಂಗಡಿಗಳ ಮುಂದೆ ಅಂಗಡಿಯಲ್ಲಿನ ವಿವಿಧ ಹಣ್ಣುಗಳ ದರದ ಪಟ್ಟಿಯನ್ನು ನಮೂದಿಸುವುದು ವಾಡಿಕೆ.

ಆದರೆ, ಈ ಹಣ್ಣಿನ ವ್ಯಾಪಾರಿಯ ಕೇಸು ಕೊಂಚ ವಿಭಿನ್ನ. ಈತ ತನ್ನ ಬಳಿ ಖರೀದಿಗಾಗಿ ಬರುವ ಗ್ರಾಹಕರು ತನ್ನನ್ನು ಅಣ್ಣಾ ಅಂತ ಸಂಬೋಧಿಸಬೇಡಿ ಅಂತ ಮನವಿ ಮಾಡಿಕೊಂಡಿದ್ದಾನೆ. ಇದನ್ನು ಕೆದಕಿದ ಒನ್ ಇಂಡಿಯಾಕ್ಕೆ ಆತ ಈ ಬೋರ್ಡಿನ ಬರಹವನ್ನು ತನ್ನದೇ ಧಾಟಿಯಲ್ಲಿ ಸಮರ್ಥಿಸಿಕೊಂಡಿದ್ದಾನೆ.

Please don't call me Anna says a Fruit vendor at Manipal

ಅಂದಹಾಗೆ, ಈತ ಮಣಿಪಾಲ ಟೈಗರ್ ಸರ್ಕಲ್ ಬಳಿ ಇರುವ ಹಣ್ಣು ವ್ಯಾಪಾರಿ. ತಾನು ಹಾಕಿರುವ ಈ ಬೋರ್ಡಿನ ಬಗ್ಗೆ ಹೇಳುವ ಈತ, ನಾವು ನಮ್ಮ ಗ್ರಾಹಕರಿಗೆ ಯಾವುದೇ ಒಡಹುಟ್ಟಿದವರಲ್ಲ. ಹಾಗಿದ್ದ ಮೇಲೆ ಅದೇಕೆ ನನ್ನನ್ನು ಅಣ್ಣಾ ಅಂತ ಕರೀಬೇಕು ಅನ್ನೋದು ಈತನ ಮೊದಲ ಪ್ರಶ್ನೆ!

ಆದರೆ, ಅಣ್ಣಾ ಅನ್ನುವ ಪದ ಗೌರವ ಸೂಚಕವಲ್ಲವೇ ಎಂಬ ಮಾತನ್ನು ಈತ ಒಪ್ಪಿಕೊಳ್ಳುವುದಿಲ್ಲ. "ಕೆಲವರು ಅಣ್ಣಾ ಎಂಬ ಪದದ ಅರ್ಥ ತಿಳಿಯದೆ ಸಂಬೋಧಿಸುತ್ತಾರೆ . ಇದಲ್ಲದೆ ಕೆಲ ಹುಡುಗಿಯರು ಕನ್ನಡ ಮಾತನಾಡಲು ಬಾರದಿದ್ದರೂ ಅಣ್ಣಾ ಎಂಬ ಪದವನ್ನು ಅಪಭ್ರಂಶಗೊಳಿಸುತ್ತಾರೆ. ''ಅಣ್ಣಾ'' ಪದದ ಸಾರ ಹಾಳು ಮಾಡುತ್ತಾರೆ. ಹಾಗಾಗಿ, ನಾನು ಎಂದಿಗೂ ಅಣ್ಣಾ ಎಂದು ಕರೆಯಿಸಿಕೊಳ್ಳಲು ಬಯಸುವುದಿಲ್ಲ'' ಎನ್ನುತ್ತಾರೆ.

ಹಾಗಾದರೆ ನಿಮ್ಮನ್ನು ಹೇಗೆ ಕರೆಯಬೇಕು ಎಂದು ಪ್ರಶ್ನಿಸಿದಾಗ , "ನೀವು ಬ್ಯಾಂಕುಗಳು, ಸರ್ಕಾರಿ ಕಚೇರಿಗಳು ಅಥವಾ ಸಂಸ್ಥೆಗಳನ್ನು ಭೇಟಿ ಮಾಡಿದ್ದರೆ ನೀವು ಅವರನ್ನು ಏನೆಂದು ಕರೆಯುತ್ತೀರಿ ? ಸರ್ ಎಂದು ಕರೆಯುತ್ತೀರಲ್ಲವೇ ? ಹಾಗೇ ನನ್ನನ್ನೂ ಕರೆಯಬೇಕು. ನಾವು ಸ್ವಾಭಿಮಾನಿಗಳು, ಸ್ವಾವಲಂಬಿ ವ್ಯಕ್ತಿಗಳು ಹಾಗಾಗಿ ನಾವು ಸರ್ ಎಂಬ ಗೌರವಯುತ ಪದಕ್ಕೆ ಅರ್ಹರು ಎಂದು ನಾನು ನಂಬುತ್ತೇನೆ " ಎನ್ನುತ್ತಾನೆ!

ಆದರೆ, ಈ ಎಲ್ಲಾ ವಿವರಣೆ ನಂತರ ಮತ್ತೊಂದು ಮಜಬೂತಾದ ಮತ್ತೊಂದು ಕಾರಣವನ್ನೂ ಆತ ಕೊಟ್ಟಿದ್ದಾನೆ. ಅದೇನೆಂದರೆ, ಎಲ್ಲರೂ ತನ್ನನ್ನು ಅಣ್ಣಾ, ಅಣ್ಣಾ ಅಂತ ಕರೆದರೆ, ತನ್ನನ್ನು ಮದುವೆಯಾಗೋರು ಯಾರು ಎಂಬ ಸಂಕಟವೂ ಆತನನ್ನು ಕಾಡುತ್ತದಂತೆ!!

ಈತನ ಈ ವಾದ 'ಅಣ್ಣ' ಎಂಬ ಉತ್ತರಪದದೊಂದಿಗೆ ಕಾಲ ತಳ್ಳುತ್ತಿರುವ ಕೆಲವರಲ್ಲೂ ಇಂಥ ಆಲೋಚನೆ ಹುಟ್ಟಿಸಬಹುದು. ಈತನ ವಾದವನ್ನು ಗಂಭೀರವಾಗಿ ತೆಗೆದುಕೊಳ್ಳುವುದಾದರೆ, ರೇವಣ್ಣ, ಸೂರಣ್ಣ ಮುಂತಾದ ಹೆಸರುಗಳನ್ನಿಟ್ಟುಕೊಂಡವರು ಮತ್ತೊಮ್ಮೆ ಯೋಚಿಸುವುದೊಳಿತು!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A fruit merchant in Manipal, displays a notice board and requests his customers not to call him as 'anna' (brother).
Please Wait while comments are loading...