ಮಣಿಪಾಲ್ ಸಂಸ್ಥೆ ಅಕ್ರಮ: ಸಾವಿರಾರು ಕೋಟಿ ದಂಡ
ಮಣಿಪಾಲ್, ಜೂ.25: ಶೈಕ್ಷಣಿಕ ಉದ್ದೇಶಕ್ಕಾಗಿ ಸರಕಾರ ಕೊಟ್ಟ ಭೂಮಿಯನ್ನು ದುರುಪಯೋಗ ಮಾಡಿದ ಆರೋಪದ ಮೇಲೆ ಮಣಿಪಾಲ್ ಸಂಸ್ಥೆಗೆ ಸಾವಿರಾರು ಕೋಟಿ ರೂ ದಂಡ ವಿಧಿಸಲಾಗಿದೆ. ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಂಡ ಕೆಎಂಸಿಗೆದಂಡ ವಿಧಿಸಿ ಗುರುವಾರ ಆದೇಶ ದೊರಡಿಸಿದವರು ಉಡುಪಿ ಜಿಲ್ಲಾಧಿಕಾರಿ ಆರ್ ವಿಶಾಲ್.
ಉಡುಪಿಯಲ್ಲಿರುವ ಮಣಿಪಾಲ್ ಸಂಸ್ಥೆಗೆ ಸೇರಿರುವ ವಿದ್ಯಾರ್ಥಿ ನಿಲಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಆರ್ ಟಿಐ ಅರ್ಜಿ ಸಲ್ಲಿಸಲಾಗಿತ್ತು. ಸುಮಾರು 17 ಅಂತಸ್ತಿನ ಕಟ್ಟಡ ಅಕ್ರಮವಾಗಿ ನಿರ್ಮಿಸಿದ್ದು, ಈ ಕಟ್ಟಡದಲ್ಲಿ ಎನ್ನಾರೈ ಲೇಡಿಸ್ ಹಾಸ್ಟೆಲ್ ಇದೆ. ಈ ವಿವಾದಿತ ಭೂಮಿ ಗ್ರೀನ್ ಬೆಲ್ಟ್ ನಲ್ಲಿದೆ ಎಂದು ಆರ್ ಟಿಐ ಕಾಯಕರ್ತ ಯೋಗೇಶ್ ಶೇಠ್ ಆರೋಪಿಸಿದ್ದಾರೆ.
ಅಕ್ರಮ ಬಯಲಾಗಿದ್ದು ಹೇಗೆ?: ಆರ್ ಟಿಐ ಅರ್ಜಿ ಮೊದಲಿಗೆ ಕಂದಾಯ ಇಲಾಖೆ ತಲುಪಿದೆ. ಕಂದಾಯ ಇಲಾಖೆ ಕೆಎಂಸಿಗೆ ಸರ್ಕಾರದಿಂದ ಮಂಜೂರಾದ ಭೂಮಿಯ ದಾಖಲೆ ಪರಿಶೀಲಿಸಿದೆ.
ಅದರಂತೆ, 1968ನೇ ಇಸವಿಯಲ್ಲಿ ಆಗಿನ ಸರ್ಕಾರ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಭೂಮಿಯನ್ನು ನೀಡಲಾಗಿತ್ತು. ಅದರೆ, ಕೆಎಂಸಿಗೆ ಮಂಜೂರಾದ 200 ಎಕರೆ ಭೂಮಿಯಲ್ಲಿ ಸುಮಾರು 68 ಎಕರೆ ಮಾತ್ರ ಶೈಕ್ಷಣಿಕ ಉದ್ದೇಶಕ್ಕೆ ಬಳಸಿಕೊಂಡು ಮಿಕ್ಕ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಉಪಯೋಗಿಸಿದ್ದಾರೆ.
ಈ ಕಟ್ಟಡಕ್ಕೆ 2011 ಉಡುಪಿ ಪುರಸಭೆ (ಬಿಜೆಪಿ ಸರ್ಕಾರವಿದ್ದ ಕಾಲ) ಅನುಮತಿ ನೀಡಿತ್ತು. ಕಟ್ಟಡ ನಿರ್ಮಾಣದಲ್ಲಿ ನಿಯಮಗಳನ್ನು ಮೀರಲಾಗಿದೆ ಎಂದು 2014ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಪುರಸಭೆ ಎರಡು ಬಾರಿ ನೋಟಿಸ್ ಜಾರಿ ಮಾಡಿತ್ತು. ಲೈಸನ್ಸ್ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಅದರೆ, ಯಾವುದಕ್ಕೂ ಮಣಿಪಾಲ್ ಸಂಸ್ಥೆ ಪ್ರತಿಕ್ರಿಯಿಸಿರಲಿಲ್ಲ.
ಈಗ ಆರೋಪದ ಬಗ್ಗೆ ಕಂದಾಯ ಇಲಾಖೆ ಕ್ರಮ ಜರುಗಿಸುವ ಮುನ್ನ ಉಡುಪಿ ಜಿಲ್ಲಾಧಿಕಾರಿಗಳಿಗೆ ವಿವರಣೆ ನೀಡಿದೆ. ನಂತರ ಜಿಲ್ಲಾಧಿಕಾರಿ ಆರ್ ವಿಶಾಲ್ ಅವರು 1,123 ಕೋಟಿ ರು ದಂಡ ವಿಧಿಸಿದ್ದಾರೆ.