ದೇವೇಗೌಡರ ಹೊಗಳಿದ ಮೋದಿ: ಡಿಕೆಶಿ ಹೇಳಿದ್ದೇನು?
ಉಡುಪಿ, ಮೇ 02: ಮೋದಿ ಅವರು ದೇವೇಗೌಡ ಅವರನ್ನು ಹೊಗಳಿದ್ದಾರೆ ಬೇಕಿದ್ದರೆ ಅಮಿತ್ ಶಾ ಅವರು ಕೂಡಾ ಹೊಗಳಲಿ ಆದರೆ ದೇವೇಗೌಡ ಅವರು ಬಿಜೆಪಿ ಜೊತೆ ಮೈತ್ರಿ ಇಲ್ಲ ಎಂಬ ಮನದ ಮಾತನ್ನು ಹೇಳಿಬಿಟ್ಟಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ದೇವೇಗೌಡ ಅವರು ಮೊದಲಿನಿಂದಲೂ ಬಿಜೆಪಿಯೊಂದಿಗೆ ಅಂತರವನ್ನು ಕಾಯ್ದುಕೊಂಡು ಬಂದಿದ್ದಾರೆ' ಎಂದರು.
ಮೋದಿ ಮಾತ್ರವೇ ಅಲ್ಲ ಅಮಿತ್ ಶಾ ಅವರು ಕೂಡಾ ಬೇಕಾದರೆ ದೇವೇಗೌಡ ಅವರನ್ನು ಹೊಗಳಲಿ ಅದು ಅವರ ಅಂತರಂಗದ ಇಷ್ಟ ಬಹಿರಂಗ ವಿಚಾರ ಮಾತ್ರ ಲೆಕ್ಕಕ್ಕೆ ಇಟ್ಟುಕೊಳ್ಳಬೇಕು, ಅಂತರಂಗದ ವಿಚಾರ ಗೌಪ್ಯವಾಗಿಯೇ ಇರುತ್ತದೆ' ಎಂದು ಬಿಜೆಪಿಯ ಹೊಗಳು ಸಂಸ್ಕೃತಿ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ಕೃಷ್ಣ ಮಠಕ್ಕೆ ಭೇಟಿ ನೀಡಿದುದರ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ವೈಯಕ್ತಿಕವಾಗಿ, ಪಕ್ಷದ ಪರವಾಗಿ, ಸರ್ಕಾರದ ಪರವಾಗಿ ಮಠಕ್ಕೆ ಬಂದಿದ್ದೇನೆ. ಕೃಷ್ಣ ಅದ್ಬುತ ರಾಜಕಾರಣಿ, ಆತ ನನಗೆ ಆದರ್ಶ, ನನ್ನ ಮತ್ತು ಆತನ ನಡುವಿನ ವ್ಯವಹಾರ ನಮ್ಮಿಬ್ಬರಿಗೆ ಮಾತ್ರವೇ ಗೊತ್ತಿರುವಂತಹದು ಎಂದು ಮಾರ್ಮಿಕವಾಗಿ ಮಾತನಾಡಿದರು.
ಈ ಬಾರಿ ಧರ್ಮಕ್ಕೂ ಅಧರ್ಮಕ್ಕೂ ಯುದ್ಧ ನಡೆದಿದೆ, ನಮ್ಮದು ಧರ್ಮ ಬಿಜೆಪಿಯದ್ದು ಅಧರ್ಮ ಎಂದ ಡಿಕೆಶಿವಕುಮಾರ್, ಸಿದ್ದರಾಮಯ್ಯ ಅವರು ಮಠಕ್ಕೆ ಬಂದಿಲ್ಲ ಎನ್ನುವುದು ನಿಜ ಅದು ಅವರ ವೈಯಕ್ತಿಕ ನಂಬಿಕೆಯ ವಿಚಾರ ಆದರೆ ಅವರು ಮುಜರಾಯಿ ಇಲಾಖೆಯನ್ನು ಬಲಿಷ್ಠ ಮಾಡಿದ್ದಾರೆ ಎಂದರು.
ಈ ಬಾರಿ ಕಾಂಗ್ರೆಸ್ 130 ಸೀಟುಗಳನ್ನು ಅನಾಯಾಸವಾಗಿ ಗೆಲ್ಲಲಿದೆ ಎಂಬ ಭರವಸೆ ವ್ಯಕ್ತಪಡಿಸಿದ ಅವರು, ಬಿಜೆಪಿ ನಿರಂತರವಾಗಿ ಕಾಂಗ್ರೆಸ್ಸಿಗರ ಮೇಲೆ ಐಟಿ ದಾಳಿ ಮಾಡಿ ಅವರನ್ನು ಮಟ್ಟ ಹಾಕುವ ಪ್ರಯತ್ನ ಮಾಡುತ್ತಿದೆ ಎಂದರು.











Click it and Unblock the Notifications