Tiptur Copra Price: ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿ ಧಾರಣೆ 3,500 ರೂಪಾಯಿನಷ್ಟು ಕುಸಿತ: ಪ್ರಸ್ತುತ ದರ

Copra Price: ಕಲ್ಪತರು ನಾಡು ಅಂತಲೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ದಿಢೀರ್ ಕುಸಿತ ಕಂಡಿದೆ. ಅದರಲ್ಲೂ ಇದೀಗ ಹಬ್ಬದ ಸೀಸನ್ ವೇಳೆಯೇ ದರ ಇಳಿಕೆಯಾಗಿರುವುದು ಬೆಳೆಗಾರರನ್ನು ಆತಂಕಕ್ಕೆ ಒಳಗಾಗಿಸಿದೆ.

ಪ್ರಸಿದ್ಧ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ಧಾರಣೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು, ಕಲ್ಪತರು ನಾಡಿನ ತೆಂಗು ಬೆಳೆಗಾರರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆಯಲ್ಲಿ ಬರೋಬ್ಬರಿ 3,500 ರೂಪಾಯಿನಷ್ಟು ಕುಸಿತವಾಗಿದೆ.

Tiptur Copra Price Rate Crashes by 3 500 per Quintal Ahead of Deepavali Dasara festival in State

ಕೊಬ್ಬರಿ ಧಾರಣೆ ಕುಸಿತ

ಆಗಸ್ಟ್ ಕೊನೆಯ ವಾರದಲ್ಲಿ ಕ್ವಿಂಟಾಲ್‌ಗೆ ₹30,000 ರಿಂದ ₹31,500 ವರೆಗೆ ಮಾರಾಟವಾಗಿದ್ದ ಕೊಬ್ಬರಿ, ಸೆಪ್ಟೆಂಬರ್ ಮೂರನೇ ವಾರದ ವೇಳೆಗೆ ₹28,000 ರಿಂದ ₹29,800ರ ಆಸುಪಾಸಿಗೆ ಇಳಿದಿತ್ತು. ಅಕ್ಟೋಬರ್ ಮೊದಲ ವಾರದಲ್ಲಿ ಬೆಲೆ ಇನ್ನಷ್ಟು ಕುಸಿದಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ₹27,000 ರಿಂದ ₹29,000ರ ದರದಲ್ಲಿ ಮಾರಾಟವಾಗುತ್ತಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ತಿಪಟೂರು ಮಾರುಕಟ್ಟೆಯಲ್ಲಿ ಪ್ರತಿ ಸೋಮವಾರ ಮತ್ತು ಗುರುವಾರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಸತತ ಬೆಲೆ ಇಳಿಕೆಯಿಂದ ಬೇಸತ್ತಿರುವ ರೈತರು ಮಾರುಕಟ್ಟೆಗೆ ಕೊಬ್ಬರಿ ತರುವುದನ್ನೇ ಕಡಿಮೆ ಮಾಡಿದ್ದಾರೆ. ಮತ್ತೊಂದೆಡೆ ಮುಂದಿನ ದಿನಗಳಲ್ಲಾದರೂ ಏರಿಕೆಯಾಗಲಿದೆ ಎನ್ನುವ ಭರವಸೆಯಲ್ಲಿದ್ದಾರೆ.

ದರ ಕುಸಿತಕ್ಕೆ ಪ್ರಮುಖ ಕಾರಣ ಏನು?

ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳನ್ನು ನೀಡಿರುವ ತಿಪಟೂರಿನ ಶ್ರೀರಂಗನಾಥ ತೆಂಗು ಉತ್ಪಾದಕರ ಸಂಘದ ಅಧ್ಯಕ್ಷ ಶಂಕರಮೂರ್ತಿ ಅವರು, 'ಒಂದೂವರೆ ತಿಂಗಳ ಹಿಂದೆ ಕ್ವಿಂಟಾಲ್ ಕೊಬ್ಬರಿ ₹32,000ಗೆ ಮಾರಾಟವಾಗಿತ್ತು. ದಸರಾ ಮತ್ತು ದೀಪಾವಳಿ ಹಬ್ಬಗಳ ಕಾರಣಕ್ಕೆ ಧಾರಣೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಿಂದ ರೈತರು ಕೊಬ್ಬರಿಯನ್ನು ಮನೆಯಲ್ಲೇ ದಾಸ್ತಾನು ಮಾಡಿಕೊಂಡಿದ್ದಾರೆ. ಆದರೆ ತಮಿಳುನಾಡು ಹಾಗೂ ಕೇರಳದಿಂದ ಹೆಚ್ಚಿನ ಪ್ರಮಾಣದ ಕೊಬ್ಬರಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿದ್ದು, ಅಲ್ಲಿ ಕೆ.ಜಿ.ಗೆ ₹200ರಂತೆ ಅಗ್ಗದ ದರದಲ್ಲಿ ಸಿಗುತ್ತಿದೆ. ಇದು ಸ್ಥಳೀಯ ದರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ,' ಎಂದು ತಿಳಿಸಿದ್ದಾರೆ.

ಮುಂದೆ ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ನವೆಂಬರ್‌ನಲ್ಲಿ ಹೊಸ ಕೊಬ್ಬರಿ ಮಾರುಕಟ್ಟೆಗೆ ಪ್ರವೇಶಿಸಲಿದ್ದು, ಆಗ ಧಾರಣೆ ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಬೆಲೆ ಕೊಂಚ ಚೇತರಿಸಿಕೊಂಡರೂ ₹30,000ರ ಗಡಿ ದಾಟುವುದು ಅನುಮಾನ ಎನ್ನಲಾಗಿದೆ.

ರೈತರು ಎದುರಿಸುತ್ತಿರುವ ಸವಾಲುಗಳು

ರಾಜ್ಯದಲ್ಲಿ ಈ ವರ್ಷ ಪ್ರತಿಕೂಲ ಹವಾಮಾನದಿಂದಾಗಿ ತೆಂಗಿನ ಇಳುವರಿ ಶೇಕಡಾ 60ರಷ್ಟು ಕಡಿಮೆಯಾಗಿದೆ. ಕೃಷಿ ಬೆಲೆ ಆಯೋಗದ ಪ್ರತಿನಿಧಿಗಳು ಇತ್ತೀಚೆಗೆ ತಿಪಟೂರಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದಾಗ, ಜಮೀನು ಉಳುವೆ, ಗೊಬ್ಬರ, ನೀರಾವರಿ ಮತ್ತು ತೋಟದ ನಿರ್ವಹಣೆ ಸೇರಿ ಒಂದು ಕ್ವಿಂಟಾಲ್ ಕೊಬ್ಬರಿ ತಯಾರಿಸಲು ಕನಿಷ್ಠ ₹22,000 ಖರ್ಚಾಗುತ್ತದೆ ಎಂದು ಬೆಳೆಗಾರರು ಮಾಹಿತಿ ನೀಡಿದ್ದರು. ಪ್ರಸ್ತುತ ಕ್ವಿಂಟಾಲ್‌ಗೆ ₹28,000 ಸಿಕ್ಕರೂ, ಹೆಚ್ಚುತ್ತಿರುವ ಕೃಷಿ ವೆಚ್ಚ ಹಾಗೂ ಶ್ರಮಕ್ಕೆ ಹೋಲಿಸಿದರೆ ಅದು ಸೂಕ್ತ ಲಾಭ ತಂದುಕೊಡುತ್ತಿಲ್ಲ ಎಂಬುದು ರೈತರ ಅಳಲಾಗಿದೆ.

ತಿಪಟೂರು ಕೊಬ್ಬರಿಯು ಹೆಚ್ಚಿನ ಎಣ್ಣೆಯಂಶ ಹಾಗೂ ವಿಶಿಷ್ಟ ರುಚಿಗೆ ಹೆಸರಾಗಿದ್ದು, ಉತ್ತರ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತದೆ. ಸಿಹಿತಿಂಡಿಗಳ ತಯಾರಿಕೆ, ಪೂಜಾ ಸಮಾರಂಭಗಳು ಹಾಗೂ ತೆಂಗಿನ ಎಣ್ಣೆ ಉಪ-ಉತ್ಪನ್ನಗಳಿಗೆ ಇದು ವ್ಯಾಪಕವಾಗಿ ಬಳಕೆಯಾಗುತ್ತದೆ.

ಮಾರುಕಟ್ಟೆಗೆ ಪ್ರಸ್ತುತ ಸರಕಿನ ಪೂರೈಕೆ ಕಡಿಮೆ ಇದ್ದರೂ ಬೆಲೆ ಇಳಿಕೆಯಾಗಿರುವುದು ಅಚ್ಚರಿ ಮೂಡಿಸಿದೆ. ಆದರೆ ದೀಪಾವಳಿ ಹಬ್ಬದ ಸನಿಹದಲ್ಲಿ ಉತ್ತರ ಭಾರತದಿಂದ ಬೇಡಿಕೆ ಹೆಚ್ಚಾಗಿ, ಬೆಲೆ ಮರಳಿ ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆಯನ್ನು ಸ್ಥಳೀಯ ಕೊಬ್ಬರಿ ವರ್ತಕ ಶಿವಕುಮಾರ್ ವ್ಯಕ್ತಪಡಿಸಿದ್ದಾರೆ. ಇವರು ಹೇಳಿರುವಂತೆ ಮುಂದಿನ ದಿನಗಳಲ್ಲಿ ಧಾರಣೆ ಏರಿಕೆಯಾಗಲಿದ್ಯಾ ಎಂದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+