SSLC: ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವಾಗ ಅಸ್ವಸ್ಥಗೊಂಡು ವಿದ್ಯಾರ್ಥಿ ಸಾವು
ತುಮಕೂರು, ಮಾರ್ಚ್ 26: ಪರೀಕ್ಷೆ ಬರೆಯುತ್ತಿದ್ದ ವೇಳೆ ಅಸ್ವಸ್ಥಗೊಂಡು ಎಸ್ಎಸ್ಎಲ್ಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಚಿಕ್ಕರಾಂಪುರ ನಿವಾಸಿ ಸಿದ್ದೇಶ್ ಅವರ ಮಗ ಮೋಹನ್ ಕುಮಾರ್ ಸಿ.ಎಸ್ (16) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ತುರುವೇಕೆರೆ ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಸರಸ್ವತಿ ಬಾಲಕರ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಮೋಹನ್ ಕುಮಾರ್ ಅಸ್ವಸ್ಥಗೊಂಡಿದ್ದಾನೆ. ನೋಡನೋಡುತ್ತಿದ್ದಂತೆ ಬಾಲಕ ಕುಸಿದು ಬಿದ್ದಿದ್ದಾನೆ. ಕೂಡಲೇ ಕೊಠಡಿ ನಿರೀಕ್ಷಕರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ದುರದೃಷ್ಟವಶಾತ್ ಮೋಹನ್ ಕುಮಾರ್ ಸಿ.ಎಸ್ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಚಿಕ್ಕರಾಂಪುರ ನಿವಾಸಿ ಸಿದ್ದೇಶ್ ಅವರ ಮಗ ಮೋಹನ್ ಕುಮಾರ್ ತುರುವೇಕೆರೆ ತಾಲೂಕಿನ ಲೋಕಮ್ಮನಹಳ್ಳಿ ಗೇಟ್ ಬಳಿಯಿರುವ ಶ್ರೀ ಕಂಚಿರಾಯ ಸನಿವಾಸ ಪ್ರೌಢ ಶಾಲೆಯಲ್ಲಿ 10 ತರಗತಿ ಓದುತ್ತಿದ್ದ. ನಿನ್ನೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾದ ಹಿನ್ನೆಲೆಯಲ್ಲಿ ತುರುವೇಕೆರೆ ಪಟ್ಟಣದ ಸರಸ್ವತಿ ಬಾಲಕರ ಪ್ರೌಢ ಶಾಲೆಗೆ ಬಂದಿದ್ದಾನೆ.
ಪರೀಕ್ಷೆ ಬರೆಯುತ್ತಿದ್ದ ವೇಳೆಯೇ ಮೋಹನ್ ಕುಮಾರ್ ಅಸ್ವಸ್ಥಗೊಂಡಿದ್ದು, ಮೊದಲು ಸಮೀಪದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಆದರೆ ಅಂಬ್ಯುಲೆನ್ಸ್ನಲ್ಲಿ ತುಮಕೂರು ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ ಕೊನೆಯುಸಿರೆಳೆದಿದ್ದಾನೆ. ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಮುಂದಿನ ವಿದ್ಯಾಭ್ಯಾಸ ಆಯ್ಕೆಯ ಸಿದ್ಧತೆಯಲ್ಲಿದ್ದ ಮಗನ ಸಾವು ಕುಟುಂಬಸ್ಥರಿಗೆ ಆಘಾತ ತಂದಿದೆ.
ರಸ್ತೆ ದಾಟುವ ವೇಳೆ ಬಾಲಕಿ ಸಾವು
ನಿನ್ನೆ ಮಾರ್ಚ್(25) ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿನಿ ಅಪಘಾತದಲ್ಲಿ ಸಾವನ್ನಪ್ಪಿರುವಂತಹ ಘಟನೆ ಶಿವಮೊಗ್ಗ ತಾಲೂಕಿನ ಮೂಡಲವಿಠಲಾಪುರ ಗ್ರಾಮದಲ್ಲಿ ಅಪಘಾತದಲ್ಲಿ ನಡೆದಿದೆ. ಜಂಬರಘಟ್ಟ ಗ್ರಾಮದ ನಿವಾಸಿ ಉಮ್ಮೆ ಕೂಲ್ಸುಂ (14) ಮೃತ ವಿದ್ಯಾರ್ಥಿ. ರಸ್ತೆ ದಾಟುವ ವೇಳೆ ವಿದ್ಯಾರ್ಥಿಗೆ ಕಾರು ಡಿಕ್ಕಿ ಹೊಡೆದಿದ್ದು, ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications