ಕೇರಳದಲ್ಲಿ ಕೋವಿಡ್ -19 ಆರ್ಭಟ; ಒಂದೇ ದಿನ 152 ಪ್ರಕರಣ
ತಿರುವನಂತಪುರಂ, ಜೂನ್ 24 : ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಮತ್ತೆ ಆರ್ಭಟಿಸುತ್ತಿದೆ. ಒಂದೇ ದಿನ 152 ಹೊಸ ಪ್ರಕರಣ ದಾಖಲಾಗಿದೆ. ಕೇರಳ ಪಕ್ಕದ ತಮಿಳುನಾಡು ಮತ್ತು ಕರ್ನಾಟಕದಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.
ಕೇರಳ ರಾಜ್ಯದಲ್ಲಿ ಬುಧವಾರ 152 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಕಳೆದ 6 ದಿನಗಳಿಂದ ರಾಜ್ಯದಲ್ಲಿ ನಿರಂತರವಾಗಿ 100ಕ್ಕೂ ಅಧಿಕ ಹೊಸ ಪ್ರಕರಣ ಪತ್ತೆಯಾಗುತ್ತಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,691.

ರಾಜ್ಯದಲ್ಲಿ ಇಂದು ಪತ್ತೆಯಾದ ಪ್ರಕರಣಗಳಲ್ಲಿ 98 ಜನರು ವಿದೇಶದಿಂದ ವಾಪಸ್ ಆದವರು. 46 ಜನರು ಬೇರೆ ರಾಜ್ಯದಿಂದ ಕೇರಳಕ್ಕೆ ಬಂದವರು. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,603ಕ್ಕೆ ಏರಿಕೆಯಾಗಿದೆ.
ತಮಿಳುನಾಡು : ಇನ್ನೂ ಕೇರಳ ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಬುಧವಾರ 33 ಜನರು ಮೃತಪಟ್ಟಿದ್ದು, 2865 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 67,000ದ ಗಡಿ ದಾಟಿದೆ. ಒಟ್ಟು ಸೋಂಕಿತರ ಸಂಖ್ಯೆ 67,468.
ಕರ್ನಾಟಕ : ಕೇರಳದ ಪಕ್ಕದ ಇನ್ನೊಂದು ರಾಜ್ಯ ಕರ್ನಾಟಕ. ಬುಧವಾರ ರಾಜ್ಯದ್ಲಲಿ 397 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. 14 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,118 ಮತ್ತು ಮೃತಪಟ್ಟವರ ಸಂಖ್ಯೆ 164.












Click it and Unblock the Notifications