ಅಬುಧಾಬಿಯಲ್ಲಿ 24 ಕೋಟಿ ರೂ. ಲಕ್ಕಿ ಡ್ರಾ ಗೆದ್ದ ಕೇರಳ ಮೂಲದ ವ್ಯಕ್ತಿ
ಅಬುಧಾಬಿ, ಡಿಸೆಂಬರ್ 4: ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಡ್ರಾದಲ್ಲಿ ಕೇರಳಿಯೊಬ್ಬರು 1.2 ಕೋಟಿ ದಿರ್ಹಾಮ್ (ಅಂದಾಜು 24.15 ಕೋಟಿ ರೂ.) ಪ್ರಥಮ ಬಹುಮಾನವನ್ನು ಗೆದ್ದಿದ್ದಾರೆ.
ಕೇರಳದ ಕೊಟ್ಟಾಯಂ ಮೂಲದ ಜಾರ್ಜ್ ಜಾಕೋಬ್ ಅವರಿಗೆ ಗುರುವಾರ ಈ ಜಾಕ್‌ಪಾಟ್ ಹೊಡೆದಿದ್ದು, ಅವರ ಲಕ್ಕಿ ಡ್ರಾ ಟಿಕೆಟ್ ಸಂಖ್ಯೆ 069402 ಆಗಿದೆ.
ಕಳೆದ 20 ವರ್ಷಗಳಿಂದ ಯುಎಇಯಲ್ಲಿ ನೆಲೆಸಿರುವ ಜಾರ್ಜ್ ಜಾಕೋಬ್ ಕುಟುಂಬ ದುಬೈ ಒಮೆಗಾ ಮೆಡಿಕಲ್ಸ್‌ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಲಕ್ಕಿ ಡ್ರಾ ಬಹುಮಾನದ ಬಗ್ಗೆ ಮಾತನಾಡಿರುವ ಜಾರ್ಜ್ ಜಾಕೋಬ್, "ನಾನು ಕಳೆದ ಎರಡು ವರ್ಷಗಳಿಂದ ನನ್ನ ಸ್ನೀಹಿತರೊಂದಿಗೆ ಬಿಗ್ ಟಿಕೆಟ್ ಖರೀದಿಸುತ್ತಿದ್ದೇನೆ, ಆದರೆ ನಾನು ಒಬ್ಬನೇ ಖರೀದಿಸಿದ ಟಿಕೆಟ್ ಗೆ ಬಹುಮಾನವನ್ನು ಗೆದ್ದಿದ್ದೇನೆ. ಈ ಗೆಲುವು ನನ್ನ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಪ್ರಾರ್ಥನೆಯ ಫಲಿತಾಂಶವಾಗಿದೆ' ಎಂದು ಹೇಳಿದ ಅವರು, "ನಾನು ಈಗ ಕೋಟಿಪತಿಯಾಗಿದ್ದರೂ, ನಾನು ಯುಎಇಯನ್ನು ಬಿಡುವುದಿಲ್ಲ' ಎಂದು ಜಾರ್ಜ್ ತಿಳಿಸಿದರು.
ಬಹುಮಾನದ ಹಣವನ್ನು ಹೇಗೆ ಖರ್ಚು ಮಾಡುವುದು ಎಂಬುದರ ಕುರಿತು ತಮ್ಮ ಕುಟುಂಬದೊಂದಿಗೆ ಚರ್ಚಿಸುವುದಾಗಿ ಹೇಳಿದ ಜಾರ್ಜ್, "ನಾನು ಹಲವಾರು ಕಷ್ಟಗಳನ್ನು ಎದುರಿಸುತ್ತಾ ಬೆಳೆದಿದ್ದೇನೆ, ದಾನ ಕಾರ್ಯಗಳಿಗಾಗಿ ಬಹುಮಾನದ ಹಣದ ಪಾಲನ್ನು ಬದಿಗಿರಿಸುತ್ತೇನೆ' ಎಂದರು.
ಜಾರ್ಜ್ ಅವರ ಪತ್ನಿ ಬಿಜಿ ರಶೀದ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ದಂಪತಿಗಳೊಂದಿಗೆ ಮಕ್ಕಳಾದ ಡಾಲಿಯಾ ಮತ್ತು ಡ್ಯಾನಿ ಜಾರ್ಜ್ ಕೂಡಾ ದುಬೈನಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚಿನ ಇಂತಹ ಬಿಗ್ ಟಿಕೆಟ್‌ನಲ್ಲಿ ಇನ್ನೂ ಮೂರು ಕೇರಳಿಗರು ಇತರ ಬಹುಮಾನಗಳನ್ನು ಗೆದ್ದಿದ್ದಾರೆ ಎನ್ನುವುದು ವಿಶೇಷವಾಗಿದೆ.












Click it and Unblock the Notifications