Breaking News: ಕೇರಳದಲ್ಲಿ ಓಣಂ ಹಬ್ಬದ ಮರುದಿನವೇ 31,445 ಮಂದಿಗೆ ಕೊರೊನಾವೈರಸ್!
ತಿರುವನಂತಪುರಂ, ಆಗಸ್ಟ್ 25: ಕೇರಳದಲ್ಲಿ ಓಣಂ ಹಬ್ಬದ ಆಚರಣೆ ಬೆನ್ನಲ್ಲೇ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.30ರಷ್ಟು ಏರಿಕೆ ಕಂಡು ಬಂದಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಒಂದೇ ದಿನ 31,445 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾವೈರಸ್ ಸೋಂಕಿಗೆ 215 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 19,972ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ ಒಂದು ದಿನದಲ್ಲಿ 1,65,273 ಮಂದಿಗೆ ಕೊವಿಡ್-19 ಸೋಂಕಿನ ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರವು ಶೇ.19.3ರಷ್ಟಿದೆ.
ಆಗಸ್ಟ್ 23ರ ಓಣಂ ಹಬ್ಬದ ದಿನ ಕೇರಳದಲ್ಲಿ 17,106 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 83 ಮಂದಿ ಸೋಂಕಿನಿಂದ ಮೃತಪಟ್ಟಿದ್ದರು. ಅಂದು ರಾಜ್ಯದಲ್ಲಿ ಕೊರೊನಾವೈರಸ್ ಪಾಸಿಟಿವಿಟಿ ದರ ಶೇ.17.73ರಷ್ಟಿತ್ತು. ಮಂಗಳವಾರ ಪಾಸಿಟಿವಿಟಿ ದರವು 18.04ಕ್ಕೆ ಏರಿಕೆಯಾಗಿತ್ತು.

ಕೇರಳದಲ್ಲಿ ಕೊವಿಡ್-19 ಮಾರ್ಗಸೂಚಿಗಳ ನಿರ್ಲಕ್ಷ್ಯ:
ರಾಜ್ಯದಲ್ಲಿ ಓಣಂ ಹಬ್ಬದ ಹಿನ್ನೆಲೆ ಪ್ರಮುಖ ಮಾರುಕಟ್ಟೆಗಳಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಸಾಮಾಜಿಕ ಅಂತರವನ್ನು ಮರೆತು ಜನರು ನೆರೆದಿದ್ದು, ಮಾಸ್ಕ್ ಧರಿಸದೇ ಕೊವಿಡ್-19 ನಿಯಮಗಳನ್ನು ಉಲ್ಲಂಘಿಸಿರುವುದು ಇಂದಿನ ಪರಿಸ್ಥಿತಿ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ ವರ್ಷವಷ್ಟೇ ಇದೇ ಕೇರಳ ಕೊರೊನಾವೈರಸ್ ನಿರ್ವಹಣೆಯಲ್ಲಿ ದೇಶದಲ್ಲೇ ಸೈ ಎನಿಸಿಕೊಂಡಿತ್ತು. ಕೊವಿಡ್-19 ಸೋಂಕು ಹರಡುವಿಕೆ ಭೀತಿಯಲ್ಲಿ ಕಳೆದ ವರ್ಷ ಕೂಡ ಕಟ್ಟುನಿಟ್ಟಿನ ನಿಮಯಗಳನ್ನು ಜಾರಿಗೊಳಿಸಲಾಗಿತ್ತು.
2020ರಲ್ಲೂ ಇದೇ ಪರಿಸ್ಥಿತಿ ನಿರ್ಮಾಣ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕು ನಿಯಂತ್ರಿಸಿದ ಕೇರಳ ಇಡೀ ದೇಶಕ್ಕೆ ಮಾದರಿ ಎನಿಸಿಕೊಂಡಿತ್ತು. 2020ರ ಓಣಂ ಹಬ್ಬದ ನಂತರದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿತ್ತು.












Click it and Unblock the Notifications