ಚಿಂತೆ ಬಿಡಿ: ಭಾರತದ ಮೊದಲ ಮಂಕಿಪಾಕ್ಸ್ ರೋಗಿ ಗುಣಮುಖ
ತಿರುವನಂತಪುರಂ, ಜುಲೈ 30: ಭಾರತದ ಮೊದಲ ಮಂಕಿಪಾಕ್ಸ್ ರೋಗಿಗೆ ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನೀಡಿದ ಚಿಕಿತ್ಸೆ ಯಶಸ್ವಿಯಾಗಿದ್ದು, ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಕೇರಳದ ಕೊಲ್ಲಂ ಮೂಲದ 35 ವರ್ಷದ ವ್ಯಕ್ತಿಯನ್ನು ಶನಿವಾರದ ನಂತರ ಡಿಸ್ಚಾರ್ಜ್ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಇದು ದೇಶದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಸೋಂಕಿತ ಪ್ರಕರಣವಾಗಿದ್ದು ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ಸೂಚನೆಯಂತೆ 72 ಗಂಟೆಗಳ ಮಧ್ಯಂತರದಲ್ಲಿ ಎರಡು ಬಾರಿ ಪರೀಕ್ಷೆ ನಡೆಸಲಾಯಿತು.
"ಎಲ್ಲ ಮಾದರಿಗಳು ಎರಡು ಬಾರಿ ನೆಗೆಟಿವ್ ಎಂದು ಬಂದಿವೆ. ರೋಗಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದಾರೆ. ಚರ್ಮದ ಉಬ್ಬುಗಳು ಸಂಪೂರ್ಣವಾಗಿ ಗುಣಮುಖವಾಗಿವೆ. ಇಂದು ಸೋಂಕಿನಿಂದ ಚೇತರಿಸಿಕೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ," ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ರೋಗಿಯ ಸಂಬಂಧಿಕರ ವೈದ್ಯಕೀಯ ವರದಿಯೂ ನೆಗೆಟಿವ್
ಮಂಕಿಪಾಕ್ಸ್ ರೋಗಿಯ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಅವರ ಕುಟುಂಬ ಸದಸ್ಯರನ್ನು ಸಹ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ಅವರಲ್ಲೂ ಯಾವುದೇ ರೋಗದ ಲಕ್ಷಣಗಳು ಕಂಡು ಬಂದಿಲ್ಲ. ಅಲ್ಲದೇ ವೈದ್ಯಕೀಯ ಪರೀಕ್ಷಾ ವರದಿ ಸಹ ನೆಗೆಟಿವ್ ಬಂದಿದೆ ಎಂದು ಸಚಿವರು ಹೇಳಿದ್ದಾರೆ. ಪ್ರಸ್ತುತ ಇಬ್ಬರು ಸೋಂಕಿತರ ಆರೋಗ್ಯ ಸ್ಥಿತಿ ಸುಧಾರಣೆ ಕಾಣುತ್ತಿದೆ. ಈ ಸೋಂಕಿತರಿಂದ ಸೋಂಕು ಹರಡುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದ್ದು ಯಾವಾಗ?
ವಿದೇಶದಿಂದ ಕೇರಳಕ್ಕೆ ವಾಪಸಾಗಿದ್ದ ಕೊಲ್ಲಂ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ರೋಗದ ಲಕ್ಷಣಗಳು ಗೋಚರಿಸಿದ್ದವು. ಈ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಸೋಂಕಂು ತಲುಗಿರುವುದು ಖಾತ್ರಿಯಾಗಿತ್ತು. ಜುಲೈ 14ರಂದು ದೇಶದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿತು. ಅಂದೇ ಸೋಂಕಿತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಮಂಕಿಪಾಕ್ಸ್ ರೋಗಿಗಳಲ್ಲಿ ಮೈ-ಕೈ ನೋವು ಮತ್ತು ದದ್ದು
ಮಂಕಿಪಾಕ್ಸ್ ಹೊಂದಿರುವ ಸೋಂಕಿತರಲ್ಲಿ ಸಾಮಾನ್ಯವಾಗಿ ಜ್ವರ, ಮೈ-ಕೈ ನೋವು ಮತ್ತು ದದ್ದುಗಳಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಸೋಂಕಿತರಲ್ಲಿ ಬಹುಪಾಲು ಮಂದಿಯು ಒಂದು ವಾರದಲ್ಲೇ ಚೇತರಿಸಿಕೊಂಡಿದ್ದಾರೆ. 1958ರಲ್ಲಿ ಮೊದಲ ಬಾರಿಗೆ ಮಂಗಗಳಲ್ಲಿ ಈ ಸೋಂಕು ಪತ್ತೆಯಾಗಿದ್ದು, ಹೀಗಾಗಿ ಇದನ್ನು ಮಂಕಿಪಾಕ್ಸ್ ಎಂದು ಕರೆಯಲಾಗುತ್ತದೆ.

ಏನಿದು ಮಂಕಿಪಾಕ್ಸ್ ವೈರಸ್, ಯಾರಿಗೆ ಅಪಾಯ?
ಮಂಕಿಪಾಕ್ಸ್ ವೈರಸ್ ಎನ್ನುವುದು ಜನರ ನಡುವೆ ಸುಲಭವಾಗಿ ಹರಡುವುದಿಲ್ಲ, ಆದರೆ ಈ ವೈರಸ್ ಇಲಿಗಳಂತಹ ಸೋಂಕಿತ ಜೀವಿಗಳಿಂದ ಮನುಷ್ಯರಿಗೆ ಹರಡುತ್ತದೆ. ಮಂಕಿಪಾಕ್ಸ್ ಅಪರೂಪದ ಕಾಯಿಲೆಯಾಗಿದ್ದು, ಇದು ಮಂಕಿಪಾಕ್ಸ್ ವೈರಸ್ ಸೋಂಕಿನಿಂದ ಉಂಟಾಗುತ್ತದೆ. ಸೋಂಕಿತ ಪ್ರಾಣಿಯ ಕಡಿತದಿಂದ ಅಥವಾ ಅದರ ರಕ್ತ, ದೇಹದ ದ್ರವಗಳು ಅಥವಾ ತುಪ್ಪಳವನ್ನು ಸ್ಪರ್ಶಿಸುವ ಮೂಲಕ ಮಂಗನ ಕಾಯಿಲೆ ಅಂಟಿಕೊಳ್ಳಬಹುದು. ಇದು ಇಲಿಗಳು, ಇಲಿಗಳು ಮತ್ತು ಅಳಿಲುಗಳಂತಹ ದಂಶಕಗಳಿಂದ ಹರಡುತ್ತದೆ ಎಂದು ಭಾವಿಸಲಾಗಿದೆ. ಸರಿಯಾಗಿ ಬೇಯಿಸದ ಸೋಂಕಿತ ಪ್ರಾಣಿಯ ಮಾಂಸವನ್ನು ತಿನ್ನುವ ಮೂಲಕವೂ ರೋಗವು ಹರಡುವ ಸಾಧ್ಯತೆಯಿದೆ.
ಜ್ವರ, ಸ್ನಾಯು ನೋವು, ಗಾಯಗಳು ಮತ್ತು ಶೀತಗಳು ಮಾನವರಲ್ಲಿ ಮಂಗನ ಕಾಯಿಲೆಯ ಸಾಮಾನ್ಯ ಲಕ್ಷಣಗಳಾಗಿವೆ. ಮಂಕಿಪಾಕ್ಸ್‌ನ ವೈರಸ್ ಕಾವು ಕಾಲಾವಧಿಯು ಸಾಮಾನ್ಯವಾಗಿ 6 ರಿಂದ 13 ದಿನಗಳವರೆಗೆ ಇರುತ್ತದೆ. ಆದರೆ WHO ಪ್ರಕಾರ 5 ರಿಂದ 21 ದಿನಗಳವರೆಗೆ ಇರುತ್ತದೆ.












Click it and Unblock the Notifications