ಕಾಸರಗೋಡು; ವಧು, ವರ ಸೇರಿ 43 ಜನರಿಗೆ ಕೋವಿಡ್ ಸೋಂಕು
ಕಾಸರಗೋಡು, ಜುಲೈ 27: ಕಾಸರಗೋಡಿನಲ್ಲಿ ನವ ವಿವಾಹಿತರು ಸೇರಿದಂತೆ ಮದುವೆಯಲ್ಲಿ ಪಾಲ್ಗೊಂಡಿದ್ದ 43 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಪೊಲೀಸರು ವಧುವಿನ ತಂದೆಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಜುಲೈ 17ರಂದು ಕರ್ನಾಟಕ-ಕೇರಳ ಗಡಿ ಜಿಲ್ಲೆಯಾದ ಕಾಸರಗೋಡಿನಲ್ಲಿ ವಿವಾಹ ನಡೆದಿತ್ತು. ಈ ವಿವಾಹದಲ್ಲಿ ಪಾಲ್ಗೊಂಡಿದ್ದ 43 ಜನರಿಗೆ ಈಗ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ.
ಕಾಸರಗೋಡು ಜಿಲ್ಲಾಡಳಿತ ಇಷ್ಟು ಜನರಿಗೆ ಕೋವಿಡ್ ಸೋಂಕು ತಗುಲಿರುವುದನ್ನು ಖಚಿತಪಡಿಸಿದೆ. ಕೇರಳ ಸಾಂಕ್ರಾಮಿಕ ರೋಗಗಳ ಕಾಯ್ದೆ ಪ್ರಕಾರ ವಧುವಿನ ತಂದೆಯ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲು ಮಾಡಿದ್ದಾರೆ.

ವಧುವಿನ ಮನೆಯಲ್ಲಿಯೇ ವಿವಾಹ ನಡೆದಿತ್ತು. ನವ ವಧುವರ ಸೇರಿದಂತೆ ಈ ವಿವಾಹದಲ್ಲಿ ಪಾಲ್ಗೊಂಡಿದ್ದ 43 ಜನರಿಗೆ ಸೋಂಕು ತಗುಲಿದೆ. ಸೋಂಕಿನ ಮೂಲ ಯಾವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ.
ಕೇರಳದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 19,026. ಕಾಸರಗೋಡು ಜಿಲ್ಲೆಯಲ್ಲಿ 1438 ಪ್ರಕರಣಗಳಿವೆ. ಕಾಸರಗೋಡು ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ಪಕ್ಕದಲ್ಲಿಯೇ ಇದ್ದು, ಪ್ರತಿದಿನ ನೂರಾರು ಜನರು ಅಕ್ಕ-ಪಕ್ಕದ ಜಿಲ್ಲೆಗಳಿಗೆ ಸಂಚಾರ ನಡೆಸುತ್ತಾರೆ.












Click it and Unblock the Notifications