ಪುಲ್ವಾಮಾದಲ್ಲಿ ಎನ್‌ಕೌಂಟರ್: ಮೂವರು ಉಗ್ರರು ಹತ
ಶ್ರೀನಗರ, ಏಪ್ರಿಲ್ 25: ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರು ಹತರಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರದಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ.
ಯೋಧರು ಮತ್ತು ಜಮ್ಮು ಕಾಶ್ಮೀರ ಪೊಲೀಸರು ಖಚಿತ ಮಾಹಿತಿ ಪಡೆದು ಉಗ್ರರು ತಂಗಿರುವ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಅವಂತಿಪೋರಾದ ಗೋರಿಪೋರಾ ಏರಿಯಾದಲ್ಲಿ ಈ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರಿಂದ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿ ಮೂವರು ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿವೆ.
ಸ್ಥಳದಲ್ಲಿದ್ದ ಉಗ್ರರಿಂದ ಭಾರೀಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಮುಂದುವರೆದಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ. ಯೋಧರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಶುಕ್ರವಾರ ಸಿಆರ್ ಪಿಎಫ್ ಶಿಬಿರದ ಮೇಲೆ ಉಗ್ರರು ಗ್ರೆನೇಡ್ ಎಸೆದ ಘಟನೆ ಬುಡ್ಗಾಮ್ ಜಿಲ್ಲೆಯಲ್ಲಿ ನಡೆದಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ. ಈ ಘಟನೆ ನಡೆದ ಮರುದಿನವೇ ಎರಡು ಉಗ್ರರನ್ನು ಎನ್ ಕೌಂಟರ್ ಮೂಲಕ ಹತ್ಯೆಮಾಡಲಾಗಿದೆ.












Click it and Unblock the Notifications