ಕಾಶ್ಮೀರದಲ್ಲಿ ಹತ್ಯೆಯಾದ ಉಗ್ರರ ಬಳಿ ಚೀನಾ ಗ್ರನೇಡ್
ಶ್ರೀನಗರ, ಫೆಬ್ರವರಿ 01 : ಜಮ್ಮು ಮತ್ತು ಕಾಶ್ಮೀರದಲ್ಲಿ ಹತ್ಯೆಯಾದ ಉಗ್ರರ ಬಳಿ ಚೀನಾದಲ್ಲಿ ತಯಾರು ಮಾಡಲಾದ ಗ್ರನೇಡ್ ಪತ್ತೆಯಾಗಿದೆ. ಶುಕ್ರವಾರ ಮೂವರು ಜೈಷ್-ಎ-ಮೊಹಮದ್ ಉಗ್ರ ಸಂಘಟನೆಯ ಮೂವರನ್ನು ಯೋಧರು ಹತ್ಯೆ ಮಾಡಿದ್ದರು.
ಹತ್ಯೆಯಾದ ಉಗ್ರರ ಬಳಿ ಚೀನಾದಲ್ಲಿ ತಯಾರು ಮಾಡಲಾದ ಗ್ರನೇಡ್, ಗನ್, ಆರ್‌ಡಿಎಕ್ಸ್, ಡಿಟೋನೇಟರ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಉಗ್ರರು ಕಾಶ್ಮೀರಕ್ಕೆ ಎರಡು ದಿನದ ಹಿಂದೆ ಆಗಮಿಸಿದ್ದರು.
ಗುರುವಾರ ಸಂಜೆ ಖತುವಾ ತಲುಪಿದ್ದ ಉಗ್ರರು ಕಾಶ್ಮೀರಕ್ಕೆ ಬರುವ ಲಾರಿ ಹತ್ತಿಕೊಂಡು ಟೋಲ್ ಪ್ಲಾಜಾ ಬಳಿ ಬಂದಿದ್ದರು. ಶ್ರೀನಗರ ಕಡೆ ಹೊರಟಿದ್ದ ಲಾರಿ ತಡೆದು ತಪಾಸಣೆ ನಡೆಸಿದಾಗ ಯೋಧರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.

ಶ್ರೀನಗರಕ್ಕೆ ಹೋಗುವ ಹೆದ್ದಾರಿ ಸುತ್ತುವರೆದ ಯೋಧರು ಎನ್ ಕೌಂಟರ್ ನಡೆಸಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದರು. ಹತ್ಯೆಯಾದ ಉಗ್ರರ ಬಳಿ ಪಾಕಿಸ್ತಾನದಲ್ಲಿ ತಯಾರಾದ ಸ್ಯಾಟಲೈಟ್ ಫೋನ್, ಅಪಾರ ಪ್ರಮಾಣದ ಮದ್ದು, ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಮೂವರು ಉಗ್ರರ ಬಳಿಯಿಂದ ಗನ್, ಸ್ಫೋಟಕ್ಕೆ ಬಳಸುವ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪೊಲೀಸರು ಉಗ್ರರ ಗುರುತು ಪತ್ತೆಗಾಗಿ ತನಿಖೆಯನ್ನು ಮುಂದುವರೆಸಿದ್ದಾರೆ.
ಉಗ್ರರು ಆಗಮಿಸಿದ್ದ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲಕ ಸಲೀಂ ಮತ್ತು ಉಗ್ರರಿಗೂ ಹಿಂದಿನಿಂದಲೂ ನಂಟಿತ್ತು ಎಂಬ ಆರೋಪವಿದೆ. ಪುಲ್ವಾಮಾದಲ್ಲಿ ದಾಳಿ ಮಾಡಿದ ಉಗ್ರರು ಈತನ ಸಂಬಂಧಿಕರು ಎಂದು ಸಹ ಆರೋಪಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.











Click it and Unblock the Notifications