ದಾಳಿಗೂ ಎರಡು ದಿನ ಮೊದಲೇ ಎಚ್ಚರಿಕೆ ನೀಡಿತ್ತು ಆ ವಿಡಿಯೋ!
Recommended Video

ಶ್ರೀನಗರ, ಫೆಬ್ರವರಿ 15: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕ ನಡೆವ ಎರಡು ದಿನ ಮೊದಲೇ 'ತಾನು ಇನ್ನೆರಡು ದಿನದಲ್ಲಿ ಉಗ್ರದಾಳಿ ನಡೆಸುವುದಾಗಿ' ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಎಚ್ಚರಿಕೆ ನೀಡಿತ್ತು. ಹೀಗೆ ಎಚ್ಚರಿಕೆ ನೀಡಿದ ವಿಡಿಯೋವನ್ನೂ ಅದು ಆನ್ ಲೈನ್ ಮೂಲಕ ಹರಿಬಿಟ್ಟಿತ್ತು!
ಅಫಘಾನಿಸ್ತಾನದಲ್ಲಿ ನಡೆದ ಇಂಥದೇ ಘಟನೆಯ ವಿಡಿಯೋವನ್ನು ಅಪ್ಲೋಡ್ ಮಾಡಿ, ಇಂಥದೇ ಘಟನೆ ಭಾರತದಲ್ಲೂ ನಡೆಯಲಿದೆ ಎಂದು ಅದು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿತ್ತು.
ಜಮ್ಮು-ಕಾಶ್ಮೀರದ ಅಪರಾಧ ತನಿಖಾ ವಿಭಾಗದ ಅಧಿಕಾರಿಗಳು ಈ ವಿಡಿಯೋ ಮತ್ತಿತರ ಮಾಹಿತಿಯನ್ನು ಗುಪ್ತಚರ ಇಲಾಖೆಯೊಂದಿಗೆ ಹಂಚಿಕೊಂಡಿದ್ದರು. ಆದರೆ ಗುಪ್ತಚರ ಇಲಾಖೆ ಇದನ್ನು ಗಂಭಿರವಾಗಿ ತೆಗೆದುಕೊಳ್ಳದ ಕಾರಣ ಈ ಘಟನೆ ಸಂಭವಿಸಿತು ಎಂದು ಮೂಲಗಳು ಹೇಳುತ್ತಿವೆ.

ನಿರ್ಲಕ್ಷ್ಯಿಸಿದ್ದು ನಿಜವೇ?
ಇಂಥದೊಂದು ಉಗ್ರ ದಾಳಿ ನಡೆವ ಸೂಚನೆ ಸಿಕ್ಕರೂ ನಿರ್ಲಕ್ಷ್ಯ ಮಾಡಲಾಯ್ತೇ? ಭದ್ರತಾ ಇಲಾಖೆಯ ಮೂಲಗಳು ತಿಳಿಸುವಂತೆ ಈ ಸೂಚನೆ ಸಿಗುತ್ತಿದ್ದಂತೆಯೇ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಹೆಚ್ಚು ಸಮಯವಿರಲಿಲ್ಲ. ಆತ್ಮಾಹುತಿ ದಾಳಿಕೋರ ಯಾರು, ಆತನನ್ನು ತಡೆಯುವುದು ಹೇಗೆ ಎಂಬುದಕ್ಕೆ ಪರಿಹಾರ ದೊರಕಿರಲಿಲ್ಲ.

ಘಟನೆ ತಪ್ಪಿಸುವುದಕ್ಕೆ ಸಾಧ್ಯವಿತ್ತೆ?
ಈ ವಿಷಯ ತಿಳಿಯುತ್ತಿದ್ದಂತೆಯೇ ಸಿಆರ್ ಪಿಎಫ್ ವಾಹನಗಳು ಚಲಿಸುವ ಮಾರ್ಗದಲ್ಲಿ ಬಿಗಿ ಭದ್ರತೆ ಕೈಗೊಳ್ಳಲು ಯೋಜನೆ ರೂಪಿಸಲಾಗಿತ್ತು. ಆದರೆ ಇದು ಸಾಕಷ್ಟು ವಾಹನ ಸಮದಣಿ ಇರುವ ಪ್ರದೇಶವಾಗಿದ್ದರಿಂದ ಹಗಲು ಹೊತ್ತಲ್ಲಿ ಎಲ್ಲಾ ವಾಹನಗಳನ್ನೂ ತಡೆದು, ತಪಾಸಣೆ ಮಾಡುವುದು ಕಷ್ಟ. ಆದ್ದರಿಂದ ಸಂಜೆಯ ಸಮಯದಲ್ಲಿ ಸಂಚಾರ ಹೆಚ್ಚಿಲ್ಲದ ಸಮಯದಲ್ಲಿ ಸಿಆರ್ ಪಿಎಫ್ ಸಿಬ್ಬಂದಿ ಇರುವ ವಾಹನವನ್ನು ಕಳಿಸುವುದು ಎಂದು ನಿರ್ಧರಿಸಲಾಗಿತ್ತು.

ಸ್ಫೋಟಕ ಹೊತ್ತ ಕಾರಿನ ತಪಾಸಣೆ ಮಾಡಿರಲಿಲ್ಲವೇ?
ನಿರ್ಧರಿಸಿದಂತೆಯೇ ವಾಹನಗಳ ತಪಾಸಣೆ ಮಾಡಲಾಗಿತ್ತು. ಆದರೆ ಯಾವುದೇ ವಾಹನದಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿರಲಿಲ್ಲ. ಸ್ಫೋಟಕಗಳನ್ನು ಯಾರಿಗೂ ಕಾಣದಂತೆ ಕಾರಿನಲ್ಲಿ ಬಚ್ಚಿಡಲಾಗಿತ್ತೇ? ಅಥವಾ ಈ ವಾಹನ ತಪಾಸಣಾಕಾರರ ಕಣ್ಣು ತಪ್ಪಿಸಿ ಮುಂದೆ ಸಾಗಿತ್ತೆ ಎಂಬುದು ಅರ್ಥವಾಗದ ವಿಷಯ.

44 ಸೈನಿಕರು ಹುತಾತ್ಮ
ಗುರುವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರ ಎಂಬಲ್ಲಿ ತೆರಳುತ್ತಿದ್ದ ಸಿಆರ್ ಪಿಎಫ್ ವಾಹನದ ಮೇಲೆ ಆತ್ಮಾಹುತಿ ದಾಳಿಕೋರ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಡಿಕ್ಕಿ ಹೊಡೆಸಿದ ಪರಿಣಾಮ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾದರು.












Click it and Unblock the Notifications