ಅಮರನಾಥ ಮೇಘಸ್ಫೋಟ: ಮುಂದುವರೆದ ರಕ್ಷಣಾ ಕಾರ್ಯಾಚರಣೆ, ಅಮರನಾಥ ಯಾತ್ರೆ ಸ್ಥಗಿತ
ಪಹಲ್ಗಾಮ್, ಜುಲೈ 8: ಅಮರನಾಥ ಗುಹೆಯ ಕೆಳಭಾಗದಲ್ಲಿ ಶುಕ್ರವಾರ ಸಂಜೆ 5.30 ರ ಸುಮಾರಿಗೆ ಮೇಘಸ್ಫೋಟ ಸಂಭವಿಸಿದ್ದು, ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ, 40 ಮಂದಿ ನಾಪತ್ತೆಯಾಗಿದ್ದಾರೆ ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಯಾಗಿದೆ.
"ಒಂದು ಎನ್‌ಡಿಆರ್‌ಎಫ್ ತಂಡವು ಯಾವಾಗಲೂ ಪವಿತ್ರ ಗುಹೆಯ ಬಳಿ ನಿಯೋಜನೆಗೊಂಡಿರುತ್ತದೆ, ಅದು ತಕ್ಷಣ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಇನ್ನೂ ಒಂದು ತಂಡವನ್ನು ನಿಯೋಜಿಸಲಾಗಿದೆ ಮತ್ತು ಇನ್ನೊಂದು ದಾರಿಯಲ್ಲಿದೆ. ಇದುವರೆಗೆ 10 ಸಾವು ನೋವುಗಳು ವರದಿಯಾಗಿದೆ, 3 ಜನರನ್ನು ಜೀವಂತವಾಗಿ ರಕ್ಷಿಸಲಾಗಿದೆ" ಎಂದು ಎನ್‌ಡಿಆರ್‌ಎಫ್ ಡಿಜಿ ಅತುಲ್ ಕರ್ವಾಲ್ ತಿಳಿಸಿದ್ದಾರೆ.
ದೇಗುಲದ ಹೊರಗಿರುವ ಬೇಸ್ ಕ್ಯಾಂಪ್‌ಗೆ ನೀರು ನುಗ್ಗಿದ್ದು, 25 ಟೆಂಟ್‌ಗಳು ಮತ್ತು ಯಾತ್ರಾರ್ಥಿಗಳಿಗೆ ಆಹಾರ ನೀಡುವ ಮೂರು ಸಮುದಾಯ ಅಡುಗೆ ಕೋಣೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಹಲವು ಟೆಂಟ್‌ಗಳು ಕೊಚ್ಚಿಹೋಗಿವೆ. ಪಡೆಗಳು ತಕ್ಷಣವೇ ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದವು. ನಾವು ಭಾರತೀಯ ಸೇನೆ ಮತ್ತು ಇತರ ರಕ್ಷಣಾ ಪಡೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಕೆಲವರನ್ನು ರಕ್ಷಿಸಲಾಗಿದೆ" ಎಂದು ಐಟಿಬಿಪಿ ಪಿಆರ್ ಒ ವಿವೇಕ್ ಕುಮಾರ್ ಪಾಂಡೆ ಎಎನ್‌ಐಗೆ ತಿಳಿಸಿದ್ದಾರೆ.

ಯಾತ್ರೆ ತಾತ್ಕಾಲಿಕ ಸ್ಥಗಿತ
ಅಮರನಾಥ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಶನಿವಾರದಿಂದ ಪುನರಾರಂಭವಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆ ಸದ್ಯಕ್ಕೆ ನಿಂತಿದ್ದು, ಪ್ರದೇಶ ಜಲಾವೃತವಾಗಿರುವ ಕಾರಣ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹವಾಮಾನ ಸಹಜ ಸ್ಥಿತಿಯಲ್ಲಿದ್ದು, ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿದರೆ, ಶನಿವಾರ ಯಾತ್ರೆಯನ್ನು ಪುನರಾರಂಭಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರಿ ನೀರಿನ ಹರಿವು
"ಅಮರನಾಥ ಗುಹೆ ದೇಗುಲದಿಂದ ಸುಮಾರು 2 ಕಿಮೀ ದೂರದಲ್ಲಿ ಸಂಜೆ 5:30 ರ ಸುಮಾರಿಗೆ ಮೇಘಸ್ಫೋಟ ಸಂಭವಿಸಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ಪವಿತ್ರ ಗುಹೆಯ ಬಳಿ ಭಾರಿ ನೀರಿನ ಹರಿವಿನಿಂದ ಮೂರು ಲಾಂಗರ್ ಕೊಚ್ಚಿಹೋಗಿವೆ" ಎಂದು ವಿಪತ್ತು ನಿರ್ವಹಣಾ ಇಲಾಖೆಯ ನಿರ್ದೇಶಕ ಅಮೀರ್ ಅಲಿ ಹೇಳಿದ್ದಾರೆ.

ಎರಡು ಮೃತದೇಹಗಳನ್ನು ಪತ್ತೆಮಾಡಿದ ರಕ್ಷಣಾ ಪಡೆ
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಇತರ ಸಂಬಂಧಿತ ಏಜೆನ್ಸಿಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿವೆ ಮತ್ತು ಅವರು ಎರಡು ಮೃತದೇಹಗಳನ್ನು ಪತ್ತೆಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪವಿತ್ರ ಗುಹೆಯಲ್ಲಿ ಕೆಲವು ಲಾಂಗರ್‌ಗಳು ಮತ್ತು ಡೇರೆಗಳು ಮೇಘಸ್ಫೋಟದಿಂದ ಸಂಭವಿಸಿ ಹಠಾತ್ ಪ್ರವಾಹಕ್ಕೆ ಸಿಲುಕಿವೆ ಎಂದು ಐಜಿಪಿ ಕಾಶ್ಮೀರ ವಿಜಯ್ ಕುಮಾರ್ ಹೇಳಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಏರ್ ಲಿಫ್ಟ್ ಮಾಡಲಾಗುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದರು.

ಭಾರಿ ಮಳೆಯಿಂದ ಭೂಕುಸಿತ
ರಾಮಬಾನ್ ಜಿಲ್ಲೆಯ ಆರು ಸ್ಥಳಗಳಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ನಂತರ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ವಾಹನಗಳು ಸಂಚರಿಸದಂತೆ ಸ್ಥಗಿತಗೊಳಿಸಲಾಗಿದೆ. ಮೆಹಾರ್, ಕೆಫೆಟೇರಿಯಾ ಮೋಡ್, ಚಂಬಾ, ಅನೋಖಿಫಾಲ್, ಕೆಲಮೋಡ್ ಮತ್ತು ಪಂಟಿಯಾಲ್ ಹೆದ್ದಾರಿಗಳನ್ನು ಮುಚ್ಚಲಾಗಿದೆ.
ಜೂನ್ 30ರಂದು ಶುರುವಾಗಿರುವ ಅಮರನಾಥ ಯಾತ್ರೆ ಆಗಸ್ಟ್ 11ರಂದು ಮುಕ್ತಾಯಗೊಳ್ಳಲಿದೆ. ಅಮರನಾಥ ಯಾತ್ರೆಯಲ್ಲಿ ಇದುವರೆಗೂ ಒಂದು ಲಕ್ಷ ಯಾತ್ರಿಕರು ಭಾಗವಹಿಸಿ ದರ್ಶನ ಪಡೆದಿದ್ದಾರೆ.
ರಾಷ್ಟ್ರೀಯ ಸಹಾಯವಾಣಿ ಸಂಖ್ಯೆಗಳು:
NDRF: 011-23438252, 011-23438253
Kashmir Divisional Helpline: 0194-2496240
Shrine Board Helpline: 0194-2313149
Joint Police Control Room Pahalgam
9596779039
9797796217
01936243233
01936243018
Police control room Anantnag
01932225870
01932222870
Shri Amarnath Shrine Board
NDRF: 011-23438252, 011-23438253
Kashmir Divisional Helpline: 0194-2496240












Click it and Unblock the Notifications