Who is Jacob Duffy?: ಐಪಿಎಲ್ 2026 ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಪರ ಮಿಂಚಿದ ಜೇಕಬ್ ಡಫಿ ಯಾರು?
Jacob Duffy: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ವೇಗಿ ಜೇಕಬ್ ಡಫಿ ಎಸ್‌ಆರ್‌ಎಚ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದರು. ಹೈದರಾಬಾದ್ ತಂಡದ ಪ್ರಮುಖ ವಿಕೆಟ್‌ಗಳನ್ನು ಉರುಳಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗೆ ಪ್ರಮುಖ ಪಾತ್ರವಹಿಸಿರು.
ತಮ್ಮ ಮೊದಲ ಪಂದ್ಯದಲ್ಲೇ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಡಫಿ, ಹೈದರಾಬಾದ್ ತಂಡದ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಕೇವಲ 22 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆಯುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಇವರ ಈ ಅಮೋಘ ಬೌಲಿಂಗ್ ಪ್ರದರ್ಶನಕ್ಕಾಗಿ ಪಂದ್ಯದ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಎಸ್‌ಆರ್‌ಎಚ್ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ
ನ್ಯೂಜಿಲೆಂಡ್‌ನ ಈ ವೇಗಿಯು ಚಿನ್ನಸ್ವಾಮಿ ಮೈದಾನದಂತಹ ಸಣ್ಣ ಬೌಂಡರಿಗಳಿರುವ ಪಿಚ್‌ನಲ್ಲಿ ವಿಕೆಟ್ ಪಡೆಯುವ ಮೂಲಕ ತಂಡದ ಬೌಲಿಂಗ್ ವಿಭಾಗಕ್ಕೆ ಆನೆಬಲ ತಂದಿದ್ದಾರೆ. ಗಾಯಗೊಂಡಿದ್ದ ಸ್ಟಾರ್ ಬೌಲರ್ ಜೋಶ್ ಹ್ಯಾಜಲ್‌ವುಡ್ ಅವರ ಸ್ಥಾನ ತುಂಬಲು ಬಂದ 31 ವರ್ಷದ ಜೇಕಬ್ ಡಫಿ ಅವರು, ಹೊಸ ಚೆಂಡಿನೊಂದಿಗೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಪವರ್‌ಪ್ಲೇನಲ್ಲೇ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಧೂಳೀಪಟ ಮಾಡುವ ಮೂಲಕ ಪಂದ್ಯದ ಮೇಲೆ ಆರ್‌ಸಿಬಿ ಹಿಡಿತ ಸಾಧಿಸಲು ಕಾರಣರಾದರು.
ಡಫಿ ಬೌಲಿಂಗ್ ದಾಳಿಗೆ ಬೆದರಿದ ಅಭಿಷೇಕ್ ಶರ್ಮಾ
ಹಾಲಿ ಚಾಂಪಿಯನ್ ಆರ್‌ಸಿಬಿ ತವರು ಮೈದಾನದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಓವರ್‌ಗಳಲ್ಲೇ ಎಸ್‌ಆರ್‌ಎಚ್ ಬ್ಯಾಟರ್‌ಗಳಿಗೆ ಡಫಿ ಅವರ ಮಾರಕ ಬೌಲಿಂಗ್ ದಾಳಿಯು ದೊಡ್ಡ ಸವಾಲಾಗಿ ಪರಿಣಮಿಸಿತು. ಪಂದ್ಯದ ಮೂರನೇ ಓವರ್‌ನಲ್ಲಿ, ಡಫಿ ಅವರ ಬೌನ್ಸ್ ಎದುರಿಸಲು ಅಭಿಷೇಕ್ ಶರ್ಮಾ ತಿಣುಕಾಡಿದರು. ಬಳಿಕ ಅಭಿಷೇಕ್ ಅವರು ವಿಕೆಟ್ ಕೀಪರ್ ಜಿತೇಶ್ ಶರ್ಮಾ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್‌ನತ್ತ ನಡೆದರು. ಹೀಗೆ ಡಫಿ ಎದುರಾಳಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು.
ನಂತರ ಅಪಾಯಕಾರಿ ಬ್ಯಾಟರ್ ಟ್ರಾವಿಸ್ ಹೆಡ್ ವಿಕೆಟ್ ಪಡೆದರು. ಡಫಿ ಎಸೆದ ವೇಗದ ಚೆಂಡನ್ನು ಶಾಟ್ ಮಾಡಲು ಹೋಗಿ ಫಿಲ್ ಸಾಲ್ಟ್ ಅವರಿಗೆ ಕ್ಯಾಚ್ ನೀಡಿದರು. ನಂತರ ನಿತೀಶ್ ಕುಮಾರ್ ರೆಡ್ಡಿ ಅವರ ವಿಕೆಟ್ ಕಬಳಿಸಿದರು. ಡಫಿ ಅವರ ವೇಗಕ್ಕೆ ಆತುರದಿಂದ ಬ್ಯಾಟ್ ಬೀಸಲು ಹೋದ ನಿತೀಶ್, ಮಿಡ್-ವಿಕೆಟ್‌ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಡಫಿ ಅವರ ಓವರ್ ಮುಗಿಯುವಷ್ಟರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 49 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಡಫಿ ತಮ್ಮ 4 ಓವರ್‌ಗಳಲ್ಲಿ ಕೇವಲ 22 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ 5.50 ರ ಅತ್ಯುತ್ತಮ ಎಕಾನಮಿಯನ್ನು ಕಾಯ್ದುಕೊಂಡರು.
ಯಾರಿದು ಜೇಕಬ್ ಡಫಿ?
ಅನೇಕ ಭಾರತೀಯ ಅಭಿಮಾನಿಗಳಿಗೆ ಇವರ ಹೆಸರು ಹೊಸದಾಗಿರಬಹುದು. ಆದರೆ ಡಫಿ ಕಳೆದ ಹಲವು ವರ್ಷಗಳಿಂದ ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದಾರೆ. ನ್ಯೂಜಿಲೆಂಡ್‌ನ ಲಮ್ಸ್‌ಡನ್ ಮೂಲದ ಡಫಿ, 2012ರಲ್ಲಿ ತಮ್ಮ 17ನೇ ವಯಸ್ಸಿನಲ್ಲೇ ಒಟಾಗೊ ತಂಡದ ಪರ ಹಿರಿಯರ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಇಂದಿನವರೆಗೆ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 340ಕ್ಕೂ ಹೆಚ್ಚು ವಿಕೆಟ್ ಹಾಗೂ ಟಿ20 ಕ್ರಿಕೆಟ್‌ನಲ್ಲಿ 180ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಯಾವಾಗ?
2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ, ಡಫಿ ಟಿ20 ಸ್ಪೆಷಲಿಸ್ಟ್ ಆಗಿ ಹೊರಹೊಮ್ಮಿದರು. 2025ರ ಆರಂಭದಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಅಬ್ಬರಿಸಿದ ಇವರು, ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ವಿಶ್ವದ ನಂ.1 ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
2 ಕೋಟಿ ರೂಪಾಯಿಗೆ ಖರೀದಿಸಿದ ಆರ್‌ಸಿಬಿ
2026ರ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ತಂಡವು ಡಫಿ ಅವರನ್ನು ಅವರ ಮೂಲ ಬೆಲೆ 2 ಕೋಟಿ ರೂಪಾಯಿಗೆ ಖರೀದಿಸಿತು. ಆರಂಭದಲ್ಲಿ ಇವರನ್ನು ಬ್ಯಾಕ್-ಅಪ್ ಬೌಲರ್ ಎಂದು ಪರಿಗಣಿಸಲಾಗಿತ್ತು. ಆದರೆ, ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನದ ನಂತರ, ಜೋಶ್ ಹ್ಯಾಜಲ್‌ವುಡ್ ಅನುಪಸ್ಥಿತಿಯಲ್ಲಿ ಇವರೇ ತಂಡದ ಖಾಯಂ ಸದಸ್ಯರಾಗುವ ಬಗ್ಗೆ ಚರ್ಚೆಗಳು ಶುರುವಾಗಿವೆ. ಒಟ್ಟಿನಲ್ಲಿ ಹೇಳುವುದಾದರೆ, ಹ್ಯಾಜಲ್‌ವುಡ್ ಸ್ಥಾನವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಗಮನ ಸೆಳೆದಿದ್ದಾರೆ.












Click it and Unblock the Notifications