ಫೋಟೋ ಬೇಕಾದ್ರೆ ನನಗೆ 100 ರೂ. ಕೊಡಿ; ಮಕ್ಕಳು ಸೆಲ್ಫೀ ಕೇಳಿದ್ದಕ್ಕೆ ಹಣ ಕೇಳಿದ ವೈಭವ್ ಸೂರ್ಯವಂಶಿ
Vaibhav Sooryavanshi: ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ 15 ವರ್ಷದ ವೈಭವ್ ಸೂರ್ಯವಂಶಿ ಅವರು ಸಖತ್ ಸದ್ದು ಮಾಡುತ್ತಿದ್ದಾರೆ. ಅವರು ಕೇವಲ ಮೈದಾನದಲ್ಲಿ ಅಷ್ಟೇ ಅಲ್ಲದೆ, ಮೈದಾನದ ಹೊರಗೂ ಸುದ್ದಿಯಲ್ಲಿದ್ದಾರೆ. ವೈಭವ್ ಚಿಕ್ಕ ಮಕ್ಕಳ ಬಳಿ ಒಂದು ಸೆಲ್ಫೀ ಬೇಕಾದ್ರೆ 100 ರೂಪಾಯಿ ಕೊಡಿ ಎಂದು ಕೇಳಿರುವ ವಿಡಿಯೋ ಇದೀಗ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.
ವೈಭವ್ ಅವರ ಜನಪ್ರಿಯತೆ ಹೆಚ್ಚಾದಂತೆ ಅಭಿಮಾನಿಗಳು ಅವರೊಂದಿಗೆ ಫೋಟೋ ಮತ್ತು ಸೆಲ್ಫಿಗಾಗಿ ಮುಗಿಬೀಳುತ್ತಿದ್ದಾರೆ. ಈ ನಡುವೆ ವೈಭವ್ ಅವರ ಒಂದು ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕೆಲವು ಮಕ್ಕಳು ವೈಭವ್ ಅವರ ಬಳಿ ಬಂದು ಫೋಟೋ ತೆಗೆಸಿಕೊಳ್ಳಲು ಕೇಳಿಕೊಳ್ಳುತ್ತಿರುವುದನ್ನು ಕಾಣಬಹುದು.

ಫೋಟೋ ಬೇಕಾದ್ರೆ 100 ರೂ. ಕೊಡಿ: ವೈಭವ್ ಬೇಡಿಕೆ
ಈ ವೇಳೆ ವೈಭವ್ ಸೂರ್ಯವಂಶಿ ತಮಾಷೆಯಾಗಿ ಆ ಮಕ್ಕಳ ಬಳಿ "ಒಂದು ಫೋಟೋ ಬೇಕೆಂದರೆ 100 ರೂಪಾಯಿ ಕೊಡಿ" ಎಂದು ಕೇಳುತ್ತಾರೆ. ಒಂದು ಕ್ಷಣ ಮಕ್ಕಳು ಗಲಿಬಿಲಿಯಾದಂತೆ ಕಂಡರೂ ತಕ್ಷಣವೇ ವೈಭವ್ ತಾವು ಕೇವಲ ತಮಾಷೆ ಮಾಡುತ್ತಿರುವುದಾಗಿ ಹೇಳಿ ನಗುತ್ತಾರೆ ಮತ್ತು ಅವರೊಂದಿಗೆ ಫೋಟೋಗೆ ಫೋಸ್ ನೀಡುತ್ತಾರೆ.
ವೈಭವ್ ಸೂರ್ಯವಂಶಿ ತಮಾಷೆಯ ವಿಡಿಯೋ ವೈರಲ್
ಐಪಿಎಲ್‌ನಲ್ಲಿ ಮಿಂಚುತ್ತಿದ್ದರೂ ವೈಭವ್ ಇನ್ನೂ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ತಮಾಷೆ ಮಾಡುತ್ತಿರುವುದು ನೆಟ್ಟಿಗರ ಮನ ಗೆದ್ದಿದೆ. ಈ ವಿಡಿಯೋ ಸಖತ್ ಕ್ಯೂಟ್ ಆಗಿದೆ ಎಂದು ಕ್ರಿಕೆಟ್ ಪ್ರೇಮಿಗಳು ಕಾಮೆಂಟ್ ಮಾಡುತ್ತಿದ್ದಾರೆ. "ವೈಭವ್ ಕೇವಲ ಬ್ಯಾಟಿಂಗ್‌ನಲ್ಲಿ ಅಬ್ಬರಿಸುವುದಷ್ಟೇ ಅಲ್ಲ, ತಮಾಷೆ ಮಾಡುವುದರಲ್ಲೂ ನಿಸ್ಸೀಮ," ಎಂದು ಅಭಿಮಾನಿಗಳು ಈ ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ 15 ವರ್ಷದ ಈ ಬಾಲಕನ ಮುಗ್ಧತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳ ಸುರಿಮಳೆ ಹರಿದುಬರುತ್ತಿದೆ.
ಎಸ್‌ಆರ್‌ಎಚ್ ವಿರುದ್ಧ ಶತಕ ಬಾರಿಸಿದ ವೈಭವ್
ಈ ಬಾರಿಯ ಐಪಿಎಲ್ ಸೀಸನ್‌ಲ್ಲಿ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಅಬ್ಬರ ಮುಂದುವರಿದಿದ್ದು, ಅವರು ಎದುರಾಳಿ ತಂಡಗಳಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಜೈಪುರದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದ ಮೂರನೇ ಅತಿ ವೇಗದ ಶತಕದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಈ ಸ್ಫೋಟಕ ಇನಿಂಗ್ಸ್‌ನೊಂದಿಗೆ ಸೂರ್ಯವಂಶಿ ಅವರು ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ಅದ್ಭುತ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಟ್ವೆಂಟಿ-20 ಕ್ರಿಕೆಟ್‌ನಲ್ಲಿ 1,000 ರನ್ ಪೂರೈಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎದುರಿಸಿದ ಎಸೆತಗಳ ಆಧಾರದ ಮೇಲೆ ಅತ್ಯಂತ ವೇಗವಾಗಿ 1,000 ರನ್ ತಲುಪಿದ ದಾಖಲೆ ಈಗ ವೈಭವ್ ಹೆಸರಿನಲ್ಲಿದೆ. ಅವರು ಈ ಸಾಧನೆ ಮಾಡಲು ಕೇವಲ 473 ಎಸೆತಗಳನ್ನು ತೆಗೆದುಕೊಂಡಿದ್ದಾರೆ.
ಮಿಚೆಲ್ ಓವನ್ ದಾಖಲೆ ಅಳಿಸಿದ ವೈಭವ್
ಈ ಹಿಂದೆ ಆಸ್ಟ್ರೇಲಿಯಾದ ಮಿಚೆಲ್ ಓವನ್ ಅವರು 533 ಎಸೆತಗಳಲ್ಲಿ 1,000 ರನ್ ಪೂರೈಸಿ ಈ ದಾಖಲೆಯನ್ನು ಹೊಂದಿದ್ದರು. ಈಗ ವೈಭವ್ ಆ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಕೇವಲ 15 ವರ್ಷದ ಇವರು ವಿಶ್ವದ ಘಟಾನುಘಟಿ ಬ್ಯಾಟರ್‌ಗಳನ್ನು ಹಿಂದಿಕ್ಕಿ ಇಂತಹ ದಾಖಲೆ ನಿರ್ಮಿಸಿರುವುದು ಭಾರತೀಯ ಕ್ರಿಕೆಟ್‌ನ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ ಅಂದರೆ ತಪ್ಪಾಗಲಾರದು.
ಬ್ಯಾಟಿಂಗ್ ಗುಟ್ಟು ಬಿಚ್ಚಿಟ್ಟ ವೈಭವ್
ಐಪಿಎಲ್ ಇತಿಹಾಸದ ಮೂರನೇ ಅತಿ ವೇಗದ ಶತಕವನ್ನು ಸಿಡಿಸಿ ಅಬ್ಬರಿಸಿದ ನಂತರ ವೈಭವ್ ಸೂರ್ಯವಂಶಿ ಅವರು ಬ್ಯಾಟಿಂಗ್ ಮಾಡುವಾಗ ತಮ್ಮ ಮಾನಸಿಕ ಸಿದ್ಧತೆ ಹೇಗಿರುತ್ತದೆ ಎಂಬ ಬಗ್ಗೆ ಅಭಿಮಾನಿಗಳಿಗೆ ಮನದಟ್ಟು ಮಾಡಿಕೊಟ್ಟರು. ಬ್ಯಾಟಿಂಗ್ ಮಾಡುವಾಗ ಅನಗತ್ಯ ಒತ್ತಡವನ್ನು ತೆಗೆದುಕೊಳ್ಳದೆ ಚೆಂಡನ್ನು ಎದುರಿಸುವುದು ಅವರ ಮುಖ್ಯ ಉದ್ದೇಶವಾಗಿರುತ್ತದೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಶತಕ ಸಿಡಿಸಿದ ನಂತರ ತಮ್ಮ ಬ್ಯಾಟಿಂಗ್ ಗುಟ್ಟಿನ ಬಗ್ಗೆ ವೈಭವ್ ಸೂರ್ಯವಂಶಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಕ್ರೀಸ್‌ಗೆ ಬಂದ ಕ್ಷಣದಿಂದಲೇ ಬೌಲರ್‌ಗಳ ಮೇಲೆ ಸವಾರಿ ಮಾಡುವುದು ಮತ್ತು ಎದುರಾಳಿ ತಂಡದ ತಂತ್ರಗಳನ್ನು ಬುಡಮೇಲು ಮಾಡುವುದೇ ಪ್ರಮುಖ ಗುರಿಯಾಗಿದೆ. ಎದುರಾಳಿ ಬೌಲರ್ ಯಾರೇ ಇರಲಿ ನನ್ನ ಗುರಿ ಏನಿದ್ದರೂ ಬಾಲ್ ಮೇಲೆ ಎಂದು ಹೇಳಿದ್ದಾರೆ. ಮುಂದುವರೆದು ಮಾತಾನಾಡಿದ ಅವರು, "ನಾನು ಮೈದಾನಕ್ಕೆ ಇಳಿದಾಗ ಕೇವಲ ಚೆಂಡಿನ ಮೇಲೆ ಗಮನವಿಡುತ್ತೇನೆ, ಉಳಿದದ್ದನ್ನು ನನ್ನ ಬ್ಯಾಟ್ ನಿರ್ಧರಿಸುತ್ತದೆ," ಎಂದು ಹೇಳಿ ಗಮನ ಸೆಳೆದಿದ್ದಾರೆ.
Vaibhav Sooryavanshi having fun with his classmates pic.twitter.com/ZTlmNCLsGq
— Manish (@Money_sh_) April 28, 2026
ಇನ್ನೂ ಭಾರತ ಹಿರಿಯರ ತಂಡಕ್ಕೆ ಪದಾರ್ಪಣೆ ಮಾಡದ ಈ ಹದಿಹರೆಯದ ಪ್ರತಿಭೆ ಈ ಸೀಸನ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇದಕ್ಕೂ ಮೊದಲು ಅವರು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ವೈಭವ್ ಅವರ ಈ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ರಾಜಸ್ಥಾನ್ ರಾಯಲ್ಸ್ ತಂಡವು ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಫ್ರಾಂಚೈಸಿ ಹಾಗೂ ತಂಡ ಆಟಗಾರರು ಕೂಡ ಇವರ ಮೇಲೆ ಯಾವುದೇ ಒತ್ತಡ ಹೇರದೇ ಸ್ವತಂತ್ರವಾಗಿ ಆಡಲು ಬಿಟ್ಟಿದ್ದಾರೆ. ಈ ಬಗ್ಗೆ ಸ್ವತಃ ಆರ್‌ಆರ್ ನಾಯಕ ರಿಯಾನ್ ಪರಾಗ್ ಅವರೇ ಇತ್ತೀಗಷ್ಟೇ ಹೇಳಿದ್ದರು. ಇವರು ಮುಂದಿನ ದಿನಗಳಲ್ಲಿ ಭಾರತ ತಂಡದ ಸ್ಟಾರ್ ಆಟಗಾರ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಅಂತಲೂ ಹಲವರು ಭವಿಷ್ಯ ನುಡಿದಿದ್ದಾರೆ.












Click it and Unblock the Notifications