ಪ್ರಧಾನಿ ಮೋದಿ ಮಾತು ಕೇಳಿ ವೈಭವ್ ಸೂರ್ಯವಂಶಿ ಮಂದಹಾಸ: ಟೀಮ್ ಇಂಡಿಯಾ ಯುವ ಪ್ರತಿಭೆ ರಿಯಾಕ್ಷನ್ ಭಾರಿ ವೈರಲ್
Vaibhav Sooryavanshi: ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಇತ್ತೀಗಷ್ಟೇ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಟೀಮ್ ಇಂಡಿಯಾ ಪರ ಕ್ರಿಕೆಟ್ ಆಡಿ ಚಿನ್ನದ ಪದಕವನ್ನು ಗೆದ್ದಿದ್ದರು. ಇದೀಗ ಪ್ರಧಾನಿ ಮೋದಿ ಅವರು ದೇಶದ ಪರ ಭಾಗವಹಿಸಿದ್ದ ಕ್ರೀಡಾಪಟುಗಳನ್ನು ಒಂದೆಡೆ ಸೇರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ವೈಭವ್ ಕೂಡ ಇದ್ದು, ಅವರು ಕೊಟ್ಟ ಸ್ಮೈಲ್ ಭಾರಿ ವೈರಲ್ ಆಗುತ್ತಿದೆ.
ನವದೆಹಲಿಯ ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ಏಷ್ಯನ್ ಗೇಮ್ಸ್ ಕ್ರೀಡಾಪಟುಗಳನ್ನು ಗೌರವಿಸುವ ಸಮಾರಂಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಕಿರಿಯ ವಯಸ್ಸಿನ ಪಟುಗಳ ಸಾಧನೆಯನ್ನು ಶ್ಲಾಘಿಸಿದರು. ಈ ವೇಳೆ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಮುಖದಲ್ಲಿದ್ದ ಮಂದಹಾಸ ಮತ್ತು ಪ್ರತಿಕ್ರಿಯೆ ಎಲ್ಲರ ಗಮನಸೆಳೆಯಿತು.

ಕಿರಿಯ ಕ್ರೀಡಾಪಟುಗಳ ಸಾಹಸಕ್ಕೆ ಪ್ರಧಾನಿ ಶ್ಲಾಘನೆ
ಏಷ್ಯನ್ ಗೇಮ್ಸ್‌ನಲ್ಲಿ ನೂತನ ದಾಖಲೆ ಬರೆದ ಕ್ರಿಕೆಟ್, ಹಾಕಿ, ಬಾಕ್ಸಿಂಗ್ ಸೇರಿದಂತೆ ವಿವಿಧ ಕ್ರೀಡೆಗಳ ಸಾಧಕರನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ತಮ್ಮ ಭಾಷಣದ ವೇಳೆ, ಕೇವಲ 15 ರಿಂದ 17 ವರ್ಷ ವಯಸ್ಸಿನ ಯುವ ಕ್ರೀಡಾಪಟುಗಳು ಭಾರತಕ್ಕೆ ಪದಕಗಳನ್ನು ತಂದುಕೊಟ್ಟಿರುವುದನ್ನು ಪ್ರಧಾನಿಯವರು ವಿಶೇಷವಾಗಿ ಉಲ್ಲೇಖಿಸಿದರು.
ಪ್ರಧಾನಿ ನರೇಂದ್ರವ ಮೋದಿ ಅವರು ಈ ಬಗ್ಗೆ ಮಾತನಾಡಿ, 'ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಭಾರತ ತಂಡದಲ್ಲಿ 15ರಿಂದ 17 ವರ್ಷದ ಅನೇಕ ಆಟಗಾರರಿದ್ದರು. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅವರು ತಮ್ಮ ಅದ್ಭುತ ಪ್ರದರ್ಶನದ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಹಾಗೂ ದೇಶದ ಜನರ ಮನಗೆದ್ದಿದ್ದಾರೆ. ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ಇದು ನಿರೂಪಿಸುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಚಿಕ್ಕ ವಯಸ್ಸಿನಲ್ಲೇ ಸಿಗುವ ಯಶಸ್ಸಿನ ಆರಂಭವು ಹೆಚ್ಚು ಅನುಕೂಲವನ್ನು ನೀಡುತ್ತದೆ,' ಎಂದು ಹೇಳಿದರು.
ಪ್ರಧಾನಿಯವರು 15 ವರ್ಷದ ಕ್ರೀಡಾಪಟುಗಳ ಬಗ್ಗೆ ಉಲ್ಲೇಖಿಸುತ್ತಿದ್ದಂತೆಯೇ, ಸಭೆಯಲ್ಲಿದ್ದ ಟೀಮ್ ಇಂಡಿಯಾ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರತ್ತ ಕ್ಯಾಮೆರಾ ಮುಖ ಮಾಡಿತು. ಈ ವೇಳೆ ಪ್ರಧಾನಿಯವರ ಮಾತುಗಳನ್ನು ಕೇಳಿ ವೈಭವ್ ಮುಖದಲ್ಲಿ ಮಂದಹಾಸ ಮೂಡಿದ್ದು, ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಕ್ರೀಡಾ ತರಬೇತಿ ಮತ್ತು ಯುವ ಪ್ರತಿಭೆಗಳ ಗುರುತಿಸುವಿಕೆ
ಯುವ ಪ್ರತಿಭೆಗಳನ್ನು ಸಣ್ಣ ವಯಸ್ಸಿನಲ್ಲೇ ಗುರುತಿಸುವ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, '5 ರಿಂದ 15 ವರ್ಷದ ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಲು ಸರ್ಕಾರ ವಿಶೇಷ ಗಮನ ಹರಿಸುತ್ತಿದೆ. ಮುಂಬರುವ ವರ್ಷಗಳಲ್ಲಿ 'ಖೇಲೋ ಇಂಡಿಯಾ' ಮತ್ತು 'ಎಮರ್ಜಿಂಗ್ ಖೇಲೋ ಇಂಡಿಯಾ' ಯೋಜನೆಗಳ ಮೂಲಕ ಸಾವಿರಾರು ಹೊಸ ಆಟಗಾರರಿಗೆ ಮುಂದೆ ಬರಲು ಉತ್ತಮ ಅವಕಾಶಗಳು ಸಿಗಲಿವೆ,' ಎಂದು ಹೇಳಿದರು.
ಮಹಿಳಾ ಅಥ್ಲೀಟ್‌ಗಳ ಸಾಧನೆಗೆ ಮೆಚ್ಚುಗೆ
ಇದೇ ವೇಳೆ ಭಾರತದ ಮಹಿಳಾ ಕ್ರೀಡಾಪಟುಗಳ ಸಾಧನೆಯನ್ನು ಪ್ರಧಾನಿ ವಿಶೇಷವಾಗಿ ಶ್ಲಾಘಿಸಿದರು. ಭಾರತ ಗೆದ್ದ ಒಟ್ಟು 85 ಪದಕಗಳಲ್ಲಿ 38 ಪದಕಗಳನ್ನು ಮಹಿಳಾ ಅಥ್ಲೀಟ್‌ಗಳೇ ತಂದುಕೊಟ್ಟಿದ್ದು, ಇದರಲ್ಲಿ 11 ಚಿನ್ನದ ಪದಕಗಳು ಸೇರಿವೆ ಎಂದು ಸ್ಮರಿಸಿದರು. ಈ ಪದಕಗಳು ಕೇವಲ ಸಂಖ್ಯೆಗಳಲ್ಲ, ಬದಲಿಗೆ ಇದು ನವ ಭಾರತದ ಉದಯದ ಸಂಕೇತ ಎಂದು ಬಣ್ಣಿಸಿದರು. ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಮಾತಿಗೆ ಮಂದಹಾಸ ಬೀರಿದ ವೈಭವ್ ಸೂರ್ಯವಂಶಿ ಅವರು ಇದೀಗ ಭಾರಿ ಸುದ್ದಿಯಲ್ಲಿದ್ದಾರೆ.


Click it and Unblock the Notifications
