Vaibhav Sooryavanshi: ಪಾದಾರ್ಪಣೆ ಪಂದ್ಯದಲ್ಲೇ ಉಪನಾಯಕ ವೈಭವ್ ಸೂರ್ಯವಂಶಿ ಫ್ಲಾಪ್
Vaibhav Sooryavanshi: ಟೀಮ್ ಇಂಡಿಯಾ ಯುವ ಕ್ರಿಕೆಟರ್ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಇದೀಗ ದುಲೀಪ್ ಟ್ರೋಫಿಯಲ್ಲಿ ಅವರಿಗೆ ಉಪನಾಯಕನ ಪಟ್ಟ ಕೊಡಲಾಗಿದ್ದು, ಎಲ್ಲರ ಕಣ್ಣು ಅವರ ಮೇಲಿತ್ತು. ಆದರೆ ಅವರು ಈ ಟೂರ್ನಿಯ ಪಾದಾರ್ಪಣೆ ಪಂದ್ಯದಲ್ಲೇ ಕೇವಲ 8 ರನ್ ಗಳಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ಟೀಮ್ ಇಂಡಿಯಾದಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುವ ದೇಶೀಯ ಆಟಗಾರರಿಗೆ ರಾಷ್ಟ್ರೀಯ ಆಯ್ಕೆದಾರರು ಸರಿಯಾದ ಅವಕಾಶಗಳನ್ನು ನೀಡುತ್ತಿದ್ದಾರೆ ಎಂಬುದಕ್ಕೆ ಸಾರಾಂಶ್ ಜೈನ್, ಮಾನವ್ ಸುತಾರ್, ಆಕಿಬ್ ನಬಿ ಮತ್ತು ಸರ್ಫರಾಜ್ ಖಾನ್ ಅವರಂತಹ ಆಟಗಾರರೇ ಸಾಕ್ಷಿ. ಪ್ರಸ್ತುತ ದೇಶೀಯ ಕ್ರಿಕೆಟ್ ಋತುವಿನ ಆರಂಭಿಕ ಸರಣಿಯಾದ 'ದುಲೀಪ್ ಟ್ರೋಫಿ' ಪಂದ್ಯಾವಳಿಗಳು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ಶನಿವಾರದಿಂದ ಆರಂಭಗೊಂಡಿವೆ. ಈ ಪಂದ್ಯಾವಳಿಯಲ್ಲಿ ಎಲ್ಲರ ಗಮನ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಮೇಲಿದೆ.

ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆ
ಬಿಹಾರ ಮೂಲದ ಬಾಲಕ ವೈಭವ್ ಸೂರ್ಯವಂಶಿ ಅವರು ಐಪಿಎಲ್ 2026ರ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಈಗಾಗಲೇ ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು. ಬಳಿಕ ಟಿ-20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಆದರೆ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾಗಿರುವ ಈ ಯುವ ಆಟಗಾರನಿಗೆ ಟೆಸ್ಟ್ ಕ್ರಿಕೆಟ್‌ಗೆ ಅಗತ್ಯವಿರುವ ತಾಳ್ಮೆ, ಸಮಾಧಾನ ಮತ್ತು ಏಕಾಗ್ರತೆ ಇದೆಯೇ ಎಂಬ ಪ್ರಶ್ನೆಗಳು ಕ್ರಿಕೆಟ್ ವಲಯದಲ್ಲಿ ಎದ್ದಿವೆ.
ಈವರೆಗೆ ಎಂಟು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು 12 ಇನ್ನಿಂಗ್ಸ್‌ಗಳಿಂದ ಕೇವಲ 207 ರನ್‌ಗಳನ್ನು ಗಳಿಸಿದ್ದಾರೆ. ಈ ಅಂಕಿ-ಅಂಶಗಳು ಅವರಲ್ಲಿರುವ ನಿಜವಾದ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಇಲ್ಲ ಎಂಬುದನ್ನು ತೋರಿಸುತ್ತವೆ. ಆದ್ದರಿಂದ ಮುಂಬರುವ ದೇಶೀಯ ಕ್ರಿಕೆಟ್ ಋತುವಿನ ಪ್ರಥಮ ದರ್ಜೆ ಪಂದ್ಯಗಳು ವೈಭವ್ ಅವರ ವೃತ್ತಿಜೀವನದಲ್ಲಿ ಅತ್ಯಂತ ನಿರ್ಣಾಯಕವಾಗಿವೆ.
ವೈಭವ್‌ಗೆ ಉಪನಾಯಕ ಪಟ್ಟ
ಈ ಬಾರಿಯ ದುಲೀಪ್ ಟ್ರೋಫಿಯಲ್ಲಿ ಈಸ್ಟ್ ಜೋನ್ (ಪೂರ್ವ ವಲಯ) ತಂಡವು ವೈಭವ್ ಅವರನ್ನು ಅಚ್ಚರಿಯ ರೀತಿಯಲ್ಲಿ ಉಪನಾಯಕನನ್ನಾಗಿ ನೇಮಕ ಮಾಡಿದೆ. ಇಶಾನ್ ಕಿಶನ್ ನಾಯಕತ್ವದ ಈ ತಂಡದಲ್ಲಿ ಮೊಹಮ್ಮದ್ ಶಮಿ, ಅಭಿಮನ್ಯು ಈಶ್ವರನ್, ಕುಮಾರ್ ಕುಶಾಗ್ರ, ಶಹಬಾಜ್ ಅಹಮದ್ ಮತ್ತು ಮುಕೇಶ್ ಕುಮಾರ್ ಅವರಂತಹ ಅನುಭವಿ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಆಟಗಾರರಿದ್ದಾರೆ. ಆದರೂ ಸಹ 15 ವರ್ಷದ ವೈಭವ್‌ಗೆ ಉಪನಾಯಕತ್ವದ ಪಟ್ಟ ನೀಡಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ.
ಚೊಚ್ಚಲ ಪಂದ್ಯದದಲ್ಲೇ ಫ್ಲಾಪ್
ಈಶಾನ್ಯ ವಲಯ (North East Zone) ವಿರುದ್ಧ ಇನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ, ಆರಂಭದಲ್ಲಿಯೇ ಎರಡು ಸತತ ಬೌಂಡರಿಗಳನ್ನು ಬಾರಿಸಿ ಗಮನ ಸೆಳೆದರು. ಆದರೆ ಬಿಶ್ವರ್‌ಜಿತ್ ಕೊಂಥೌಜಮ್ ಎಸೆತದಲ್ಲಿ ಜೋಸೆಫ್ ಅವರಿಗೆ ಕ್ಯಾಚ್ ನೀಡಿ ಕೇವಲ 8 ರನ್‌ಗಳಿಗೆ (6 ಎಸೆತಗಳಲ್ಲಿ) ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಭಾರತ 'ಎ' ತಂಡಕ್ಕೆ ಆಯ್ಕೆಯಾಗಲು ವೈಭವ್ ಸೂರ್ಯವಂಶಿಗೆ ಈ ಪಂದ್ಯಾವಳಿ ಪ್ರಮುಖ ವೇದಿಕೆಯಾಗಿದೆ. ಮುಂದಿನ ಪಂದ್ಯಗಳಲ್ಲಿ ಮತ್ತು ಸೆಮಿಫೈನಲ್‌ನಲ್ಲಿ ವೈಭವ್ ತಮ್ಮ ಸಾಮರ್ಥ್ಯವನ್ನ ನಿರೂಪಿಸಿ, ಆಸ್ಟ್ರೇಲಿಯಾ 'ಎ' ವಿರುದ್ಧದ ಸರಣಿಗೆ ಆಯ್ಕೆದಾರರ ಗಮನ ಸೆಳೆಯಲು ಅವರಿಗೆ ಇನ್ನೂ ಅವಕಾಶ ಇದೆ. ಇದೀಗ ಅವರು ಮುಂದಿನ ಪಂದ್ಯಗಳಲ್ಲಿ ಯಾವ ರೀತಿ ಪ್ರದರ್ಶನ ಬರಲಿದ ಎಂದು ಕಾದುನೋಡಬೇಕಿದೆ.


Click it and Unblock the Notifications
