ವೈಭವ್ ಸೂರ್ಯವಂಶಿ ಬ್ಯಾಟ್‌ನಲ್ಲಿ ಎಐ ತಂತ್ರಜ್ಞಾನ ಅಡಗಿರಬಹುದು, ಆತ ಮನುಷ್ಯನಲ್ಲ; ಪಾಕ್ ಕ್ರಿಕೆಟ್ ತಜ್ಞ ಅಚ್ಚರಿ ಹೇಳಿಕೆ
Vaibhav Sooryavanshi: ಐಪಿಎಲ್ 2026ರಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಅವರು ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ದಿಗ್ಗಜರನ್ನೇ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಇವರ ಆಕ್ರಮಣಗಾರಿ ಬ್ಯಾಟಿಂಗ್ ಶೈಲಿಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಲಿದೆ. ಈ ನಡುವೆಯೇ ವೈಭವ್ ವಿರುದ್ಧ ಪಾಕಿಸ್ತಾನದ ಕ್ರಿಕೆಟ್ ತಜ್ಞ ನೌಮನ್ ನಿಯಾಜ್ ತಮಾಷೆಯ ಆರೋಪ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಪ್ರಿತಿಭೆ ವೈಭವ್ ಸೂರ್ಯವಂಶಿ ವಿರುದ್ಧ ಪಾಕಿಸ್ತಾನದ ಕ್ರಿಕೆಟ್ ತಜ್ಞ ನೌಮನ್ ನಿಯಾಜ್ ಗಂಭೀರ ಆರೋಪ ಮಾಡಿದ್ದಾರೆ. ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರಾದ ನಿಯಾಜ್ ಇದೀಗ 15 ವರ್ಷದ ವೈಭವ್ ತಮ್ಮ ಐಪಿಎಲ್ ವೃತ್ತಿಜೀವನದ ಎರಡನೇ ಶತಕವನ್ನು ಸಿಡಿಸಿದ ಬೆನ್ನಲ್ಲೇ ನೌಮನ್ ಅವರ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

'ವೈಭವ್ ಬಿಗ್ ಶಾಟ್ ಮಾಡಲು ಹೇಗೆ ಸಾಧ್ಯ?'
"ಯುವ ಆಟಗಾರ ವೈಭವ್ ತಮ್ಮ ಬ್ಯಾಟ್‌ನಲ್ಲಿ ಎಐ ಚಿಪ್ (ಕೃತಕ ಬುದ್ಧಿಮತ್ತೆಯ ಚಿಪ್) ಬಳಸುತ್ತಿದ್ದಾರೆ. ಅವರು ಆ ಮೂಲಕ ಬಿಗ್ ಶಾಟ್‌ಗಳನ್ನು ಮಾಡಿ ಬೌಂಡರಿ, ಸಿಕ್ಸರ್ ಬಾರಿಸುತ್ತಿದ್ದಾರೆ," ಎಂದು ನಿಯಾಜ್ ತಮಾಷೆಯಾಗಿ ಆರೋಪಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಅದ್ಭುತ ಹೊಡೆತಗಳನ್ನು ಹೊಡೆಯಲು ಹೇಗೆ ಸಾಧ್ಯ? ಬಹುಶಃ ಅವರ ಬ್ಯಾಟ್‌ನಲ್ಲಿ ಏನಾದರೂ ತಾಂತ್ರಿಕ ಕೈಚಳಕವಿರಬಹುದು ಎಂಬುದು ನಿಯಾಜ್ ಅವರ ಮಾತಿನ ಅರ್ಥವಾಗಿದೆ.
"ವೈಭವ್ ಬ್ಯಾಟ್‌ನಲ್ಲಿ ತಂತ್ರಜ್ಞಾನ ಅಡಗಿರಬಹುದು"
15 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ತಮ್ಮ ಎರಡನೇ ಶತಕ ಸಿಡಿಸಿ ಮಿಂಚಿದ್ದಾರೆ. ವೈಭವ್ ಅವರ ಸ್ಫೋಟಕ ಬ್ಯಾಟಿಂಗ್ ಕಂಡು ಬೆರಗಾದ ನೌಮನ್ ನಿಯಾಜ್, "ಇದು ಕೇವಲ ಮನುಷ್ಯನ ಶಕ್ತಿಯಲ್ಲ. ಬ್ಯಾಟ್‌ನಲ್ಲಿ ತಂತ್ರಜ್ಞಾನ ಅಡಗಿರಬಹುದು," ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯ ಯುವ ಪ್ರತಿಭೆಯ ಬ್ಯಾಟಿಂಗ್ ಪರಾಕ್ರಮಕ್ಕೆ ಪಾಕಿಸ್ತಾನದ ತಜ್ಞರೂ ಫಿದಾ ಆಗಿರುವುದನ್ನು ಇದು ಎತ್ತಿ ತೋರಿಸುತ್ತದೆ.
'ಬ್ಯಾಟ್‌ನಲ್ಲಿ AI ಚಿಪ್ ಬಳಸುತ್ತಿರಬಹುದು'
ನೌಮನ್ ನಿಯಾಜ್ ಅವರು ಸ್ಮ್ಯಾಶ್‌ಹಿಟ್ ಕಾರ್ಯಕ್ರಮದಲ್ಲಿ ವೈಭವ್ ಸೂರ್ಯವಂಶಿ ಆಟದ ಬಗ್ಗೆ ಮಾತನಾಡಿದ್ದಾರೆ. "ಸ್ವಲ್ಪ ಯೋಚಿಸಿ ನೋಡಿ. ಯಾರು ಈ ಹುಡುಗ? ಮೊದಲು ಆತನ ಬ್ಯಾಟ್ ಅನ್ನು ಪರೀಕ್ಷಿಸಿ. ಈತನ ಬ್ಯಾಟ್ ಅನ್ನು ಲ್ಯಾಬ್‌ಗೆ ಕಳುಹಿಸಿ. ಆತ ಬಹುಶಃ ತನ್ನ ಬ್ಯಾಟ್‌ನಲ್ಲಿ AI ಚಿಪ್ ಬಳಸುತ್ತಿರಬಹುದು. ಆತ ಅಸಾಮಾನ್ಯ ಆಟಗಾರ. ಮೊದಮೊದಲು ಆತ ಸ್ವಲ್ಪ ನಿಧಾನವಾಗಿ ಆಡುತ್ತಿದ್ದಾನೆ ಎಂದು ನನಗೆ ಅನಿಸಿತ್ತು. ಆದರೆ ನಂತರ ಆತ ಅಬ್ಬರಿಸಿದ ರೀತಿ ಕಂಡು ಬೆರಗಾದೆ," ಎಂದು ಹೇಳಿದ್ದಾರೆ.
ವೈಭವ್ ಬಗ್ಗೆ ತಮಾಷೆ ಮಾಡಿದ ನಿಯಾಜ್
"ಸಾಮಾನ್ಯವಾಗಿ 18 ವರ್ಷವಾದಾಗ ದೇಹದಲ್ಲಿ ಸ್ನಾಯುಗಳು ಬಲವಾಗುವ ಹಂತದಲ್ಲಿರುತ್ತವೆ, ಬೈಸೆಪ್ಸ್ ಮತ್ತು ಟ್ರೈಸೆಪ್ಸ್ ರೂಪುಗೊಳ್ಳುತ್ತವೆ. ಆದರೆ ಈತನಿಗೆ ಇನ್ನೂ ಕೇವಲ 16 ವರ್ಷ. ವಿರಾಟ್ ಕೊಹ್ಲಿ ವಿಶ್ವ ಚಾಂಪಿಯನ್ ಆದ ಸಮಯದಲ್ಲಿ ಈತ ಜನಿಸಿದ್ದಾನೆ. ಈತನ ಆಟದಲ್ಲಿ ಕೇವಲ ದೈಹಿಕ ಶಕ್ತಿಯಷ್ಟೇ ಅಲ್ಲ, ಅದ್ಭುತವಾದ ತಂತ್ರಗಾರಿಕೆಯೂ ಇದೆ. ಮೈದಾನದ ಎಲ್ಲಾ ದಿಕ್ಕುಗಳಿಗೂ ಚೆಂಡನ್ನು ಅಟ್ಟುವ 360 ಡಿಗ್ರಿ ಸಾಮರ್ಥ್ಯ ಆತನಲ್ಲಿದೆ. ಈತ ಮನುಷ್ಯನೇ ಅಥವಾ ಯಂತ್ರವೇ ಎನ್ನುವಷ್ಟರ ಮಟ್ಟಿಗೆ ಆಕ್ರಮಣಕಾರಿ ಆಟ ಆಡುತ್ತಾನೆ. ಆತನ ಬ್ಯಾಟ್‌ನಲ್ಲಿ ಏನೋ ರಹಸ್ಯವಿದೆ ಎಂಬುದು ನನ್ನ ಅನುಮಾನವಾಗಿದೆ ಎಂದು," ಎಂದು ನಿಯಾಜ್ ಅವರು ತಮಾಷೆ ಮಾಡಿದ್ದಾರೆ.
ಕೇವಲ 15ನೇ ವಯಸ್ಸಿನಲ್ಲಿಯೇ ಅವರು ವಿಶ್ವ ಕ್ರಿಕೆಟ್‌ನ ಗಮನ ಸೆಳೆದಿದ್ದು, ಒಂದರ ನಂತರ ಒಂದರಂತೆ ದಾಖಲೆಗಳನ್ನು ಬರೆಯುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 26 ಎಸೆತಗಳಲ್ಲಿ 78 ರನ್ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದ ಅತಿ ವೇಗದ ಶತಕ ದಾಖಲಿಸುವ ಸನಿಹದಲ್ಲಿದ್ದರು. ಆದರೆ ಕೂದಲೆಳೆ ಅಂತರದಲ್ಲಿ ಅದನ್ನು ತಪ್ಪಿಸಿಕೊಂಡರು.
ಈ ಸಣ್ಣ ಹಿನ್ನಡೆ ಅವರ ಆತ್ಮವಿಶ್ವಾಸವನ್ನು ಕುಗ್ಗಿಸಲಿಲ್ಲ. ನಂತರದ ಪಂದ್ಯಗಳಲ್ಲಿ 0 ಮತ್ತು 8 ರನ್‌ಗಳ ಅಲ್ಪ ಮೊತ್ತಕ್ಕೆ ಔಟಾದರು. ನಂತರದ ಪಂದ್ಯದಲ್ಲಿ 46 ರನ್ ಗಳಿಸಿದರೂ, ಶನಿವಾರದಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 37 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ತಮ್ಮನ್ನ ತಾವು ಸಾಬೀತುಪಡಿಸಿಕೊಂಡರು. ಅಲ್ಲದೆ, ಇವರ ಈ ಅದ್ಭುತ ಆಟಕ್ಕೆ ಕ್ರಿಕೆಟ್ ದಿಗ್ಗಜರಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.












Click it and Unblock the Notifications