Vaibhav Sooryavanshi: ವೈಭವ್ ಸೂರ್ಯವಂಶಿಯನ್ನ ಮನೆಗೆ ಕಳುಹಿಸುವುದೇ ಲೇಸು: ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್
Vaibhav Sooryavanshi: ಭಾರತ-ನ್ಯೂಜಿಲೆಂಡ್ ನಡುವೆ ಭಾನುವಾರ (ನವೆಂಬರ್ 01) ಐದನೇ ಹಾಗೂ ಕೊನೆಯ ಟಿ20 ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನವೇ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಅವರು, ವೈಭವ್ ಸೂರ್ಯವಂಶಿ ಅವರನ್ನು ಸುಮ್ಮನೇ ಮನೆಗೆ ಕಳುಹಿಸುವುದೇ ಲೇಸು ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿಟ್ಟ ಭಾರತೀಯ ಕ್ರಿಕೆಟ್ ತಂಡದ ಮ್ಯಾನೇಜ್‌ಮೆಂಟ್ ನಿರ್ಧಾರದ ವಿರುದ್ಧ ಭಾರತದ ಮಾಜಿ ಕ್ರಿಕೆಟರ್ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ.

ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ
ಟೀಮ್ ಇಂಡಿಯಾವು ನ್ಯಾಜಿಲೆಂಡ್ ವಿರುದ್ಧದ ಮೊದಲ ಮೂರು ಪಂದ್ಯಗಳನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಂಡಿತ್ತು. ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಗಾಯಗೊಂಡಿದ್ದರಿಂದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ಸಿಕ್ಕಿತ್ತು. ಎರಡನೇ ಟಿ20ಯಲ್ಲಿ ಅವಕಾಶ ವಂಚಿತರಾಗಿದ್ದರೂ, ಮೂರನೇ ಪಂದ್ಯದಲ್ಲಿ 45 ರನ್ ಬಾರಿಸಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.
ವೈಭವ್ ಕೈಬಿಟ್ಟ ಕುರಿತು ಚರ್ಚೆ ಶುರು
ಆದರೆ ಆಕ್ಲೆಂಡ್‌ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯಕ್ಕೆ ಇಶಾನ್ ಕಿಶನ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳುತ್ತಿದ್ದರು. ಇದರಿಂದ ವೈಭವ್ ಸೂರ್ಯವಂಶಿ ಅವರನ್ನು ಮತ್ತೆ ಬೆಂಚ್‌ಗೆ ಸೀಮಿತಗೊಳಿಸಲಾಯಿತು. ಈ ಪಂದ್ಯದಲ್ಲಿ ಭಾರತ ಸೋಲನುಭವಿಸಿತು. ಇದರ ಬೆನ್ನಲ್ಲೇ ವೈಭವ್ ಕೈಬಿಟ್ಟ ಕುರಿತು ಚರ್ಚೆಗಳು ಶುರುವಾಗಿವೆ.
ಮ್ಯಾನೇಜ್‌ಮೆಂಟ್ ನಿರ್ಧಾರಕ್ಕೆ ಆಕಾಶ್ ಚೋಪ್ರಾ ಆಕ್ರೋಶ
ಆಕಾಶ್ ಚೋಪ್ರಾ ಅವರು ಮ್ಯಾನೇಜ್‌ಮೆಂಟ್‌ನ ಈ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. 'ಸಾಮಾನ್ಯ ಸಂದರ್ಭಗಳಲ್ಲಿ ಗಾಯಗೊಂಡ ಆಟಗಾರ ಮರಳಿದಾಗ ಬದಲಿ ಆಟಗಾರ ಹೊರಗುಳಿಯುವುದು ಸಹಜ. ಆದರೆ, ಸರಣಿಯ ಫಲಿತಾಂಶ ಈಗಾಗಲೇ ನಿರ್ಧಾರವಾಗಿರುವಾಗ (ಸರಣಿ ವಶವಾದಾಗ) ಯುವ ಆಟಗಾರನಿಗೆ ಮತ್ತಷ್ಟು ಅವಕಾಶಗಳನ್ನು ನೀಡದೆ ಬೆಂಚ್‌ನಲ್ಲಿ ಕೂರಿಸುವುದು ಸರಿಯಾದ ನಿರ್ಧಾರವಲ್ಲ,' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಕಾಶ್ ಚೋಪ್ರಾ ಹೇಳಿದ್ದೇನು?
'ಯಾರಾದರೂ ಗಾಯಗೊಂಡಾಗ ಮಾತ್ರ ಅವಕಾಶ ನೀಡುವುದಿದ್ದರೆ ವೈಭವ್ ಸೂರ್ಯವಂಶಿ ಅವರನ್ನು ಬೆಂಚ್ ಕಾಯಿಸುವ ಬದಲು ಮನೆಗೆ ಕಳುಹಿಸುವುದೇ ಲೇಸು. ಇದರಿಂದ ಅವರು ದೇಶೀಯ ರಣಜಿ ಅಥವಾ ಫಸ್ಟ್ ಕ್ಲಾಸ್ ಕ್ರಿಕೆಟ್ ಪಂದ್ಯಗಳನ್ನಾದರೂ ಆಡಿ ತಮ್ಮ ಫಾರ್ಮ್ ಕಾಯ್ದುಕೊಳ್ಳಬಹುದು,' ಎಂದು ಹೇಳಿದ್ದಾರೆ.
'ಡ್ರೆಸ್ಸಿಂಗ್ ರೂಮ್‌ನಲ್ಲಿ ಹಿರಿಯ ಆಟಗಾರರೊಂದಿಗೆ ಸಮಯ ಕಳೆಯುವುದು ಒಳ್ಳೆಯದೇ. ಆದರೂ, ಮೈದಾನಕ್ಕಿಳಿದು ಆಡುವ ಅನುಭವಕ್ಕೆ ಅದು ಪರ್ಯಾಯವಾಗುವುದಿಲ್ಲ. ಸತತವಾಗಿ ಬೆಂಚ್‌ನಲ್ಲಿ ಕೂರಿಸುವುದರಿಂದ ಯುವ ಆಟಗಾರನ ಆತ್ಮವಿಶ್ವಾಸಕ್ಕೆ ಧಕ್ಕೆ ಉಂಟಾದಂತಾಗುತ್ತದೆ,' ಎಂದು ಆಕ್ರೋಶ ಹೊರಹಾಕಿದ್ದಾರೆ.
ಸರಣಿ ಈಗಾಗಲೇ ಭಾರತದ ವಶವಾಗಿರುವುದರಿಂದ ಮುಂಬರುವ ಪಂದ್ಯಗಳಲ್ಲಾದರೂ ಮ್ಯಾನೇಜ್‌ಮೆಂಟ್ ಯುವ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು ಎಂದು ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಮುಂದಿನ ಅಂದರೆ ಭಾನುವಾರ ನಡೆಯಲಿರುವ ಕೊನೆಯ ಪಂದ್ಯದಲ್ಲಿ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಮ್ಯಾನೇಜ್‌ಮೆಂಟ್ ಅವಕಾಶ ನೀಡುತ್ತದೆಯೇ ಎಂದು ಕಾದುನೋಡಬೇಕಿದೆ. ಇವರ ಆಟ ನೋಡಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ.


Click it and Unblock the Notifications
