Shubman Gill: ಹಾರ್ದಿಕ್ ಪಾಂಡ್ಯ ಬಂದ್ರೆ ತಂಡಕ್ಕೆ ಆನೆಬಲ; ಟೀಮ್ ಇಂಡಿಯಾ ನಾಯಕ
Shubman Gill: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಬುಧವಾರ (ನವೆಂಬರ್ 04) ನಡೆಯಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಅವರು ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ.
ಭಾಗವಹಿಸಲಿರುವ ಸರಣಿಗಳಿಗೆ ಮುನ್ನ ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಅವರು ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಪ್ರಾಮುಖ್ಯತೆ ಹಾಗೂ ತಂಡದ ಬ್ಯಾಟಿಂಗ್ ಸಮತೋಲನದ ಕುರಿತು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹಾರ್ದಿಕ್ ಮತ್ತೆ ಮರಳಿದರೆ ಕೆಳ-ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮತೋಲನವು ಸಂಪೂರ್ಣವಾಗಿ ಬಗೆಹರಿಯಲಿದೆ ಎಂದು ಗಿಲ್ ಸ್ಪಷ್ಟಪಡಿಸಿದ್ದಾರೆ.

ನಾಯಕ ಶುಭಮನ್ ಗಿಲ್ ಹೇಳಿದ್ದೇನು?
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಆಕ್ಲೆಂಡ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ ಅವರಂತಹ ಅಪರೂಪದ ಸಾಮರ್ಥ್ಯವುಳ್ಳ ಆಟಗಾರರು ವಿಶ್ವ ಕ್ರಿಕೆಟ್‌ನಲ್ಲೇ ತೀರ ವಿರಳ ಎಂದು ಬಣ್ಣಿಸಿದ್ದಾರೆ.
'ಹಾರ್ದಿಕ್ ಪಾಂಡ್ಯ ಮರಳಿದರೆ ತಂಡಕ್ಕೆ ಆನೆಬಲ ಬಂದಂತಾಗುತ್ತದೆ'
ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡುವುದು, ಮಧ್ಯಮ ಓವರ್‌ಗಳಲ್ಲಿ ನಿಯಂತ್ರಣ ಸಾಧಿಸುವುದು ಹಾಗೂ ಡೆತ್ ಓವರ್‌ಗಳಲ್ಲಿ ಕಟ್ಟುನಿಟ್ಟಿನ ಬೌಲಿಂಗ್ ದಾಳಿ ಜೊತೆಗೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ವೇಗದ ಬೌಲಿಂಗ್ ಆಲ್-ರೌಂಡರ್ ಪ್ರತಿಯೊಂದು ತಂಡಕ್ಕೂ ಅತ್ಯಂತ ಮೌಲ್ಯಯುತ ಆಸ್ತಿ. ಆದ್ದರಿಂದ 'ಹಾರ್ದಿಕ್ ಪಾಂಡ್ಯ ಅವರು ತಂಡಕ್ಕೆ ಮರಳಿದರೆ ನಮ್ಮ 7 ಮತ್ತು 8ನೇ ಕ್ರಮಾಂಕದ ಬ್ಯಾಟಿಂಗ್ ಸ್ಥಾನಗಳು ಸುಲಭವಾಗಿ ಬಗೆಹರಿಯಲಿವೆ. ಇದು ತಂಡಕ್ಕೆ ಹೆಚ್ಚು ಬ್ಯಾಟಿಂಗ್ ಬಲ ಮತ್ತು ಸಮತೋಲನವನ್ನು ತಂದುಕೊಡುತ್ತದೆ,' ಎಂದು ಹೇಳಿದ್ದಾರೆ.
ತಂಡದ ಬ್ಯಾಟಿಂಗ್ ಯೋಜನೆಯ ಗಿಲ್ ಹೇಳಿದ್ದೇನು?
ಪ್ರಸ್ತುತ ಭಾರತ ತಂಡದ ಮೊದಲ ನಾಲ್ಕು ಕ್ರಮಾಂಕದ ಬ್ಯಾಟರ್‌ಗಳು ಖಾಯಂ ಆಗಿದ್ದು, ನಾಲ್ವರೂ ಬಲಗೈ ಬ್ಯಾಟರ್‌ಗಳಾಗಿದ್ದಾರೆ. ಪಂದ್ಯದ ಸನ್ನಿವೇಶಕ್ಕೆ ತಕ್ಕಂತೆ 5, 6 ಮತ್ತು 7ನೇ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ.
ಪಂದ್ಯದಲ್ಲಿ ಎಡಗೈ ಬ್ಯಾಟರ್ ಅಗತ್ಯವಿದ್ದರೆ 5ನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಅವರನ್ನು ಕಳುಹಿಸಲಾಗುತ್ತದೆ. ಅದೇ ರೀತಿ ಉತ್ತಮ ಅಡಿಪಾಯ ಸಿಕ್ಕಿದ್ದಲ್ಲಿ ಕೆ.ಎಲ್. ರಾಹುಲ್ ಅವರನ್ನು ಆಡಿಸಲಾಗುತ್ತದೆ. ಇನ್ನೂ ಐಪಿಎಲ್ ಸೀಸನ್ ಮುಗಿದಾಗಿನಿಂದಲೂ ಗಾಯದ ಸಮಸ್ಯೆಯಿಂದ ಬಳಲುತ್ತಿರುವ 32 ವರ್ಷದ ಹಾರ್ದಿಕ್ ಪಾಂಡ್ಯ, ಭಾರತ 'ಎ' ಪಂದ್ಯಗಳಿಂದಲೂ ಹೊರಗುಳಿಯಬೇಕಾಯಿತು.
ಪಾಂಡ್ಯ ಅವರೊಂದಿಗೆ ಸದಾ ಸಂಪರ್ಕದಲ್ಲಿರುವುದಾಗಿ ತಿಳಿಸಿದ ಗಿಲ್, ಅವರು ಸಂಪೂರ್ಣ ಗುಣಮುಖರಾಗಿ ಕೆಲವು ದೇಶೀಯ ಪಂದ್ಯಗಳಲ್ಲಿ ಆಡಿದ ನಂತರ ಶೀಘ್ರದಲ್ಲೇ ಮತ್ತೆ ಭಾರತೀಯ ನೀಲಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಏಕದಿನ ಮತ್ತು ಟೆಸ್ಟ್ ಸರಣಿಗಳ ನಿರ್ವಹಣೆ
ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯು ನವೆಂಬರ್ 4ರಿಂದ ಪ್ರಾರಂಭ ಆಗಲಿದೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಪಂದ್ಯಗಳಿಗೆ ಸಿದ್ಧರಾಗಲು ನಾಯಕ ಶುಭಮನ್ ಗಿಲ್ ಸೇರಿದಂತೆ ಪ್ರಮುಖ ಆಟಗಾರರು ಅಂತಿಮ 2 ಏಕದಿನ ಪಂದ್ಯಗಳಿಂದ ಹೊರಗುಳಿಯಲಿದ್ದು, ಆ ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿಲ್ಲಿ ಗಿಲ್ ಹಾರ್ದಿಕ್ ಪಾಂಡ್ಯ ಪರ ವಹಿಸಿ ನೀಡರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.


Click it and Unblock the Notifications
