ಅಫ್ಘಾನ್ ವಿರುದ್ಧ ಟೀಮ್ ಇಂಡಿಯಾ ಗೆದ್ದ ಬೆನ್ನಲ್ಲೇ ಸಂಜು ಸ್ಯಾಮ್ಸನ್ - ವೈಭವ್ ಸೂರ್ಯವಂಶಿ ನಡುವೆ ಭಾರಿ ಸ್ಪರ್ಧೆ..
Sanju Samson Vs Vaibhav Sooryavanshi: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ (ಸೆಪ್ಟೆಂಬರ್ 13) ಅಫ್ಘಾನಿಸ್ತಾನ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತವು 7 ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಆದರೂ ತಂಡದ ಆಯ್ಕೆ ಮತ್ತು ಓಪನರ್ ಸಂಜು ಸ್ಯಾಮ್ಸನ್ ಅವರ ಕಳಪೆ ಫಾರ್ಮ್ ಹಾಗೂ ವೈಭವ್ ಸೂರ್ಯವಂಶಿ ಅವರನ್ನು ಚೆಂಚ್ ಕಾಯಿಸಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಭಿಷೇಕ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದ 31 ವರ್ಷದ ಅನುಭವಿ ಬ್ಯಾಟರ್ ಸಂಜು ಸ್ಯಾಮ್ಸನ್, ಕೇವಲ 10 ರನ್ ಗಳಿಸಿ ಅಜ್ಮತುಲ್ಲಾ ಒಮರ್‌ಜಾಯ್‌ಗೆ ವಿಕೆಟ್ ಒಪ್ಪಿಸಿದರು. 2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸತತ ಶತಕಗಳನ್ನು ಬಾರಿಸಿ ಸ್ಥಾನ ಗಟ್ಟಿಮಾಡಿಕೊಂಡಿದ್ದ ಸಂಜು, ಆ ಬಳಿಕ ಮತ್ತೆ ತಮ್ಮ ಹಳೆಯ ವೈಫಲ್ಯವನ್ನು ಮುಂದುವರಿಸಿದ್ದಾರೆ.

ಹಲವು ಸರಣಿಗಳಲ್ಲಿ ಕಾಣಿಸಿಕೊಂಡಿದ್ದ ವೈಭವ್
ತಂಡದಲ್ಲಿ ಇಶಾನ್ ಕಿಶನ್ ಕೂಡ ವಿಕೆಟ್ ಕೀಪರ್-ಬ್ಯಾಟರ್ ಆಗಿ ಲಭ್ಯವಿರುವುದರಿಂದ ಸಂಜು ಅವರ ಸ್ಥಾನಕ್ಕೆ ಇದೀಗ ಕಂಟಕ ಎದುರಾಗಿದೆ. ಐಪಿಎಲ್ ಹಾಗೂ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಅತಿ ಕಿರಿಯ ವಯಸ್ಸಿನಲ್ಲೇ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದ 15 ವರ್ಷದ ವೈಭವ್ ಸೂರ್ಯವಂಶಿ, ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿಯೂ ಕಣಕ್ಕಿಳಿದಿದ್ದರು.
ವೈಭವ್ ಸೂರ್ಯವಂಶಿ ಕೈಬಿಟ್ಟಿದ್ದಕ್ಕೆ ಫ್ಯಾನ್ಸ್ ಅಸಮಾಧಾನ
ಆದರೆ ಭಾರತೀಯ ಕ್ರಿಕೆಟ್‌ನ ಭವಿಷ್ಯದ ದೀರ್ಘಕಾಲದ ಆಸ್ತಿ ಎಂದೇ ಬಿಂಬಿತವಾಗಿರುವ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಮೊದಲ ಪಂದ್ಯದಲ್ಲಿ ಅವಕಾಶ ನೀಡದಿರುವುದು ಅಭಿಮಾನಿಗಳು ಹಾಗೂ ವಿಶ್ಲೇಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಸ್ತುತ ಅಭಿಷೇಕ್ ಶರ್ಮಾ ತಮ್ಮ ಅದ್ಭುತ ಫಾರ್ಮ್‌ನಿಂದಾಗಿ ಓಪನಿಂಗ್ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.
ವೈಭವ್-ಸಂಜು ನಡುವೆ ಸ್ಪರ್ಧೆ
ಆದ್ದರಿಂದ ಉಳಿದ ಒಂದು ಓಪನರ್ ಸ್ಥಾನಕ್ಕೆ 31 ವರ್ಷದ ಸಂಜು ಸ್ಯಾಮ್ಸನ್ ಮತ್ತು 15 ವರ್ಷದ ವೈಭವ್ ಸೂರ್ಯವಂಶಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಟೀಮ್ ಇಂಡಿಯಾ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಮುಂದಿನ ಪಂದ್ಯಗಳಲ್ಲಿ ಅನುಭವಕ್ಕೆ ಆದ್ಯತೆ ನೀಡುತ್ತಾರೋ ಅಥವಾ ವೈಭವ್ ಸೂರ್ಯವಂಶಿ ಅವರಂತಹ ಭವಿಷ್ಯದ ಯುವ ಆಟಗಾರನಿಗೆ ಅವಕಾಶ ನೀಡುತ್ತಾರೋ ಕಾದು ನೋಡಬೇಕಿದೆ.
ಸರಣಿಯ ಮುಂದಿನ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್‌ಗೆ ತಮ್ಮ ಪ್ರತಿಭೆ ಸಾಬೀತುಪಡಿಸಲು ಕೊನೆಯ ಅವಕಾಶಗಳು ಸಿಗುವ ಸಾಧ್ಯತೆಯಿದೆ. ಒಂದು ವೇಳೆ ಸಿಕ್ಕರೂ ಇದರಲ್ಲೂ ಫ್ಲಾಪ್ ಆದರೆ ಅವರ ಸ್ಥಾನಕ್ಕೆ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಬರುವುದು ಪಕ್ಕಾ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ.
ಟೀಮ್ ಇಂಡಿಯಾ ಗೆಲುವುದು.. ಸಂಜು ಫ್ಲಾಪ್
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಅವರು ಬೌಲಿಂಗ್ ಮಾಡಲು ನಿರ್ಧರಿಸಿದರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಅಪ್ಘಾನಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 156 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು.
ಬಳಿಕ ಅಫ್ಘಾನ್ ನೀಡಿದ ಸಾಧಾರಣ ಗುರಿಯನ್ನು ಬೆನ್ನತ್ತಿದ್ದ ಟೀಮ್ ಇಂಡಿಯಾಕ್ಕೆ ವೈಭವ್ ಸೂರ್ಯವಂಶಿ ಅವರ ಜಾಗದಲ್ಲಿ ಅವಕಾಶ ಪಡೆದ ಸಂಜು ಸ್ಯಾಮ್ಸನ್ ಕೇವಲ 10 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ, ನಂತರ ಜೊತೆಯಾದ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸುತ್ತಾ ಅಫ್ಘಾನಿಸ್ತಾನದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.
ಇವರಿಬ್ಬರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತವು ಕೇವಲ 13.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು. ಅಬ್ಬರದ ಬ್ಯಾಟಿಂಗ್ ಮಾಡಿದ ಅಭಿಷೇಕ್ ಕೇವಲ 32 ಎಸೆತಗಳಲ್ಲಿ 7 ಬೌಂಡರಿ, 7 ಸಿಕ್ಸರ್‌ಗಳ ಸಹಿತ ಬರೋಬ್ಬರಿ 82 ಗಳಿಸಿದರೆ, ಇಶಾನ್ ಕಿಶನ್ 42(33) ರನ್ ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಭಾರತದ ಪರ ಮಾರಕ ಬೌಲಿಂಗ್ ನಡೆಸಿದ ಅರ್ಷದೀಪ್ ಸಿಂಗ್ ಅವರು 19 ರನ್‌ಗೆ 3 ವಿಕೆಟ್ ಕಬಳಿಸಿ ಮಿಂಚಿದರು. ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದು ಎದುರಾಳಿ ತಂಡವನ್ನು 156 ರನ್‌ಗಳಿಗೆ ಕಟ್ಟಿಹಾಕಿದರು.


Click it and Unblock the Notifications
