Sanju Samson: ದಕ್ಷಿಣ ಆಫ್ರಿಕಾದಲ್ಲಿ ಸಂಜು ಸ್ಯಾಮ್ಸನ್ ಅಬ್ಬರದ ಶತಕ; ರಿಷಬ್ ಪಂತ್‌ಗೆ ಹೊಸ ಟೆನ್ಷನ್ ಶುರು
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಬ್ಬರಿಸಿದ್ದಾರೆ. ಡರ್ಬನ್ ಕಿಂಗ್ಸ್‌ಮೀಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ 7 ಬೌಂಡರಿ 10 ಭರ್ಜರಿ ಸಿಕ್ಸರ್ ಸಹಿತ 107 ರನ್ ಗಳಿಸುವ ಮೂಲಕ ಭಾರತ ತಂಡ ಬೃಹತ್ ಮೊತ್ತ ಗಳಿಸಲು ಕಾರಣವಾದರು.
ಸ್ಯಾಮ್ಸನ್‌ರ ಭರ್ಜರಿ ಶತಕದ ನೆರವಿನಿಂದ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿತು. ಸಂಜು ಸ್ಯಾಮ್ಸನ್ 107 ರನ್ ಗಳಿಸಿದರೆ, ಎರಡನೇ ಅತಿ ದೊಡ್ಡ ಮೊತ್ತ ತಿಲಕ್ ವರ್ಮಾ ಗಳಿಸಿದ 33 ರನ್ ಆಗಿದೆ. ಒಂದು ಕಾಲದಲ್ಲಿ ಅವಕಾಶ ಸಿಕ್ಕರೆ ಎಂದು ಕಾಯುತ್ತಿದ್ದ ಸಂಜು ಸ್ಯಾಮ್ಸನ್ ಕೊನೆಗೂ ಫಾರ್ಮ್‌ಗೆ ಮರಳಿದ್ದು, ಸತತವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ತಮ್ಮ ಸ್ಥಾನ ಗಟ್ಟಿಮಾಡಿಕೊಳ್ಳುತ್ತಿದ್ದಾರೆ.

2015ರಲ್ಲಿ ಸಂಜು ಸ್ಯಾಮ್ಸನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 10 ವರ್ಷಗಳಲ್ಲಿ ಅವರು ಆಡಿರುವುದು ಕೇವಲ 34 ಟಿ20 ಪಂದ್ಯಗಳು ಮಾತ್ರ, ಹಲವು ಬಾರಿ ಅವರು ತಂಡಕ್ಕೆ ಆಯ್ಕೆಯಾಗುತ್ತಿರಲಿಲ್ಲ, ತಂಡಕ್ಕೆ ಆಯ್ಕೆಯಾದರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗುತ್ತಿರಲಿಲ್ಲ, ಅವಕಾಶ ಸಿಕ್ಕಾಗ ಸ್ಯಾಮ್ಸನ್ ದೊಡ್ಡ ರನ್ ಬಾರಿಸುತ್ತಿರಲಿಲ್ಲ. ಇದೆಲ್ಲ ಕಾರಣದಿಂದ ಅವರು ಹೆಚ್ಚಿನ ಪಂದ್ಯಗಳನ್ನು ಆಡಿರಲಿಲ್ಲ.
ಕೊನೆಗೂ ಫಾರ್ಮ್‌ಗೆ ಮರಳಿದ ಸ್ಯಾಮ್ಸನ್
ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾದ ಸಂಜು ಸ್ಯಾಮ್ಸನ್ ಮೊದಲ ಎರಡು ಪಂದ್ಯಗಳಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡಲಿಲ್ಲ, ಸರಣಿಯ ಮೊದಲ ಪಂದ್ಯದಲ್ಲಿ 19 ಎಸೆತಗಳಲ್ಲಿ 29 ರನ್ ಗಳಿಸಿದರೆ, ಎರಡನೇ ಪಂದ್ಯದಲ್ಲಿ ಕೇವಲ 10 ರನ್ ಗಳಿಸಿದರು. ಕೊನೆಯ ಪಂದ್ಯದಲ್ಲಿ ಸ್ಯಾಮ್ಸನ್‌ಗೆ ಅವಕಾಶ ಸಿಗುತ್ತದಾ ಎನ್ನುವ ಅನುಮಾನ ಶುರುವಾಗಿತ್ತು, ಆದರೆ ನಾಯಕ ಮತ್ತು ಕೋಚ್ ಸ್ಯಾಮ್ಸನ್ ಮೇಲೆ ನಂಬಿಕೆಯಿಟ್ಟು ಮತ್ತೊಂದು ಅವಕಾಶ ನೀಡಿದರು.
ಸರಣಿಯ ಕೊನೆಯ ಪಂದ್ಯದಲ್ಲಿ ಅಬ್ಬರಿಸಿದ ಸಂಜು ಸ್ಯಾಮ್ಸನ್ ತಮ್ಮ ಮೊದಲ ಟಿ20 ಅಂತಾರಾಷ್ಟ್ರೀಯ ಶತಕ ಗಳಿಸಿದರು. 47 ಎಸೆತಗಳಲ್ಲಿ 11 ಬೌಂಡರಿ 8 ಸಿಕ್ಸರ್ ಸಹಿತ 111 ರನ್ ಗಳಿಸಿದರು. ಈ ಮೂಲಕ ನಾಯಕ ಮತ್ತು ಕೋಚ್ ಇಟ್ಟಿದ್ದ ನಂಬಿಕೆ ಉಳಿಸಿಕೊಂಡರು.
ಅಂದು ನೀಡಿದ ಉತ್ತಮ ಪ್ರದರ್ಶನದಿಂದಲೇ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾದರು. ಇದೀಗ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ.
ಪಂತ್‌ಗೆ ಶುರುವಾಯ್ತು ಸಂಕಷ್ಟ
ಭಾರತ ಟಿ20 ತಂಡದಲ್ಲಿ ವಿಕೆಟ್ ಬ್ಯಾಟರ್ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ರಿಷಬ್ ಪಂತ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಕಾರಣ, ಸಂಜು ಸ್ಯಾಮ್ಸನ್ ಟಿ20 ತಂಡದಲ್ಲಿ ಸ್ಥಾನ ಪಡೆದುಕೊಂಡರು. ಇದೀಗ ಸ್ಯಾಮ್ಸನ್ ಆಡುತ್ತಿರುವ ರೀತಿಗೆ ಸೀಮಿತ ಓವರ್ ಗಳ ಮಾದರಿಯಲ್ಲಿ ಅವರು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುತ್ತಿದ್ದು ಪಂತ್‌ಗೆ ಹೊಸ ತಲೆನೋವು ಶುರುವಾಗಿದೆ.












Click it and Unblock the Notifications