Sachin Tendulkar: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ರಹಾನೆಗೆ ವಿಶೇಷ ಸಂದೇಶ
Sachin Tendulkar: ಟೀಮ್ ಇಂಡಿಯಾ ಸ್ಟಾರ್ ಅಜಿಂಕ್ಯ ರಹಾನೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಕ್ರಿಕೆಟ್ ದೇವರು ಅಂತಲೇ ಪ್ರಸಿದ್ಧಿಯಾಗಿರುವ ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟರ್ ಖಾತೆ ಮೂಲಕ ರಹಾನೆಗೆ ವಿಶೇಷ ಸಂದೇಶವನ್ನು ರವಾನೆ ಮಾಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಭಾರತೀಯ ಹಿರಿಯ ಬ್ಯಾಟರ್ ಅಜಿಂಕ್ಯ ರಹಾನೆ ಅವರಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಭಾವನಾತ್ಮಕ ಸಂದೇಶನ್ನು ರವಾನೆ ಮಾಡಿದ್ದಾರೆ. ರಹಾನೆ ಅವರ ತಾಳ್ಮೆ, ಶಾಂತಚಿತ್ತತೆಯ ಪ್ರದರ್ಶನ ಹಾಗೂ ಕ್ರೀಡಾಂಗಣದಲ್ಲಿನ ಅಚಲ ದೃಢತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ

ರಹಾನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿನ್
'ನಿಮ್ಮ ಅದ್ಭುತ ಕ್ರಿಕೆಟ್ ವೃತ್ತಿಜೀವನಕ್ಕೆ ಅಭಿನಂದನೆಗಳು ರಹಾನೆ. ಮುಂಬೈ ಪರ ನಾವು ಮೊದಲ ಬಾರಿಗೆ ಜೊತೆಯಾಗಿ ಬ್ಯಾಟಿಂಗ್ ಮಾಡಿದಾಗ, ಫಲಿತಾಂಶಗಳಿಗಾಗಿ ಆತುರಪಡದೆ ತಂಡಕ್ಕಾಗಿ ಕಠಿಣ ಪರಿಶ್ರಮ ಪಡಲು ಸದಾ ಸಿದ್ಧರಿರುತ್ತಿದ್ದ ಆಟಗಾರನನ್ನು ನಾನು ನಿಮ್ಮಲ್ಲಿ ಕಂಡಿದ್ದೆ. ಆ ಗುಣವೇ ಆಸ್ಟ್ರೇಲಿಯಾದಲ್ಲಿ ನೀವು ತೋರಿದ ಶ್ರೇಷ್ಠ ಸಾಧನೆಗೆ ಕಾರಣವಾಯಿತು,' ಎಂದು ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಸಂಯಮದಿಂದಿರುವುದು ಆಕ್ರಮಣಕಾರಿ ಆಟಕ್ಕೆ ವಿರುದ್ಧವಾದದ್ದಲ್ಲ. ಬದಲಿಗೆ ಅದು ಇಡೀ ತಂಡಕ್ಕೆ ಭಯವಿಲ್ಲದೆ ಆಡುವ ಆತ್ಮವಿಶ್ವಾಸ ನೀಡುತ್ತದೆ ಎಂಬುದನ್ನು ನೀವು ತೋರಿಸಿಕೊಟ್ಟಿದ್ದೀರಿ. ನಿಮ್ಮ ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು ಮತ್ತು ನಿಮ್ಮ ಕುಟುಂಬಕ್ಕೆ ಶುಭಹಾರೈಕೆಗಳು,' ಎಂದು ತಿಳಿಸಿದ್ದಾರೆ.
Congratulations on a remarkable career, @ajinkyarahane88.
— Sachin Tendulkar (@sachin_rt) July 30, 2026
The first time we batted together for Mumbai, I saw someone who never chased moments. They came to you because you were willing to do the hard yards for the team. That same quality defined your finest hour in Australia.…
ತೆಂಡೂಲ್ಕರ್‌ರಿಂದ ಉತ್ತಮ ಪ್ರೋತ್ಸಾಹ
ಸಚಿನ್ ತೆಂಡೂಲ್ಕರ್ ಮತ್ತು ಅಜಿಂಕ್ಯ ರಹಾನೆ ಅವರು ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರವಾಗಿ ಹಾಗೂ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಜೊತೆಯಾಗಿ ಆಡಿದ್ದಾರೆ. 2013ರ ಮಾರ್ಚ್ 22ರಂದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ರಹಾನೆ ಪಾದಾರ್ಪಣೆ ಮಾಡಿದಾಗ, ಸಚಿನ್ ನಾನ್‌ಸ್ಟ್ರೈಕರ್‌ನಲ್ಲಿದ್ದು ಯುವ ಆಟಗಾರನಿಗೆ ಪ್ರೋತ್ಸಾಹ ನೀಡಿದ್ದರು.
ಅದ್ಭುತ ದಾಖಲೆ ಮಾಡಿದ ರಹಾನೆ
ಅಜಿಂಕ್ಯ ರಹಾನೆ ಟೆಸ್ಟ್ ನಾಯಕನಾಗಿ ಅದ್ಭುತ ದಾಖಲೆ ಹೊಂದಿದ್ದಾರೆ. ಕೇವಲ 5 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ಭಾರತದ ಟೆಸ್ಟ್ ನಾಯಕರ ಪೈಕಿ ರಹಾನೆ ಅತ್ಯಧಿಕ ಗೆಲುವಿನ ದಾಖಲೆ ಹೊಂದಿದ್ದಾರೆ (4 ಗೆಲುವು, 2 ಡ್ರಾ). ವಿಶೇಷವಾಗಿ 2020-21ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಮೆಲ್ಬೋರ್ನ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿ, ಆಸ್ಟ್ರೇಲಿಯಾದ ವಿರುದ್ಧ ಭಾರತಕ್ಕೆ 2-1 ಅಂತರದ ಐತಿಹಾಸಿಕ ಸರಣಿ ಗೆಲುವು ತಂದುಕೊಟ್ಟು ಗಮನ ಸೆಳೆದಿದ್ದರು.
ಅಜಿಂಕ್ಯ ರಹಾನೆ ಅವರು ಟೀಮ್ ಇಂಡಿಯಾ ಪರ 85 ಟೆಸ್ಟ್ ಪಂದ್ಯಗಳನ್ನು ಆಡಿದ್ದು,12 ಶತಕಗಳು, 26 ಅರ್ಧಶತಕಗಳ ಸಹಿತ 5,077 ರನ್‌ಗಳನ್ನು ಸಿಡಿಸಿದ್ದಾರೆ. 90 ಏಕದಿನ ಕ್ರಿಕೆಟ್ ಪಂದ್ಯಗಳಿಂದ 3 ಶತಕಗಳು, 24 ಅರ್ಧಶತಕಗಳೊಂದಿಗೆ 2,962 ರನ್, 20 ಟಿ20 ಕ್ರಿಕೆಟ್ ಪಂದ್ಯಗಳನ್ನು ಆಡಿ 375 ರನ್ ಗಳಿಸಿದ್ದಾರೆ.
ನಿವೃತ್ತಿ ಘೋಷಣೆ ಬಳಿಕ ಭಾವುಕರಾಗಿ ಮಾತನಾಡಿದ 36 ವರ್ಷದ ರಹಾನೆ ಅವರು, 'ಜೀವನದ ಪ್ರತಿಯೊಂದಕ್ಕೂ ಆರಂಭ ಮತ್ತು ಅಂತ್ಯ ಇರುತ್ತದೆ. ಸಮಯ ಬಂದಾಗ ಅದನ್ನು ಗೌರವಿಸಿ ಮುನ್ನಡೆಯಬೇಕು. ನನ್ನ ಬ್ಯಾಟಿಂಗ್‌ನಲ್ಲಿ ನಾನು ಯಾವಾಗಲೂ ಸಮಯಕ್ಕೆ ಆದ್ಯತೆ ನೀಡಿದ್ದೆ. ಈಗ ನನ್ನ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಹೇಳಲು ಇದು ಸರಿಯಾದ ಸಮಯ ಎಂದು ಭಾವಿಸುತ್ತೇನೆ. ಚಿಕ್ಕ ವಯಸ್ಸಿನಿಂದಲೂ ಪ್ರತಿ ದಿನ, ಪ್ರತಿ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಕ್ಯಾಪ್ ಧರಿಸುವುದೇ ನನ್ನ ಏಕೈಕ ಕನಸಾಗಿತ್ತು,' ಎಂದು ಹೇಳುವ ಮೂಲಕ ಕಣ್ಣೀರಿಟ್ಟಿದ್ದಾರೆ. ಒಟ್ಟಿನಲ್ಲಿ ರಹಾನೆ ದಿಢೀರ್ ನಿವೃತ್ತಿ ಘೋಷಣೆ ಮಾಡಿರುವುದು ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ.


Click it and Unblock the Notifications
