Riyan Parag: ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಧಮ್ ಹೊಡೆಯುತ್ತಿರುವ ವಿಡಿಯೋ ವೈರಲ್: ಬ್ಯಾನ್ ಸಾಧ್ಯತೆ
Riyan Parag: ಮುಲ್ಲನ್‌ಪುರ್‌ನ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ (ಏಪ್ರಿಲ್ 28) ನಡೆದ ಐಪಿಎಲ್ ಪಂದ್ಯದಲ್ಲಿ ಡೊನೊವನ್ ಫೆರೇರಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಪಂಜಾಬ್ ಸತತ ಗೆಲುವಿನ ಓಟಕ್ಕೆ ಬ್ರೇಕ್ ಕೂಡ ಹಾಕಿತು. ಈ ಮಧ್ಯಯೇ ಆರ್‌ಆರ್ ನಾಯಕ ರಿಯಾನ್ ಪರಾಗ್ ಅವರು ಸಿಗರೇಟ್ ಹೊಗೆ ಬಿಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಹೈವೋಲ್ಟೇಜ್ ಪಂದ್ಯದ ವೇಳೆ ಗ್ಯಾಲರಿಯಲ್ಲಿ ಕುಳಿತುಕೊಂಡು ವೇಪಿಂಗ್ ಮಾಡುತ್ತಿರುವ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದರ ಜೊತೆಗೆ ಭಾರಿ ಚರ್ಚೆಗೂ ಕಾರಣವಾಗಿದೆ.

ಪರಾಗ್ ಧಮ್ ಹೊಡೆಯುತ್ತಿರುವ ದೃಶ್ಯ ವೈರಲ್
ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ರಿಯಾನ್ ಪರಾಗ್ 16 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 29 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಪಂದ್ಯದ ಎರಡನೇ ಇನಿಂಗ್ಸ್‌ನ 16ನೇ ಓವರ್ ನಡೆಯುವ ವೇಳೆ ಲೈವ್ ಬ್ರಾಡ್‌ಕಾಸ್ಟ್ ಕ್ಯಾಮೆರಾ ರಾಜಸ್ಥಾನ್ ರಾಯಲ್ಸ್ ತಂಡದ ಡ್ರೆಸ್ಸಿಂಗ್ ರೂಮ್‌ನತ್ತ ತಿರುಗಿತು. ಈ ವೇಳೆ ಸಹ ಆಟಗಾರರಾದ ಧ್ರುವ್ ಜುರೆಲ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಪಕ್ಕದಲ್ಲೇ ಕುಳಿತಿದ್ದ ಪರಾಗ್ ಇ-ಸಿಗರೇಟ್ ಬಳಸುತ್ತಿರುವ ದೃಶ್ಯ ಸ್ಪಷ್ಟವಾಗಿ ಕಂಡುಬಂದಿದೆ.
ಪರಾಗ್‌ಗೆ ಸಂಕಷ್ಟ ಎದುರಾಗುವ ಸಾಧ್ಯತೆ
ಈ ನಡೆಯು ಕೇವಲ ಕ್ರೀಡಾ ಶಿಸ್ತಿನ ಉಲ್ಲಂಘನೆಯಷ್ಟೇ ಅಲ್ಲದೆ, ಕಾನೂನುಬದ್ಧವಾಗಿಯೂ ಪರಾಗ್ ಅವರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಭಾರತದಲ್ಲಿ 2019ರ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆಯಡಿಯಲ್ಲಿ ಇ-ಸಿಗರೇಟ್ ಮತ್ತು ವೇಪ್‌ಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕ್ರೀಡಾಂಗಣದ ಡ್ರೆಸ್ಸಿಂಗ್ ರೂಮ್ ಮತ್ತು ಡಗೌಟ್‌ಗಳಲ್ಲಿ ಧೂಮಪಾನ ಅಥವಾ ವೇಪಿಂಗ್ ಮಾಡುವುದು ಬಿಸಿಸಿಐನ ಕಟ್ಟುನಿಟ್ಟಾದ ನಿಯಮಗಳ ಉಲ್ಲಂಘನೆಯಾಗಿದೆ. ತಂಡದ ನಾಯಕನಾಗಿ ಮತ್ತು ಕೋಟ್ಯಂತರ ಯುವಕರಿಗೆ ಮಾದರಿ ಆಗಿರಬೇಕಾದ ಆಟಗಾರನೊಬ್ಬ ಇಂತಹ ವರ್ತನೆ ತೋರಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ರಿಯಾನ್ ಪರಾಗ್‌ಗೆ ಬ್ಯಾನ್ ಆತಂಕ
ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿಯು ಈ ದೃಶ್ಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದೆ. ಒಂದು ವೇಳೆ ತಪ್ಪಿತಸ್ಥರೆಂದು ಸಾಬೀತಾದರೆ, ಪಂದ್ಯದ ಶುಲ್ಕದ ಮೇಲೆ ಭಾರಿ ಮೊತ್ತದ ದಂಡ ವಿಧಿಸಬಹುದು. ಅಲ್ಲದೆ, ನಿಯಮ ಉಲ್ಲಂಘಟನೆ ಎಂದು ಪರಿಗಣಿಸಿದರೆ 1 ಅಥವಾ 2 ಪಂದ್ಯಗಳಿಂದ ನಿಷೇಧ ಹೇರಬಹುದು. ತಂಡದ ಮ್ಯಾನೇಜ್‌ಮೆಂಟ್ ಆಂತರಿಕವಾಗಿ ಅವರಿಗೆ ನಾಯಕತ್ವದ ಜವಾಬ್ದಾರಿಯಿಂದ ಎಚ್ಚರಿಕೆ ನೀಡುವ ಸಾಧ್ಯತೆಯಿದೆ.
ಸಂಜು ಸ್ಯಾಮ್ಸನ್ ಸಿಎಸ್‌ಕೆ ತಂಡಕ್ಕೆ ಹೋದ ನಂತರ ಈ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸಾರಥ್ಯ ವಹಿಸಿಕೊಂಡಿರುವ ರಿಯಾನ್ ಪರಾಗ್ ಅವರ ಬ್ಯಾಟಿಂಗ್ ಪ್ರದರ್ಶನ ಕಳೆಪೆಯಾಗಿದೆ. ಈ ನಡುವೆ ಇಂತಹ ವಿವಾದಗಳು ಅವರ ವೃತ್ತಿಜೀವನಕ್ಕೆ ಕಪ್ಪುಚುಕ್ಕೆಯಾಗುವ ಆತಂಕ ಎದುರಾಗಿದೆ.
What Was Riyan Parag Even Thinking About ?
— TIRAMISU (@desiculerr) April 28, 2026
Under 200 Cameras And Still Vaping pic.twitter.com/An8yH57I0v
ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ ಪೇರಿಸಿತು. ಬಳಿಕ ಪಂಜಾಬ್ ನೀಡಿದ 223 ರನ್‌ಗಳ ಗುರಿಯನ್ನು ಆರ್‌ಆರ್ 19.2 ಓವರ್‌ಗಳಿಗೆ ಮುಗಿಸಿ ಗೆಲುವಿನ ನಗೆ ಬೀರಿತು. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೇರಿದೆ.












Click it and Unblock the Notifications