Bengaluru Weather Report: ಡೆಲ್ಲಿ ವಿರುದ್ಧ ಸೋಲನುಭವಿಸಿದ್ದ ಆರ್‌ಸಿಬಿಗೆ ಗುಜರಾತ್ ಸವಾಲು; ಮಳೆ ಭೀತಿ ಇದೆಯೇ? ಇಲ್ಲಿದೆ ವರದಿ
RCB vs GT IPL 2026: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ (ಏಪ್ರಿಲ್ 24) ಸಂಜೆ ನಡೆಯಲಿರುವ ಐಪಿಎಲ್ 2026ರ 34ನೇ ಪಂದ್ಯದಲ್ಲಿ ಹಾಲಿ ಚಾಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದೆ. ಹಾಗಾದ್ರೆ, ಇಂದು ರಾಜಧಾನಿಯಲ್ಲಿ ವಾತಾವರಣ ಹೇಗಿರಲಿದೆ? ಈ ಬಗ್ಗೆ ಹವಾಮಾನ ಇಲಾಖೆ ಹೇಳೋದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೆ ಆರು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು, ಎರಡರಲ್ಲಿ ಸೋಲನುಭವಿಸುವ ಅಂಕಪಟ್ಟಿಯಲ್ಲಿ 8 ಪಾಯಿಂಟ್ಸ್‌ಗಳೊಂದಿಗೆ ಮೂರನೇ ಸ್ಥಾನ ಅಲಂಕರಿಸಿದೆ. ಇನ್ನೂ ತವರು ಮೈದಾನದಲ್ಲಿ ಇಂದು ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಭರವಸೆಯನ್ನು ಆರ್‌ಸಿಬಿ ಮೂಡಿಸಿದೆ.

ಗೆಲುವಿನ ಲಯಕ್ಕೆ ಮರಳಲು ಭರ್ಜರಿ ಸಿದ್ಧತೆ
ಆರ್‌ಸಿಬಿ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಸೋಲನುಭವಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತ್ತು. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರು 38 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 63 ರನ್ ಚಚ್ಚಿದರು. ಆದರೆ, ಉಳಿದ ಬ್ಯಾಟರ್‌ಗಳು ದೊಡ್ಡ ಮೊತ್ತದ ಕೊಡುಗೆ ನೀಡುವಲ್ಲಿ ವಿಫಲರಾದರು.
ಆರ್‌ಸಿಬಿ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು, ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ ಜಯಭೇರಿ ಬಾರಿಸಿತು. ಕೆ.ಎಲ್.ರಾಹುಲ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅರ್ಧಶತಕ ಸಿಡಿಸಿ ಮಿಂಚಿದರೆ, ಡೇವಿಡ್ ಮಿಲ್ಲರ್ ಅಬ್ಬರದ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಸೋಲಿನ ಮೂಲಕ ಕಂಗೆಟ್ಟಿರುವ ರಜತ್ ಪಡೆ ಗೆಲುವಿನ ಲಯಕ್ಕೆ ಮರಳಲು ಭರ್ಜರಿ ಸಿದ್ಧತೆ ನಡೆಸಿದೆ.
ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ತಂಡವು ಸತತ ಎರಡು ಸೋಲುಗಳೊಂದಿಗೆ ತನ್ನ ಅಭಿಯಾನ ಆರಂಭಿಸಿತ್ತಾದರೂ, ನಂತರ ಸತತ ಮೂರು ಪಂದ್ಯಗಳನ್ನು ಗೆದ್ದು ಲಯಕ್ಕೆ ಮರಳಿತ್ತು. ಆದರೆ, ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮತ್ತೆ 99 ರನ್‌ಗಳ ಭಾರೀ ಅಂತರದ ಸೋಲನುಭವಿಸಿತು. ಆದ್ದರಿಂದ ಆರ್‌ಸಿಬಿ ವಿರುದ್ಧ ಗೆಲ್ಲಲ್ಲೇಬೇಕೆನ್ನುವ ಪಣ ತೊಟ್ಟು ನಿಂತಿದೆ.
ಬೆಂಗಳೂರು ಹವಾಮಾನ ವರದಿ
ಅಕ್ಯೂವೆದರ್ ವರದಿಯ ಪ್ರಕಾರ, ಏಪ್ರಿಲ್ 24ರ ಶುಕ್ರವಾರ ಬೆಂಗಳೂರಿನಲ್ಲಿ ಮಳೆಯಾಗುವ ಯಾವುದೇ ಮುನ್ಸೂಚನೆ ಇಲ್ಲ. ಹಾಗಾಗಿ ಅಭಿಮಾನಿಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣ ಪಂದ್ಯವನ್ನು ವೀಕ್ಷಣೆ ಮಾಡಬಹುದು. ಹಗಲಿನ ವೇಳೆ ತಾಪಮಾನವು ಸುಮಾರು 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಸಂಜೆಯ ವೇಳೆಗೆ ತಂಪಾದ ವಾತಾವರಣ ಇರಲಿದೆ. ಇನ್ನೂ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚಿನ ಅನುಕೂಲವಾಗಿರಲಿದ್ದು, ರನ್‌ಗಳ ಮಳೆ ಹರಿಯುವ ಸಾಧ್ಯತೆಯಿದೆ.
ಆರ್‌ಸಿಬಿ-ಜಿಟಿ ಮುಖಾಮುಖಿ ಸಾಧನೆಗಳ ವಿವರ
* ಒಟ್ಟು ಪಂದ್ಯಗಳು: 06
* ಆರ್‌ಸಿಬಿ ಜಯ: 03
* ಗುಜರಾತ್ ಟೈಟಾನ್ಸ್ ಜಯ: 03
ಪಂದ್ಯದ ಸಮಯ, ನೇರ ಪ್ರಸಾರದ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವು ಏಪ್ರಿಲ್ 24, ಶುಕ್ರವಾರದಂದು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7:30ಕ್ಕೆ ಆರಂಭವಾಗಲಿದೆ. ಪಂದ್ಯದ ಟಾಸ್ ಪ್ರಕ್ರಿಯೆಯು ಸಂಜೆ 7 ಗಂಟೆಗೆ ನಡೆಯಲಿದೆ. ಭಾರತದಲ್ಲಿ ಈ ಪಂದ್ಯದ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಲಭ್ಯವಿರುತ್ತದೆ. ಇನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಪಂದ್ಯವನ್ನು ವೀಕ್ಷಿಸಲು ಇಚ್ಛಿಸುವ ಅಭಿಮಾನಿಗಳು, ಜಿಯೋಹಾಟ್‌ಸ್ಟಾರ್ (JioHotstar) ಆಪ್ ಮತ್ತು ವೆಬ್‌ಸೈಟ್ ಮೂಲಕ ಲೈವ್ ಸ್ಟ್ರೀಮಿಂಗ್ ವೀಕ್ಷಣೆ ಮಾಡಹುಬಹುದು.












Click it and Unblock the Notifications