RCB: ಆರ್‌ಸಿಬಿ ಸ್ಟಾರ್ ಬೌಲರ್ ವಾಪಸ್ ಬರೋದೆ ಅನುಮಾನ!
ಭಾರತ ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡ ಬಳಿಕ ಐಪಿಎಲ್ ಪಂದ್ಯಾವಳಿಯನ್ನು ಒಂದು ವಾರ ಸ್ಥಗಿತಗೊಳಿಸಲಾಗಿತ್ತು. ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಣೆ ಮಾಡಿದ್ದು ಮತ್ತೆ ಐಪಿಎಲ್ ಆರಂಭಿಸಲು ಬಿಸಿಸಿಐ ನಿರ್ಧರಿಸಿದೆ. ಈ ವಾರವೇ ಐಪಿಎಲ್ ಪಂದ್ಯಗಳು ಮತ್ತೆ ಆರಂಭವಾಗಲಿದ್ದು, ಎಲ್ಲಾ ತಂಡಗಳಿಗೂ ಸಜ್ಜಾಗುವಂತೆ ಸೂಚನೆ ನೀಡಲಾಗಿದೆ. ಈ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ದೊಡ್ಡ ಆಘಾತ ಸಿಕ್ಕಿದೆ.
ತಂಡದ ಪ್ರಮುಖ ವೇಗಿಯಾಗಿರುವ ಜೋಶ್ ಹೇಜಲ್‌ವುಡ್ ಆರ್ ಸಿಬಿಯ ಮುಂದಿನ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ. ಭುಜದ ನೋವಿನಿಂದ ಬಳಲುತ್ತಿದ್ದ ಜೋಶ್ ಹೇಜಲ್‌ವುಡ್ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ, ಆದರೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೆ ಅವರು ಫಿಟ್ ಆಗಿದ್ದರು. ಆದರೆ ದಿಢೀರ್ ಎಂದು ಪಂದ್ಯಾವಳಿಯನ್ನು ಸ್ಥಗಿತಗೊಳಿಸಲಾಗಿತ್ತು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್ ಸನಿಹದಲ್ಲಿ ಇರುವ ಕಾರಣ, ಜೋಶ್ ಹೇಜಲ್‌ವುಡ್ ಐಪಿಎಲ್ ಆಡಲು ಭಾರತಕ್ಕೆ ವಾಪಸ್ ಬರುವುದು ಅನುಮಾನವಾಗಿದೆ. ಈ ವರ್ಷದ ಆರಂಭದಲ್ಲಿ ಪಾರ್ಶ್ವ ನೋವು ಮತ್ತು ಕಾಲಿನ ಸ್ನಾಯುಗಳ ನೋವು ಸೇರಿದಂತೆ ಹಲವಾರು ಗಾಯಗಳಿಂದ ಚೇತರಿಸಿಕೊಳ್ಳಲು ಕಠಿಣ ಪುನರ್ವಸತಿಗೆ ಒಳಗಾಗಿದ್ದ ಹೇಜಲ್‌ವುಡ್ ಐಪಿಎಲ್‌ನಲ್ಲಿ ಲಯಕ್ಕೆ ಮರಳಿದ್ದರು.
ಐಪಿಎಲ್ ಆಡುವುದು ಅನುಮಾನ?
ಹೇಜಲ್‌ವುಡ್ ಫಿಟ್ ಆಗುವ ಬೆನ್ನಲ್ಲೇ ಐಪಿಎಲ್ ಸ್ಥಗಿತಗೊಳಿಸಿದ್ದಲ್ಲದೇ ಆಟಗಾರರನ್ನು ವಾಪಸ್ ಕಳಿಸುವಂತೆ ಬಿಸಿಸಿಐ ಸೂಚನೆ ಕೊಟ್ಟಿತ್ತು. ಈಗಾಗಲೇ ವಿದೇಶಿ ಆಟಗಾರರು ತವರಿಗೆ ವಾಪಸಾಗಿದ್ದು ಫ್ರಾಂಚೈಸಿಗಳು ಆಟಗಾರರನ್ನು ಮರಳಿ ಕರೆತರಲು ಕೆಲಸ ಮಾಡುತ್ತಿವೆ. ಹೇಜಲ್‌ವುಡ್ ಆಸ್ಟ್ರೇಲಿಯಾದ ಪ್ರಮುಖ ಬೌಲರ್ ಆಗಿದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಅವರ ಲಭ್ಯತೆ ಮಹತ್ವದ್ದಾಗಿದೆ. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುನ್ನ ಕಂಡೀಷನಿಂಗ್ ಶಿಬಿರ ಕೂಡ ನಡೆಯಲಿದ್ದು ಹೇಜಲ್‌ವುಡ್ ಅದರಲ್ಲಿ ಭಾಗವಹಿಸಲಿದ್ದು, ಐಪಿಎಲ್ ಮರಳುವುದು ಬಹುತೇಕ ಅನಿಶ್ಚಿತವಾಗಿದೆ. ಜೋಶ್ ಹೇಜಲ್‌ವುಡ್ ಮಾತ್ರವಲ್ಲದೆ ಸನ್‌ರೈಸರ್ಸ್ ಹೈದರಾಬಾದ್‌ನ ಪಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್ ಕೂಡ ವಾಪಸ್ ಬರುವುದು ಅನುಮಾನವಾಗಿದೆ.
ಜೂನ್ 11 ರಿಂದ ಲಾರ್ಡ್ಸ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಯಾರಿ ನಡೆಸಲು ಆಸ್ಟ್ರೇಲಿಯಾದಲ್ಲಿಯೇ ಉಳಿಯುವ ಸಾಧ್ಯತೆ ಇದೆ. ದೆಹಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಮಿಚೆಲ್ ಸ್ಟಾರ್ಕ್ ಕೂಡ ಅಲಭ್ಯವಾಗುವ ಸಾಧ್ಯತೆ ಇದೆ.
ನ್ಯೂಜಿಲೆಂಡ್ ತಂಡದ ಹೆಚ್ಚಿನ ಸದಸ್ಯರು ಈಗಾಗಲೇ ತವರಿಗೆ ಮರಳಿದ್ದಾರೆ, ಆದರೆ ಕ್ರಿಕೆಟ್ ದಕ್ಷಿಣ ಆಫ್ರಿಕಾ ತನ್ನ ಆಟಗಾರರು ಮೇ 25 ರ ನಂತರವೂ ಭಾರತದಲ್ಲಿ ಉಳಿಯಲು ಅವಕಾಶ ನೀಡುತ್ತದಯೇ ಎನ್ನುವುದನ್ನು ನೋಡಬೇಕಿದೆ. ದಕ್ಷಿಣ ಆಫ್ರಿಕಾದ ಟೆಸ್ಟ್ ಆಟಗಾರರು ಕೂಡ ಅಲಭ್ಯರಾಗುವ ಸಾಧ್ಯತೆ ಇದೆ.












Click it and Unblock the Notifications