RCB: ಪಂಜಾಬ್ ಕಿಂಗ್ಸ್ ಹಾರಾಟಕ್ಕೆ ಬ್ರೇಕ್ ಹಾಕಿ ಬ್ಯಾಕ್ ಬೋನ್ ಮುರಿದ ಆರ್‌ಸಿಬಿ: ಪ್ಲೇ-ಆಫ್‌ಗೆ ಗ್ರ್ಯಾಂಡ್ ಎಂಟ್ರಿ
RCB Vs PBKS IPL 2026: ಧರ್ಮಶಾಲಾದಲ್ಲಿ ಭಾನುವಾರ (ಮೇ 17) ನಡೆದ ಐಪಿಎಲ್ 2026ರ 61ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ವೆಂಕಟೇಶ್ ಅಯ್ಯರ್ ಸಿಡಿಸಿದ ಆಕರ್ಷಕ ಅರ್ಧಶತಕಗಳು ಹಾಗೂ ಭುವನೇಶ್ವರ್ ಕುಮಾರ್ ಅವರ ಮಾರಕ ಬೌಲಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 23 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ ಅಧಿಕೃತವಾಗಿ ಪ್ಲೇ-ಆಫ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ.
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಆದರೆ ಪಂಜಾಬ್ ಕಿಂಗ್ಸ್ ತಂಡವು ಆರ್‌ಸಿಬಿ ನೀಡಿದ 223 ರನ್‌ಗಳ ಕಠಿಣ ಗುರಿಯನ್ನು ಮುಟ್ಟಲು ಸಾಧ್ಯವಾಗದೆ ಹೀನಾಯ ಸೋಲು ಕಂಡಿತು.

ಆರ್‌ಸಿಬಿ ಪರ ಮಿಂಚಿದ ಕೊಹ್ಲಿ, ಅಯ್ಯರ್
ಆರ್‌ಸಿಬಿ ಪರ ಬ್ಯಾಟ್ ಬೀಸಿದ ವೆಂಕಟೇಶ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕಗಳನ್ನು ಸಿಡಿಸಿ ಮಿಂಚಿದರು. ವಿರಾಟ್ ಕೇವಲ 37 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ಗಳ ಸಹಿತ 58 ರನ್‌ಗಳನ್ನು ಸಿಡಿಸಿ ಉತ್ತಮ ಆರಂಭ ನೀಡಿದರು. ಬಳಿಕ ಕೊನೆವರೆಗೂ ಜವಾಬ್ದಾರಿಯುತ ಆಟವಾಡಿದ ವೆಂಕಟೇಶ್ ಅಯ್ಯರ್ 40 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ ಅಜೇಯ 73 ರನ್, ದೇವದತ್ ಪಡಿಕ್ಕಲ್ 45(25), ಟಿಮ್ ಡೇವಿಡ್ 24(12) ರನ್ ಕಲೆಹಾಕಿ ತಂಡದ ಮೊತ್ತವನ್ನು 220ರ ಗಡಿ ದಾಡಿಸಿದರು.
ಭುವಿ, ರಸಿಖ್ ಮಾರಕ ಬೌಲಿಂಗ್ ದಾಳಿ
ಬಳಿಕ ಆರ್‌ಸಿಬಿ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭದಲ್ಲೇ ಭುವನೇಶ್ವರ್ ಕುಮಾರ್ ಆಘಾತ ನೀಡಿದರು. ಅಪಾಯಕಾರಿ ಆರಂಭಿಕ ಬ್ಯಾಟರ್ ಪ್ರಿಯಾಂಶ್ ಆರ್ಯ ಹಾಗೂ ಪ್ರಭ್‌ಸಿಮ್ರಾನ್ ಸಿಂಗ್ ಅವರ ವಿಕೆಟ್ ಪಡೆಯುವ ಮೂಲಕ ಪಂಜಾಬ್‌ನ ಗೆಲುವಿನ ಹಾದಿಯನ್ನು ಕಠಿಣಗೊಳಿಸಿದರು. ಮತ್ತೊಬ್ಬ ವೇಗಿ ರಸಿಖ್ ಸಲಾಮ್ (3/36) ಉತ್ತಮ ಬೌಲಿಂಗ್ ದಾಳಿ ನಡೆಸಿ ಪ್ರದರ್ಶಿಸಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡುವ ಮೂಲಕ ಪೆವಿಲಿಯನ್‌ಗೆ ಅಟ್ಟಿದರು.
ಪ್ಲೇ-ಆಫ್ ಪ್ರವೇಶಿಸಿದ ಆರ್‌ಸಿಬಿ
ಆರಂಭಿಕ ಕುಸಿತದಿಂದ ಚೇತರಿಸಿಕೊಳ್ಳಲು ವಿಫಲವಾದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್‌ಸಿಬಿಯ ಉತ್ತಮ ಬೌಲಿಂಗ್ ದಾಳಿಯಿಂದಾಗಿ ಪಂಜಾಬ್ 23 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಬೆಂಗಳೂರು ತಂಡವು ಪ್ಲೇ-ಆಫ್ ಹಂತವನ್ನು ಖಚಿತಪಡಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
ಶಶಾಂಕ್ ಸಿಂಗ್ ಅರ್ಧಶತಕ ವ್ಯರ್ಥ
ಪಂಜಾಬ್ ಕಿಂಗ್ಸ್ ಪರ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಶಶಾಂಕ್ ಸಿಂಗ್ ಒಂದು ಹಂತದಲ್ಲಿ ಆರ್‌ಸಿಬಿ ಕೈಯಿಂದ ಪಂದ್ಯವನ್ನು ಕಿತ್ತುಕೊಂಡಿದ್ದರು. ಆದರೆ ಇವರನ್ನು ಕೂಡ ರಸಿಖ್ ದಾರ್ ಸಲಾಂ ಔಟ್ ಮಾಡಿ ಪಂದ್ಯವನ್ನು ಆರ್‌ಸಿಬಿ ಕಡೆಗೆ ತಿರುಗಿಸಿದರು. ಪಂಜಾಬ್ ಪರ ಶಶಾಂಕ್ ಸಿಂಗ್ 56(27), ಸೂರ್ಯಾಂಶ್ ಶೆಡ್ಗೆ 35(22), ಕೂಪರ್ ಕನೊಲಿ 37(22), ಮಾರ್ಕಸ್ ಸ್ಟೋಯ್ನಿಸ್ 37(25) ರನ್ ಕಲೆಹಾಕಿದರು.
ಆದರೆ ಆರ್‌ಸಿಬಿ ಬೌಲರ್‌ಗಳು ಪಂಜಾಬ್ ಬ್ಯಾಟರ್‌ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಭುವನೇಶ್ವರ್ ಕುಮಾರ್ 2, ರಸಿಖ್ ದಾರ್ ಸಲಾಂ 3 ವಿಕೆಟ್ ಪಡೆದು ಮಿಂಚಿದರೆ, ಜೋಸ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ ಹಾಗೂ ರೊಮಾರಿಯೋ ಶೆಫರ್ಡ್ ತಲಾ ಒಂದು ವಿಕೆಟ್ ಕಬಳಿಸಿದರು.












Click it and Unblock the Notifications