PBKS vs GT: ಕನ್ನಡಿಗನ ಉತ್ತಮ ಬೌಲಿಂಗ್; ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದ ಪಂಜಾಬ್ ಕಿಂಗ್ಸ್
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 11 ರನ್‌ಗಳಿಂದ ಗೆಲುವು ಸಾಧಿಸಿದೆ. ಇಡೀ ತಂಡವನ್ನೇ ಸಂಪೂರ್ಣವಾಗಿ ಬದಲಾವಣೆ ಮಾಡುವ ಮೂಲಕ ಹೊಸತನ ತಂದಿರುವ ಪಂಜಾಬ್ ಕಿಂಗ್ಸ್ ಮೊದಲ ಪಂದ್ಯದಲ್ಲೇ ಬಲಿಷ್ಠ ತಂಡವೆಂದು ಸೂಚನೆ ಕೊಟ್ಟಿದೆ.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 243 ರನ್ ಕಲೆಹಾಕಿತು. ಪ್ರಿಯಾಂಶ್ ಆರ್ಯ 23 ಎಸೆತಗಳಲ್ಲಿ 47 ರನ್ ಗಳಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 42 ಎಸೆತಗಳಲ್ಲಿ 5 ಬೌಂಡರಿ 9 ಸಿಕ್ಸರ್ ಸಹಿತ ಅಜೇಯ 97 ರನ್ ಗಳಿಸಿದರು. ಮಾರ್ಕಸ್ ಸ್ಟೊಯಿನಿಸ್ 20 ರನ್ ಗಳಿಸಿದರೆ, ಶಶಾಂಕ್ ಸಿಂಗ್ 16 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 44 ರನ್ ಗಳಿಸಿದರು.

ಗುಜರಾತ್ ಟೈಟಾನ್ಸ್ ಪರವಾಗಿ ಸಾಯಿ ಕಿಶೋರ್ ಮಾತ್ರ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಕಗಿಸೋ ರಬಾಡ ಮತ್ತು ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ 4 ಓವರ್ ಗಳಲ್ಲಿ 54 ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿಕೊಂಡರು.
ಹೋರಾಟ ಕೊಟ್ಟ ಗುಜರಾತ್ ಟೈಟಾನ್ಸ್
244 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ನಿಧಾನಗತಿಯ ಆರಂಭ ಪಡೆದರೂ ಶುಭಮನ್ ಗಿಲ್ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನು ಲಯಕ್ಕೆ ತಂದರು. 14 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್ ಸಹಿತ 33 ರನ್ ಗಳಿಸಿದ್ದ ಅವರು ಗ್ಲೆನ್ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಔಟಾದರು.
ಆರಂಭದಲ್ಲಿ ನಿಧಾನವಾಗಿ ಆಡಿದ ಸಾಯಿ ಸುದರ್ಶನ್ ಬಳಿಕ ವೇಗವಾಗಿ ರನ್ ಗಳಿಸಲು ಆರಂಭಿಸಿದರು. ಜೋಸ್ ಬಟ್ಲರ್ ಮತ್ತು ಸಾಯಿ ಸುದರ್ಶನ್ 2ನೇ ವಿಕೆಟ್‌ಗೆ 84 ರನ್ ಕಲೆಹಾಕಿದರು. 74 ರನ್ ಗಳಿಸಿದ್ದ ಸಾಯಿ ಸುದರ್ಶನ್ ಔಟಾದ ಬಳಿಕ ಬಂದ ಶೆರ್ಫಾನೆ ರುಥರ್ ಫೋರ್ಡ್ ಬೌಂಡರಿ ಸಿಕ್ಸರ್ ಬಾರಿಸುವ ಮೂಲಕ ಪಂಜಾಬ್ ಕಿಂಗ್ಸ್ ತಂಡದ ಚಿಂತೆ ಹೆಚ್ಚಿಸಿದರು.
ಪಂಜಾಬ್ ಗೆಲ್ಲಿಸಿದ ವಿಜಯ್‌ಕುಮಾರ್ ವೈಶಾಖ್
ಬಳಿಕ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಕನ್ನಡಿಗ ವಿಜಯ್‌ಕುಮಾರ್ ವೈಶಾಖ್ ಪಂದ್ಯದ ದಿಕ್ಕನ್ನೇ ಬದಲಿಸಿದರು. ಜೋಸ್ ಬಟ್ಲರ್, ರುಥರ್ ಫೋರ್ಡ್ ಇದ್ದರೂ ಅವರು 15 ಓವರ್ ನಲ್ಲಿ ಕೇವಲ 5 ರನ್ ಬಿಟ್ಟುಕೊಟ್ಟರು. ಇದು ಗುಜರಾತ್ ಟೈಟಾನ್ಸ್ ಚೇಸಿಂಗ್‌ಗೆ ದೊಡ್ಡ ಅಡ್ಡಿಯಾಯಿತು. ಮತ್ತೆ 17 ಓವರ್ ನಲ್ಲಿ ಬೌಲಿಂಗ್ ಮಾಡಿದ ವೈಶಾಖ್ ತಮ್ಮ ಎರಡನೇ ಓವರ್ ನಲ್ಲೂ ಕೇವಲ 5 ರನ್ ಬಿಟ್ಟುಕೊಟ್ಟು ಪಂಜಾಬ್ ಮೇಲುಗೈ ಸಾಧಿಸುವಂತೆ ಮಾಡಿದರು.
ಜೋಸ್ ಬಟ್ಲರ್ ಮಾರ್ಕೊ ಯಾನ್ಸನ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗುವ ಮೂಲಕ ಪಂದ್ಯ ಸಂಪೂರ್ಣವಾಗಿ ಪಂಜಾಬ್ ತೆಕ್ಕೆಗೆ ಜಾರಿತು. ಆದರೂ ಹೋರಾಟ ಕೊಟ್ಟ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 232 ರನ್ ಗಳಿಸುವ 11 ರನ್‌ಗಳಿಂದ ಸೋಲೊಪ್ಪಿಕೊಂಡಿತು.












Click it and Unblock the Notifications