ಅಧಿಕಾರಿಗಳ ನಿರ್ಲಕ್ಷ್ಯ: ಅಕ್ಕಿ ಹೆಬ್ಬಾಳಿನಲ್ಲಿ ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಕ್ರೀಡಾಪಟು ಕೆರೆಗೆ ಬಿದ್ದು ಸಾವು
ಮಂಡ್ಯ, ನವೆಂಬರ್, 13; ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಅಕ್ಕಿ ಹೆಬ್ಬಾಳು ಬಳಿ ಪಾಂಡಿಚೇರಿಯ ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಅಲ್ಹರ್ಷ್ ಎಂಬುವರು ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಬಹಿರ್ದೆಸೆಗೆ ಹೊರಗೆ ಹೋಗಿದ್ದಾಗ ಕೆರೆಗೆ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಕ್ರೀಡಾಪಟುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದೇ ಘಟನೆಗೆ ಪ್ರಮುಖ ಕಾರಣ ಎಂದು ಕ್ರೀಡಾ ಆಯೋಜಕರ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆ.ಆರ್ ಪೇಟೆಯ ಅಕ್ಕಿ ಹೆಬ್ಬಾಳಿನಲ್ಲಿ ಸೈಕಲ್ ಪೋಲೊ ಕ್ರೀಡಾ ಕೂಟದ ನಡೆಯುತ್ತಿತ್ತು. ಕ್ರೀಡಾಕೂಟದಲ್ಲಿ ಭಾಗಿಯಾಗಲು ಅಲ್ಹರ್ಷ್ ಪಾಂಡಿಚೇರಿಯಿಂದ ಕೆ.ಆರ್ ಪೇಟೆಗೆ ಆಗಮಿಸಿದ್ದರು. ತಡರಾತ್ರಿ ಬಹಿರ್ದೆಸೆಗೆಂದು ಆಚೆ ಹೋದಾಗ ದುರ್ಘಟನೆ ಸಂಭವಿಸಿದೆ. ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಇನ್ನು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ದೇಗುಲ ಮಠದಿಂದ ಮೂವರು ಬಾಲಕರು ನಾಪತ್ತೆ
ರಾಮನಗರ ಜಿಲ್ಲೆಯ ಕನಕಪುರ ನಗರದಲ್ಲಿರುವ ದೇಗುಲ ಮಠದಿಂದ ಮೂವರು ಬಾಲಕರು ನಾಪತ್ತೆ ಆಗಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ. ನವೆಂಬರ್ 9ರ ರಾತ್ರಿ ಮಠದಿಂದ ಮೂವರು ವಿದ್ಯಾರ್ಥಿಗಳು ನಾಪತ್ತೆ ಆಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಿವಕುಮಾರ್(15), ಪ್ರತಾಪ್(16), ಕಾರ್ತಿಕ್(15) ನಾಪತ್ತೆ ಆದವರಾಗಿದ್ದಾರೆ.

ದೇಗುಲದ ಮಠದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕರು ಹಾಸ್ಟೆಲ್ನಲ್ಲಿ ಊಟ ಮುಗಿಸಿದ ನಂತರ ನಾಪತ್ತೆ ಆಗಿದ್ದಾರೆ. ಈ ಸಂಬಂಧ ಮಠದ ಸಿಬ್ಬಂದಿ ಮಹದೇವಸ್ವಾಮಿ ನವೆಂಬರ್ 11ರಂದು ಕನಕಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೂವರು ಬಾಲಕರಿಗಾಗಿ ಕನಕಪುರ ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.












Click it and Unblock the Notifications