ಟೀಮ್ ಇಂಡಿಯಾಗೆ 'ಸ್ವಿಂಗ್ ಸುಲ್ತಾನ್' ಭುವಿ ಎಂಟ್ರಿ; ಅವಕಾಶ ಸಿಗದಿರುವುದು ನನಗೆ ಯಾವುದೇ ನಷ್ಟವಿಲ್ಲ ಎಂದ ಶಮಿ
Mohammed Shami: ಆರ್‌ಸಿಬಿ ಸ್ಟಾರ್ ಬೌಲರ್, ಸ್ವಿಂಗ್ ಕಿಂಗ್ ಅಂತಲೇ ಪ್ರಸಿದ್ಧಿಯಾಗಿರುವ ಭುವನೇಶ್ವರ್ ಕುಮಾರ್ ಅವರು ಟೀಮ್ ಇಂಡಿಯಾಗೆ ಆಯ್ಕೆಯಾದ ಬೆನ್ನಲ್ಲೇ ಮೊಹಮ್ಮದ್ ಶಮಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ನಾಲ್ಕು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ರಾಷ್ಟ್ರೀಯ ಟಿ20 ತಂಡಕ್ಕೆ ಮರಳಿದ್ದಾರೆ. ಈ ನಡುವೆಯೇ ಮತ್ತೊಬ್ಬ ಹಿರಿಯ ವೇಗಿ ಮಹಮ್ಮದ್ ಶಮಿ ತಮ್ಮನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿರುವ ಬಗ್ಗೆ ತೀವ್ರ ಬೇಸರ ಹಾಗೂ ಆಕ್ರೋಶ ಹೊರಹಾಕಿದ್ದಾರೆ. 'ಮರಳಿ ಭಾರತ ತಂಡದಲ್ಲಿ ನನಗೆ ಅವಕಾಶ ಸಿಗದಿದ್ದರೆ, ಅದು ನನಗೆ ನಷ್ಟವಲ್ಲ,' ಎಂದು ಆಯ್ಕೆಗಾರರ ನಿರ್ಧಾರಕ್ಕೆ ಸವಾಲೆಸೆದಿದ್ದಾರೆ.

ಆಯ್ಕೆದಾರರ ವಿರುದ್ಧ ಶಮಿ ಅಸಮಾಧಾನ
ಭಾರತ ತಂಡಕ್ಕೆ ಭುವನೇಶ್ವರ್ ಕುಮಾರ್ ಅವರ ದಿಢೀರ್ ವಾಪಾದ್ ಹಾಗೂ ಶಮಿ ಅವರ ಗೈರುಹಾಜರಿ ಕುರಿತು 'ರೆವ್‌ಸ್ಪೋರ್ಟ್ಸ್' ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ 36 ವರ್ಷದ ಶಮಿ ಅವರು, ಆಯ್ಕೆದಾರರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಭುವನೇಶ್ವರ್ ಕುಮಾರ್ ಆಯ್ಕೆ ಬಗ್ಗೆ ಶಮಿ ಹೇಳಿದ್ದೇನು?
ಭುವನೇಶ್ವರ್ ಕುಮಾರ್ ಅವರ ಮರುಆಯ್ಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಮಿ, 'ಭುವನೇಶ್ವರ್‌ಗೆ ಭಾರತ ತಂಡದ ಪರ ಮತ್ತೆ ಆಡುವ ಅವಕಾಶ ಸಿಕ್ಕಿದೆ, ಅದು ಅವರಿಗೆ ಒಳ್ಳೆಯ ವಿಷಯ. ಆದರೆ ಅವರ ಆಯ್ಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಅಥವಾ ಅದು ನನ್ನ ಗಮನವನ್ನು ಬೇರೆಡೆ ಸೆಳೆಯುವುದಿಲ್ಲ. ಎಲ್ಲೇ ಆಡುವ ಅವಕಾಶ ಸಿಕ್ಕರೂ ನಾನು ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ. ಪ್ರಸ್ತುತ ಸಂಪೂರ್ಣ ಗಮನ ರಣಜಿ ಟ್ರೋಫಿ ಪಂದ್ಯದ ಮೇಲಿದೆ,' ಎಂದು ಹೇಳಿದರು.
ಮೊಹಮ್ಮದ್ ಶಮಿಯನ್ನ ಕಡೆಗಣಿಸಲಾಗುತ್ತಿದೆಯೇ?
ತಮ್ಮನ್ನು ರಾಷ್ಟ್ರೀಯ ತಂಡದಿಂದ ನಿರಂತರವಾಗಿ ಹೊರಗಿಡುತ್ತಿರುವ ಆಯ್ಕೆಗಾರರು ಹಾಗೂ ತಂಡದ ಆಡಳಿತ ಮಂಡಳಿಯ ವಿರುದ್ಧ ವಾಗ್ದಾಳಿ ನಡೆಸಿದ ಶಮಿ, ತಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗುತ್ತಿಲ್ಲ ಎಂದಿದ್ದಾರೆ. 'ಕಳೆದ ಎರಡು-ಮೂರು ವರ್ಷಗಳಿಂದ ನನ್ನೊಂದಿಗೆ ಇದೇ ರೀತಿ ನಡೆಯುತ್ತಿದೆ,' ಎಂದು ಹೇಳಿದ್ದಾರೆ.
'ನಾನು ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳ ತಂಡದ ಪರವಾಗಿ ನಿರಂತರವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದೇನೆ ಹಾಗೂ ಸಂಪೂರ್ಣ ಫಿಟ್‌ನೆಸ್ ಹೊಂದಿರುವುದನ್ನು ಸಾಬೀತುಪಡಿಸಿದ್ದೇನೆ. ಇಷ್ಟೆಲ್ಲಾ ಮಾಡಿದ ಮೇಲೆಯೂ ನನಗೆ ಮತ್ತೆ ಭಾರತೀಯ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಗದಿದ್ದರೆ, ಅದು ಖಂಡಿತವಾಗಿಯೂ ನನಗೆ ನಷ್ಟವಲ್ಲ,' ಎಂದು ಶಮಿ ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ.
36 ವರ್ಷದ ಮಹಮ್ಮದ್ ಶಮಿ ಅವರು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊನೆಯ ಬಾರಿಗೆ ಭಾರತೀಯ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ 2023ರ ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಬೌಲಿಂಗ್ ದಾಳಿ ನಡೆಸಿ ದೇಶಕ್ಕೆ ಗೆಲುವು ತಂದುಕೊಟ್ಟಿದ್ದ ಅವರು, ನಂತರ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಬಳಿಕ ಗುಣಮುಖರಾಗಿ ಬಂಗಾಳ ತಂಡದ ಪರ ಉತ್ತಮ ಬೌಲಿಂಗ್ ಪ್ರದರ್ಶಿಸುತ್ತಿದ್ದರು. ಆದರೂ ಆಯ್ಕೆ ಸಮಿತಿಯು ಪ್ರಸಿದ್ಧ್ ಕೃಷ್ಣ ಹಾಗೂ ಹರ್ಷಿತ್ ರಾಣಾರಂತಹ ಯುವ ವೇಗಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ.
ಮತ್ತೊಂದೆಡೆ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಧಾರದ ಮೇಲೆ 36 ವರ್ಷದ ಭುವನೇಶ್ವರ್ ಕುಮಾರ್ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ದಿಢೀರ್ ಆಯ್ಕೆ ಮಾಡಲಾಗಿದೆ. ಪ್ರಸ್ತುತ ಭಾರತೀಯ ವೇಗದ ಬೌಲಿಂಗ್ ಪಡೆಯಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತಿದ್ದು, ಫ್ಲ್ಯಾಟ್ ಪಿಚ್‌ಗಳಲ್ಲಿ ಯುವ ಬೌಲರ್‌ಗಳು ಹೆಚ್ಚು ರನ್‌ಗಳನ್ನು ಬಿಟ್ಟುಕೊಡುತ್ತಿದ್ದಾರೆ. ಇಂತಹ ಸಮಯದಲ್ಲಿ ತಮ್ಮಂತ ಅನುಭವಿ ಬೌಲರ್‌ನನ್ನು ನಿರ್ಲಕ್ಷಿಸುತ್ತಿರುವುದಕ್ಕೆ ಶಮಿ ಈ ರೀತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಬಹುದಾಗಿದೆ.


Click it and Unblock the Notifications
