ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೀರಾಬಾಯಿ ಚಾನು ಐತಿಹಾಸಿಕ ಸಾಧನೆ: ಭಾರತಕ್ಕೆ ಮೊದಲ ಚಿನ್ನದ ಪದಕ
Saikhom Mirabai Chanu: ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ 48 ಕೆಜಿ ತೂಕದ ವಿಭಾಗದಲ್ಲಿ ಸ್ನ್ಯಾಚ್ ಹಾಗೂ ಕ್ಲೀನ್ ಅಂಡ್ ಜರ್ಕ್ ಎರಡರಲ್ಲೂ ನೂತನ ಗೇಮ್ಸ್ ದಾಖಲೆಗಳನ್ನು ಬರೆಯುವ ಮೂಲಕ ಭಾರತಕ್ಕೆ ಈ ಬಾರಿಯ ಚೊಚ್ಚಲ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ.
ಮೀರಾಬಾಯಿ ಚಾನು ಅವರು ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾನುವಾರ (ಜುಲೈ 26) ಮತ್ತೊಮ್ಮೆ ಸ್ವರ್ಣ ಪದಕ ಮುಡಿಗೇರಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಗೆಲುವಿನೊಂದಿಗೆ ಮಣಿಪುರದ 31 ವರ್ಷದ ಮೀರಾಬಾಯಿ ಅವರು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ ಮೂರನೇ ಚಿನ್ನದ ಪದಕ ಗೆದ್ದು 'ಹ್ಯಾಟ್ರಿಕ್ ಚಿನ್ನ'ದ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದಾಖಲೆ ಬರೆದ ಮೀರಾಬಾಯಿ ಚಾನು
ಆರಂಭಿಕ ಹಿನ್ನಡೆಯ ನಡುವೆಯೂ ಕುಗ್ಗದ ಮೀರಾಬಾಯಿ ಚಾನು ಅವರು ಒಟ್ಟು 190 ಕೆಜಿ (ಸ್ನ್ಯಾಚ್‌ನಲ್ಲಿ 85 ಕೆಜಿ, ಕ್ಲೀನ್ ಅಂಡ್ ಜರ್ಕ್‌ನಲ್ಲಿ 105 ಕೆಜಿ) ತೂಕ ಎತ್ತುವ ಮೂಲಕ ಸಂಪೂರ್ಣ ಪ್ರಾಬಲ್ಯ ಮೆರೆದರು. ಸ್ನ್ಯಾಚ್‌ನ ಮೊದಲ ಯತ್ನದಲ್ಲಿ 82 ಕೆ.ಜಿ. ಎತ್ತುವಲ್ಲಿ ವಿಫಲರಾದರು. ಆದರೂ ಧೃತಿಗೆಡದೆ ತದನಂತರದ ಪ್ರಯತ್ನಗಳಲ್ಲಿ 85 ಕೆಜಿ ಎತ್ತಿ ದಾಖಲೆ ಬರೆದರು.
ಅಗ್ರಸ್ಥಾನ ಸಾಬೀತುಪಡಿಸಿಕೊಂಡದ ಮೀರಾಬಾಯಿ
ಕ್ಲೀನ್ ಅಂಡ್ ಜರ್ಕ್‌ನಲ್ಲೂ ಮೊದಲ ಪ್ರಯತ್ನ ವಿಫಲವಾದರು. ಆದರೂ ನಂತರ 105 ಕೆಜಿ ಎತ್ತಿ ಇತಿಹಾಸ ಬರೆದರು. ಮುಂಬರುವ ಏಷ್ಯನ್ ಗೇಮ್ಸ್ ಹಿನ್ನೆಲೆಯಲ್ಲಿ ಗಾಯದ ಅಪಾಯ ತಪ್ಪಿಸಲು ಅವರು ಮೂರನೇ ಯತ್ನದಿಂದ ಹಿಂದೆ ಸರಿದರು. ಬೆಳ್ಳಿ ಪದಕ ಗೆದ್ದ ನೈಜೀರಿಯಾದ ರೂತ್ ಅಸುಕ್ವೊ ನ್ಯಾಂಗ್ (168 ಕೆಜಿ) ಅವರಿಗಿಂತ ಬರೋಬ್ಬರಿ 22 ಕೆ.ಜಿ. ಹೆಚ್ಚು ತೂಕ ಎತ್ತುವ ಮೂಲಕ ಚಾನು ತಮ್ಮ ಅಗ್ರಸ್ಥಾನವನ್ನು ಸಾಬೀತುಪಡಿಸಿದರು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 4 ಪದಕಗಳ ಸಾಧನೆ
ಈ ಐತಿಹಾಸಿಕ ಗೆಲುವಿನೊಂದಿಗೆ ಮೀರಾಬಾಯಿ ಚಾನು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಒಟ್ಟು 4 ಪದಕಗಳನ್ನು (3 ಚಿನ್ನ, 1 ಬೆಳ್ಳಿ) ಗೆದ್ದುಕೊಂಡಂತಾಗಿದೆ. ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಇದು ಎರಡನೇ ಪದಕವಾಗಿದ್ದು, ಇದಕ್ಕೂ ಮುನ್ನ ಋಷಿಕಾಂತ್ ಸಿಂಗ್ ಪುರುಷರ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಪ್ರಸ್ತುತ ಭಾರತವು 1 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, ಮುಂಬರುವ ಅಥ್ಲೆಟಿಕ್ಸ್, ಕುಸ್ತಿ, ಬ್ಯಾಡ್ಮಿಂಟನ್ ಮತ್ತು ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಇನ್ನಷ್ಟು ಪದಕಗಳ ನಿರೀಕ್ಷೆಯಿದೆ.
ಮೀರಾಬಾಯಿ ಚಾನು ಹೇಳಿದ್ದೇನು?
'ಭಾರತಕ್ಕೆ ಮೂರನೇ ಚಿನ್ನದ ಪದಕ ತರಲು ನನಗೆ ತುಂಬಾ ಸಂತೋಷವಾಗಿದೆ. ನನ್ನ ಮನಸ್ಸಿನಲ್ಲಿ ತುಂಬಾ ವಿಷಯಗಳು ಓಡುತ್ತಿದ್ದವು. ಸ್ವಲ್ಪ ಒತ್ತಡವಿತ್ತು, ನಾನು ಭಾರತೀಯ ವೇಟ್‌ಲಿಫ್ಟಿಂಗ್ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಲು ಬಯಸಿದ್ದೆ. ನನ್ನ ಮೂರನೇ ಚಿನ್ನದ ಪದಕ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಾಲ್ಕನೇ ಪದಕ ಗೆದ್ದಿದ್ದಕ್ಕಾಗಿ ಸಂತೋಷವಾಗುತ್ತಿದೆ,' ಎಂದು ಮೀರಾಬಾಯಿ ಚಾನು ಅವರು ಹೇಳಿದರು.
Another glorious chapter in Indian Weightlifting!
— Narendra Modi (@narendramodi) July 26, 2026
The talented Mirabai Chanu once again showcased her skills at the Commonwealth Games with a stunning performance in the 48 kg category and winning Gold. With back-to-back Commonwealth Games Golds and an overall fourth CWG medal… pic.twitter.com/37IOvMXBTI
ಮೀರಾಬಾಯಿ ಚಾನು ಸಾಧನೆ ಕೊಂಡಾಡಿದ ಪ್ರಧಾನಿ ಮೋದಿ
ಇನ್ನೂ ಪ್ರಧಾನಿ ನರೇಂದ್ರ ಮೋದಿ ಅವರು ಮೀರಾಬಾಯಿ ಚಾನು ಮತ್ತು ರಿಷಿಕಾಂತ್ ಅವರಿಗೆ ಟ್ವೀಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ. 'ಭಾರತೀಯ ವೇಟ್‌ಲಿಫ್ಟಿಂಗ್‌ನಲ್ಲಿ ಮತ್ತೊಂದು ಅದ್ಭುತ ಅಧ್ಯಾಯ. ಪ್ರತಿಭಾನ್ವಿತ ಮೀರಾಬಾಯಿ ಚಾನು ಮತ್ತೊಮ್ಮೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 48 ಕೆ.ಜಿ. ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿ ಚಿನ್ನ ಗೆದ್ದು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು. ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಸತತವಾಗಿ ಚಿನ್ನ ಮತ್ತು ಒಟ್ಟಾರೆ ನಾಲ್ಕನೇ ಸಿಡಬ್ಲ್ಯೂಜಿ ಪದಕ ಜಯಿಸಿದ ಚಾನು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ. ಅವರಿಗೆ ಅಭಿನಂದನೆಗಳು. ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು. #CWG2026,' ಎಂದು ಮೋದಿ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಇದು ಇಡೀ ಭಾರತವೇ ಖುಷಿಪಡುವ ವಿಚಾರವಾಗಿದೆ.


Click it and Unblock the Notifications
