MI Vs LSG: ಮಿಚೆಲ್ ಮಾರ್ಷ್, ಪೂರನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪವರ್‌ಪ್ಲೇನಲ್ಲೇ 90 ರನ್ ಚಚ್ಚಿದ ಎಲ್‌ಎಸ್‌ಜಿ
MI Vs LSG IPL 2026: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ (ಮೇ 4) ನಡೆಯುತ್ತಿರುವ ಹೈವೋಲ್ಟೇಜ್ ಐಪಿಎಲ್ ಪಂದ್ಯದಲ್ಲಿ ಎಲ್‌ಎಸ್‌ಜಿ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿವೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಲಕ್ನೋ ಪವರ್‌ಪ್ಲೇನಲ್ಲೇ ನಿಕೋಲಸ್ ಪೂರನ್ ಹಾಗೂ ಮಿಚೆಲ್ ಮಾರ್ಷ್ ಸ್ಫೋಟಕ ಬ್ಯಾಟಿಂಗ್ ನೆರವಿನಿದ ಬರೋಬ್ಬರಿ 90 ರನ್‌ಗಳನ್ನು ಕಲೆಹಾಕಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ (ಮೇ 4) ಸೋಮವಾರ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ರೋಚಕ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ಉತ್ತಮ ಆರಂಭ ಪಡೆದುಕೊಂಡಿದೆ. ಮುಂಬೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ನಿಕೋಲಸ್ ಪೂರನ್ ಹಾಗೂ ಮಿಚೆಲ್ ಮಾರ್ಷ್ ಕೇವಲ 6 ಓವರ್‌ಗಳಲ್ಲಿ ತಂಡದ ಮೊತ್ತವನ್ನು 90 ರನ್‌ಗಳಿಗೆ ತಲುಪಿಸಿದರು.

ಮಿಂಚಿದ ಮಿಚೆಲ್ ಮಾರ್ಷ್, ಪೂರನ್
ಗೆಲ್ಲಲೇಬೇಕಾದ ಈ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮುಂಬೈ ಬೌಲರ್ ಅಲ್ಲಾ ಘಜನ್ಫರ್ ಆರಂಭಿಕ ಆಘಾತ ನೀಡಿದರು. ಲಕ್ನೋ ತಂಡವು ಬಿರುಸಿನ ಆರಂಭ ಪಡೆದರೂ ಸಹ, ಮೂರನೇ ಓವರ್‌ನಲ್ಲಿ ಎಲ್‌ಎಸ್‌ಜಿ ಪರ ಪದಾರ್ಪಣೆ ಮಾಡಿದ ಜೋಶ್ ಇಂಗ್ಲಿಸ್ ಅವರನ್ನು ಔಟ್ ಮಾಡುವ ಮೂಲಕ ಘಜನ್ಫರ್ ಮುಂಬೈಗೆ ಮಿಂಚಿದರು.
ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ದೊಡ್ಡ ಸಮಾಧಾನದ ಸಂಗತಿಯೆಂದರೆ, ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಅವರು ಈ ಪಂದ್ಯದ ಮೂಲಕ ತಂಡಕ್ಕೆ ಮರಳಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ಅನಾರೋಗ್ಯದ ಕಾರಣ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಅವರು ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಟಾಸ್ ಗೆದ್ದ ಸೂರ್ಯಕುಮಾರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಪ್ಲೇಯಿಂಗ್ 11ನಲ್ಲಿ ಬದಲಾವಣೆ
ವೈಯಕ್ತಿಕ ಕಾರಣಗಳಿಂದಾಗಿ ಮೊದಲ ಎಂಟು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಆಸ್ಟ್ರೇಲಿಯಾದ ಜೋಶ್ ಇಂಗ್ಲಿಸ್ ಈ ಪಂದ್ಯದ ಮೂಲಕ ಲಕ್ನೋ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಉಭಯ ತಂಡಗಳು ತಮ್ಮ ಆಡುವ ಹನ್ನೊಂದರ ಬಳಗದಲ್ಲಿ ಮೂರು ಬದಲಾವಣೆಗಳನ್ನು ಮಾಡಿಕೊಂಡಿವೆ. ಈ ಸೀಸನ್‌ನಲ್ಲಿ ಎರಡೂ ತಂಡಗಳ ಪರಿಸ್ಥಿತಿ ಬಹುತೇಕ ಒಂದೇ ತರಹದ ಸವಾಲುಗಳಿಂದ ಕೂಡಿದೆ. ಮುಖ್ಯವಾಗಿ ಬ್ಯಾಟರ್‌ಗಳು ಸಾಮೂಹಿಕವಾಗಿ ವೈಫಲ್ಯ ಅನುಭವಿಸುತ್ತಿರುವುದು ಉಭಯ ತಂಡಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.












Click it and Unblock the Notifications