School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ
School Holiday: ಈಗಾಗಲೇ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮುಗಿದಿದ್ದು, ಫಲಿತಾಂಶ ಇನ್ನೂ ಬಾಕಿಯಿದೆ. ಈಗಿರುವಾಗಲೇ ಇದೀಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026-27ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ, ವಿದ್ಯಾರ್ಥಿಗಳಿಗೆ ಎಷ್ಟು ದಿನ ರಜೆಗಳು ಸಿಗಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅನ್ವಯವಾಗುವಂತೆ ಈ ಶೈಕ್ಷಣಿಕ ವೇಳಾಪಟ್ಟಿಯನ್ನು ನಿಗದಿ ಮಾಡಲಾಗಿದೆ. ಮೇ 29ರಿಂದಲೇ ಶಿಕ್ಷಕರು ಶಾಲೆಗೆ ಹಾಜರಾಗಲು ಹಾಗೂ ಜೂನ್ 1ರಿಂದ ಅಧಿಕೃತವಾಗಿ ತರಗತಿಗಳನ್ನು ಪ್ರಾರಂಭಿಸಲು ಸೂಚನೆ ನೀಡಿದೆ.

ಈ ಬಾರಿ ಒಟ್ಟು 245 ಶಾಲಾ ಕೆಲಸದ ದಿನಗಳನ್ನು ನಿಗದಿಪಡಿಸಲಾಗಿದ್ದು, ಅಕ್ಟೋಬರ್ 3ರಿಂದ 21, 2026ರವರೆಗೆ ದಸರಾ ರಜೆ ಹಾಗೂ ಏಪ್ರಿಲ್ 11, 2027ರಿಂದ ಬೇಸಿಗೆ ರಜೆ ಘೋಷಿಸಲಾಗಿದೆ. 2027ರ ಜೂನ್ ಮೊದಲ ವಾರದಲ್ಲೇ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆಗೆ ಆದೇಶಿಸಿರುವ ಇಲಾಖೆಯು, ದಾಖಲಾತಿ ಅಭಿಯಾನದ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಕರೆತರಲು ವಿಶೇಷ ಒತ್ತು ನೀಡಿದೆ.
ಶಾಲೆಗಳ ಆರಂಭ, ರಜೆಗಳ ವಿವರ
* ಶಾಲಾ ಪುನರಾರಂಭ: ಮೇ 29, 202 ರಿಂದ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಬೇಕು. ಮೇ 30ರಂದು ದಾಖಲಾತಿ ಪ್ರಕ್ರಿಯೆ ನಡೆಯಲಿದ್ದು, ಜೂನ್ 1ರಿಂದ ಅಧಿಕೃತವಾಗಿ ತರಗತಿಗಳು ಆರಂಭವಾಗಲಿವೆ.
* ದಸರಾ ರಜೆ: ಅಕ್ಟೋಬರ್ 3ರಿಂದ ಅಕ್ಟೋಬರ್ 21, 2026ರ ವರೆಗೆ ಮಧ್ಯಂತರ ರಜೆ ಇರುತ್ತದೆ.
* ಬೇಸಿಗೆ ರಜೆ (2027): ಏಪ್ರಿಲ್ 11, 2027ರಿಂದ ಮೇ 28, 2027ರ ವರೆಗೆ ಇರಲಿದೆ.
ಶೈಕ್ಷಣಿಕ ಅವಧಿಗಳು
* ಮೊದಲನೇ ಅವಧಿ: 29-05-2026 ರಿಂದ 02-10-2026 ರವರೆಗೆ.
* ಎರಡನೇ ಅವಧಿ: 22-10-2026 ರಿಂದ 10-04-2027ರವರೆಗೆ.
ಕೆಲಸದ ದಿನಗಳ ವಿವರ
* ಈ ವರ್ಷದಲ್ಲಿ ಒಟ್ಟು 245 ದಿನಗಳು ಶಾಲಾ ಕೆಲಸದ ದಿನಗಳೆಂದು ತಿಳಿಸಲಾಗಿದೆ.
* ಬೋಧನಾ ಅವಧಿ: 181 ದಿನಗಳು (ಕಲಿಕಾ ಪ್ರಕ್ರಿಯೆಗಾಗಿ).
* ಪರೀಕ್ಷೆಗಳು: 26 ದಿನಗಳು (ಮೌಲ್ಯಾಂಕನಕ್ಕಾಗಿ ಮೀಸಲು).
* ಪಠ್ಯೇತರ ಚಟುವಟಿಕೆ: 24 ದಿನಗಳು (ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳು).
* ಫಲಿತಾಂಶ ವಿಶ್ಲೇಷಣೆಗಾಗಿ: 10 ದಿನಗಳು.
* ಶಾಲಾ ಸ್ಥಳೀಯ ರಜೆಗಳು: 04 ದಿನಗಳು.
ಪ್ರಮುಖ ಸೂಚನೆಗಳು
* ದಾಖಲಾತಿ ಅಭಿಯಾನ: ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಜೂನ್ 2026ರ ವರೆಗೆ ವಿಶೇಷ ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತದೆ.
* ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆ: ಜೂನ್ ಮೊದಲ ವಾರದಲ್ಲೇ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಎರಡು ಜೊತೆ ಸಮವಸ್ತ್ರಗಳನ್ನು ಕೊಡಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
* ರಜೆ ಸರಿದೂಗಿಸುವಿಕೆ: ಅನಿರೀಕ್ಷಿತ ಕಾರಣಗಳಿಂದಾಗಿ ಶಾಲೆಗೆ ರಜೆ ನೀಡಿದರೆ, ಮುಂದಿನ ಶನಿವಾರ ಅಥವಾ ಇತರೆ ರಜೆ ದಿನಗಳಲ್ಲಿ ಪೂರ್ಣ ದಿನದ ಶಾಲೆಯನ್ನು ನಡೆಸಿ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಬಿಇಒಗಳಿಗೆ ಸೂಚಿಸಲಾಗಿದೆ.
* ಕ್ರಿಸ್‌ಮಸ್ ರಜೆ: ಆಯಾ ಜಿಲ್ಲಾ ಉಪನಿರ್ದೇಶಕರು ಅಗತ್ಯಕ್ಕೆ ಅನುಗುಣವಾಗಿ ದಸರಾ ರಜೆಯನ್ನು ಕಡಿತಗೊಳಿಸಿ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ರಜೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ವಾರ್ಷಿಕ ಕ್ರಿಯಾಯೋಜನೆಯನ್ನು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಇಲಾಖೆಯ ಆಯುಕ್ತರು ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications