Jesus de Miguel: ಫುಟ್ಬಾಲ್ ಪಂದ್ಯದ ವೇಳೆ ಗೋಲ್ ಕೀಪರ್ ಡಿಕ್ಕಿ; ಜೀಸಸ್ ಡಿ ಮಿಗುಯೆಲ್ ನಿಧನ
Jesus de Miguel: ಸ್ಪ್ಯಾನಿಷ್ ಎರಡನೇ ಡಿವಿಷನ್ ಫುಟ್ಬಾಲ್ ಪಂದ್ಯದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸಿಡಿ ಟೆನೆರಿಫ್ ತಂಡದ ಸ್ಟ್ರೈಕರ್ ಜೀಸಸ್ ಡಿ ಮಿಗುಯೆಲ್ ಅಲಮೇಡಾ (30) ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ (ಅಕ್ಟೋಬರ್ 03) ನಿಧನರಾಗಿದ್ದಾರೆ. ಈ ಘಟನೆಯಿಂದಾಗಿ ಸ್ಪೇನ್ ಹಾಗೂ ಜಾಗತಿಕ ಫುಟ್‌ಬಾಲ್ ವಲಯ ತೀವ್ರ ಶೋಕದಲ್ಲಿ ಮುಳುಗಿದೆ.
ಸೋಮವಾರ ಹೆಲಿಯೊಡೊರೊ ರೊಡ್ರಿಗೇಜ್ ಲೊಪೆಜ್ ಮೈದಾನದಲ್ಲಿ ಟೆನೆರಿಫ್ ಹಾಗೂ ಎಫ್‌ಸಿ ಅಂಡೋರಾ ತಂಡಗಳ ನಡುವೆ ಪಂದ್ಯ ಜರುಗಿತ್ತು. ಪಂದ್ಯ 2-2 ಅಂತರದಲ್ಲಿ ಸಮಬಲದಲ್ಲಿದ್ದಾಗ, ಹೆಚ್ಚುವರಿ ಸಮಯದ 7ನೇ ನಿಮಿಷದಲ್ಲಿ (108ನೇ ನಿಮಿಷ) ಈ ದುರಂತ ಸಂಭವಿಸಿತು.

ಮೈದಾನದಲ್ಲೇ ಕುಸಿದುಬಿದ್ದ ಡಿ ಮಿಗುಯೆಲ್
ಟೆನೆರಿಫ್ ತಂಡ ಕೌಂಟರ್ ಅಟ್ಯಾಕ್ ಮಾಡುವಾಗ ಬಂದ ಚೆಂಡನ್ನು ನಿಯಂತ್ರಿಸಲು ಜೀಸಸ್ ಡಿ ಮಿಗುಯೆಲ್ ಮುಂದೆ ಬಂದರು. ಇದೇ ವೇಳೆ ಪೆನಾಲ್ಟಿ ಪ್ರದೇಶದಿಂದ ಹೊರಬಂದ ಅಂಡೋರಾ ತಂಡದ ಗೋಲ್‌ಕೀಪರ್ ಜೀಸಸ್ ಒವೊನೊ, ಚೆಂಡನ್ನು ತಡೆಯಲು ವೇಗವಾಗಿ ಓಡಿಬಂದರು.
ಈ ವೇಳೆ ಗೋಲ್ ಕೀಪರ್ ಒವೊನೊ ಅವರ ಮೊಣಕಾಲು ಅತ್ಯಂತ ಬಲವಾಗಿ ಜೀಸಸ್ ಡಿ ಮಿಗುಯೆಲ್ ಅವರ ಎದೆ ಹಾಗೂ ತಲೆಯ ಭಾಗಕ್ಕೆ ತಗುಲಿತು. ಈ ರಭಸಕ್ಕೆ ಮಿಗುಯೆಲ್ ಮೈದಾನದಲ್ಲೇ ಪ್ರಜ್ಞಾಹೀನರಾಗಿ ಕುಸಿದುಬಿದ್ದರು. ಸ್ಥಿತಿ ಗಂಭೀರವಾಗಿದ್ದರಿಂದ ರೆಫ್ರಿ ಗೋಲ್‌ಕೀಪರ್ ಒವೊನೊಗೆ ತಕ್ಷಣವೇ ಕೆಂಪು ಕಾರ್ಡ್ ತೋರಿಸಿ, ಪಂದ್ಯವನ್ನು ಮಧ್ಯದಲ್ಲೇ ಸ್ಥಗಿತಗೊಳಿಸಿದರು.
5 ನಿಮಿಷಕ್ಕೂ ಹೆಚ್ಚು ಕಾಲ ತುರ್ತು ಪ್ರಥಮ ಚಿಕಿತ್ಸೆ
ವೈದ್ಯಕೀಯ ಸಿಬ್ಬಂದಿ ಮೈದಾನದಲ್ಲೇ 5 ನಿಮಿಷಕ್ಕೂ ಹೆಚ್ಚು ಕಾಲ ತುರ್ತು ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಮಿಗುಯೆಲ್ ಅವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಯಿತು. ಸ್ಪ್ಯಾನಿಷ್ ಮಾಧ್ಯಮಗಳ ಪ್ರಕಾರ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮಿಗುಯೆಲ್ ಅವರಿಗೆ ಹೃದಯಾಘಾತ ಸಂಭವಿಸಿತ್ತು. ತಕ್ಷಣವೇ ಸಿಪಿಆರ್ ಚಿಕಿತ್ಸೆ ನೀಡಿ ಅವರನ್ನು ಐಸಿಯುಗೆ ಸೇರಿಸಲಾಗಿತ್ತು. ಆರಂಭದಲ್ಲಿ ಸ್ಥಿತಿ ಸ್ಥಿರವಾಗಿದೆ ಎಂದೆನಿಸಿದರೂ, ನಂತರ ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸಿ ಮಂಗಳವಾರ ಅವರು ಕೊನೆಯುಸಿರೆಳೆದರು.
ಸಂತಾಪ ಸೂಚಿಸಿದ ಸಿಡಿ ಟೆನೆರಿಫ್ ಕ್ಲಬ್
ಸಿಡಿ ಟೆನೆರಿಫ್ ಕ್ಲಬ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ, 'ನಮ್ಮ ಪ್ರೀತಿಯ ಜೀಸಸ್ ಡಿ ಮಿಗುಯೆಲ್ ಅಗಲಿಕೆಯಿಂದ ತುಂಬಾ ದುಃಖವಾಗಿದೆ, ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ,' ಎಂದು ಕಂಬನಿ ಮಿಡಿದಿದೆ. ಜೊತೆಗೆ ರಾಯಲ್ ಸ್ಪ್ಯಾನಿಷ್ ಫುಟ್‌ಬಾಲ್ ಫೆಡರೇಶನ್ ಮತ್ತು ಅಂಡೋರಾ ಕ್ಲಬ್‌ಗಳು ಕೂಡ ಮಿಗುಯೆಲ್ ನಿಧನಕ್ಕೆ ಸಂತಾಪ ಸೂಚಿಸಿವೆ. ಈ ಕಷ್ಟದ ಸಮಯದಲ್ಲಿ ಕುಟುಂಬದ ಗೌಪ್ಯತೆಯನ್ನು ಗೌರವಿಸಬೇಕೆಂದು ಕ್ಲಬ್ ಕೇಳಿಕೊಂಡಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಕೆಲವರು ಗೋಲ್‌ಕೀಪರ್ ಅವರ ಈ ನಡೆ ಉದ್ದೇಶಪೂರ್ವಕವಾಗಿತ್ತು ಎಂದು ಆರೋಪಿಸಿ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗೋಲ್ ಕೀಪರ್ ಒವೊನೊ ವಿರುದ್ಧ ಕಠಿಣ ಕಾನೂನಾತ್ಮಕ ಅಥವಾ ಕ್ರೀಡಾ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆಯಿದೆ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ.


Click it and Unblock the Notifications
