ಕಾಮನ್‌ವೆಲ್ತ್ ಗೇಮ್ಸ್ 2026: ಬಾಕ್ಸಿಂಗ್‌ನಲ್ಲಿ ಜೈಸ್ಮಿನ್ ಲ್ಯಾಂಬೋರಿಯಾಗೆ ಚಿನ್ನದ ಪದಕ
Jaismine Lamboria: ಸ್ಕಾಟ್‌ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಭಾರತೀಯ ಕ್ರೀಡಾಪಟುಗಳು ಪದಕಗಳ ಬೇಟೆ ಮುಂದುವರೆಸಿದ್ದಾರೆ. ಹಾಗೆಯೇ ಇದೀಗ ಮಹಿಳಾ ಬಾಕ್ಸಿಂಗ್‌ನಲ್ಲಿ ಜೈಸ್ಮಿನ್ ಲ್ಯಾಂಬೋರಿಯಾ ಅವರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಾಕ್ಸಿಂಗ್‌ನಲ್ಲಿ ಭಾರತೀಯ ಮಹಿಳಾ ಬಾಕ್ಸರ್‌ಗಳು ಪದಕಗಳ ಬೇಟೆ ಮುಂದುವರೆಸಿದ್ದಾರೆ. ಇದೇ ಕ್ರೀಡೆಯಲ್ಲಿ ಪ್ರೀತಿ ಪವಾರ್ ಅವರ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಇದೀಗ ಜೈಸ್ಮಿನ್ ಲ್ಯಾಂಬೋರಿಯಾ ಅವರು ಮಹಿಳೆಯರ 57 ಕೆ.ಜಿ. ವಿಭಾಗದಲ್ಲಿ ಭರ್ಜರಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಮಹಿಳೆಯರ 57 ಕೆ.ಜಿ. ವಿಭಾಗದ ರೋಚಕ ಫೈನಲ್‌ನಲ್ಲಿ ಜೈಸ್ಮಿನ್ ಅಚರು ಉತ್ತರ ಐರ್ಲೆಂಡ್‌ನ ಅನುಭವಿ ಬಾಕ್ಸರ್ ಮೈಕೆಲಾ ವಾಲ್ಷ್ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದರು. ಅತ್ಯಂತ ಸಂಯಮ ಹಾಗೂ ಕೌಶಲ್ಯಪೂರ್ಣ ಆಟ ಪ್ರದರ್ಶಿಸಿದ ಜೈಸ್ಮಿನ್, 5-0 ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.
ಮೊದಲು ಪ್ರೀತಿ ಪವಾರ್ (54 ಕೆಜಿ) ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದರೆ, ಇದರ ಬೆನ್ನಲ್ಲೇ ಜೈಸ್ಮಿನ್ ಕೂಡ ದೇಶಕ್ಕೆ ಮತ್ತೊಂದು ಸ್ವರ್ಣ ಪದಕ ತಂದುಕೊಟ್ಟರು. ಇದರೊಂದಿಗೆ ಒಂದೇ ದಿನ ಭಾರತವು ಮಹಿಳಾ ಬಾಕ್ಸಿಂಗ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಚಿನ್ನದ ಪದಕಕ್ಕೆ ಮುತ್ತಿಟ್ಟ ಸಾಕ್ಷಿ ಚೌಧರಿ
ಮಹಿಳೆಯರ 51 ಕೆಜಿ ವಿಭಾಗದಲ್ಲಿ ಭಾರತದ ಯುವ ಬಾಕ್ಸರ್ ಸಾಕ್ಷಿ ಚೌಧರಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ನ ರೂಬಿ ವೈಟ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಸಾಕ್ಷಿ, ಪಂದ್ಯಾವಳಿಯುದ್ದಕ್ಕೂ ತಮ್ಮ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಟ್ಟಿಹಾಕಿದರು.
ಕೊನೆಯದಾಗಿ ರಿಂಗ್‌ನ ಎಲ್ಲಾ ತೀರ್ಪುಗಾರರು ಸಾಕ್ಷಿ ಪರ ತೀರ್ಪು ನೀಡುವ ಮೂಲಕ 25 ವರ್ಷದ ಭಾರತೀಯ ಬಾಕ್ಸರ್‌ಗೆ ಐತಿಹಾಸಿಕ ಬಂಗಾರದ ಪದಕವನ್ನು ಖಚಿತಪಡಿಸಿದರು. ಪಂದ್ಯ ಮುಗಿಯುತ್ತಿದ್ದಂತೆ ಫಲಿತಾಂಶ ಏನೆಂಬುದು ಎದುರಾಳಿ ಇಂಗ್ಲೆಂಡ್‌ನ ರೂಬಿ ವೈಟ್‌ಗೆ ಸ್ಪಷ್ಟವಾಗಿ ತಿಳಿದಿತ್ತು.
ತಕ್ಷಣವೇ ಅವರು ಸಾಕ್ಷಿ ಚೌಧರಿ ಅವರ ಬಳಿ ಬಂದು ಅಭಿನಂದನೆ ಸಲ್ಲಿಸಿ ಗೌರವ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಸೆಮಿಫೈನಲ್ ಪಂದ್ಯದಲ್ಲಿ ಕೆನಡಾದ ಅಂಬರ್-ಜೇನ್ ವಾಲ್ ಅವರನ್ನು 5-0 ಅಂತರದಿಂದ ಮಣಿಸಿ ಸಾಕ್ಷಿ ಫೈನಲ್ ಪ್ರವೇಶ ಮಾಡಿದ್ದರು.
ಈ ಗೆಲುವಿನ ಮೂಲಕ 2026ರ ಕಾಮನ್‌ವೆಲ್ತ್ ಗೇಮ್ಸ್‌ನ ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಸಿಕ್ಕ 3ನೇ ಚಿನ್ನದ ಪದಕ ಇದಾಗಿದೆ. ಭಾರತವು ಕೂಟದಲ್ಲಿ ಈ ಒಟ್ಟು 9 ಚಿನ್ನದ ಪದಕಗಳೊಂದಿಗೆ ತನ್ನ ಪದಕಗಳನ್ನು ಗೆದ್ದುಕೊಂಡಿದೆ.
ಅಥ್ಲೆಟಿಕ್ಸ್‌ನಲ್ಲಿ ಒಂದು ಚಿನ್ನ, ಒಂದು ಬೆಳ್ಳಿ
ಕಾಮನ್‌ವೆಲ್ತ್ ಗೇಮ್ಸ್‌ನ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತೀಯ ಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪುರುಷರ ಶಾಟ್ ಪುಟ್ ವಿಭಾಗದಲ್ಲಿ ಭಾರತದ ಸೋಮನ್ ರಾಣಾ ಚಿನ್ನದ ಪದಕ ಮುಡಿಗೇರಿಸಿಕೊಂಡರೆ, ಮತ್ತೊಬ್ಬ ಭಾರತೀಯ ಪಟು ಶುಭಂ ಜುಯಾಲ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಭಾರತೀಯ ಸೇನೆಯ ಯೋಧ ಆಗಿರುವ ಸೋಮನ್ ರಾಣಾಗೆ ಸ್ವರ್ಣ ಅವರು 13.40 ಮೀಟರ್ ದೂರ ಗುಂಡು ಎಸೆಯುವ ಮೂಲಕ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ್ಕೆ ಕೊರಳೊಡ್ಡಿದರು. ಮತ್ತೊಂದೆಡೆ ಕೊನೆಯ ರೌಂಡ್‌ವರೆಗೂ ಕಠಿಣ ಪೈಪೋಟಿ ನೀಡಿದ ಶುಭಂ ಜುಯಾಲ್ 13.28 ಮೀಟರ್ ದೂರ ಎಸೆದು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.
ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ ಶಾಟ್ ಪುಟ್ F57 ವಿಭಾಗದಲ್ಲಿ ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕ ಇದಾಗಿದೆ. ಜಮ್ಮು-ಕಾಶ್ಮೀರದಲ್ಲಿ ನಡೆದ ಲ್ಯಾಂಡ್‌ಮೈನ್ ಸ್ಫೋಟದಲ್ಲಿ ಕಾಲು ಕಳೆದುಕೊಂಡರೂ ಅಂಜದೆ ಕ್ರೀಡಾರಂಗದಲ್ಲಿ ದೇಶಕ್ಕೆ ಸಾಲು ಸಾಲು ಪದಕ ತಂದುಕೊಡುತ್ತಿರುವ ಭಾರತೀಯ ಸೇನೆಯ ಸುಬೇದಾರ್ ಸೋಮನ್ ರಾಣಾ ಹಾಗೂ ಯುವ ಪಟು ಶುಭಂ ಜುಯಾಲ್ ಅವರ ಈ ಸಾಧನೆಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.


Click it and Unblock the Notifications
