ಟೀಮ್ ಇಂಡಿಯಾದಿಂದ ಇಶಾನ್ ಕಿಶನ್ ಔಟ್.. ವೈಭವ್ ಸೂರ್ಯವಂಶಿಗೆ ಸ್ಥಾನ..
Vaibhav Sooryavanshi: ಭಾರತ-ನ್ಯೂಜಿಲೆಂಡ್ ನಡುವೆ ಟಿ20 ಸರಣಿ ನಡೆಯುತ್ತಿದ್ದು, ಈಗಾಗಲೇ ಮೊದಲ ಪಂದ್ಯ ಮುಗಿದಿದೆ. ಶನಿವಾರ (ಅಕ್ಟೋಬರ್ 24) ಎರಡನೇ ಮ್ಯಾಚ್ ನಡೆಯಲಿದ್ದು, ಇದಕ್ಕೂ ಮುನ್ನ ಗಾಯದ ಸಮಸ್ಯೆ ಹಿನ್ನೆಲೆ ಇಶಾನ್ ಕಿಶನ್ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ ನೋಡಿ.
ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತಕಾರಿ ಸುದ್ದಿಯೊಂದು ಎದುರಾಗಿದೆ. ಪ್ರಮುಖ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ ಗಾಯದ ಸಮಸ್ಯೆಯಿಂದಾಗಿ ಎರಡನೇ ಟಿ20 ಪಂದ್ಯದಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಭಾರತದ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ಇಶಾನ್ ಕಿಶನ್‌ಗೆ ಏನಾಯಿತು?
ಮೊದಲ ಟಿ20ಐ ಪಂದ್ಯದ ವೇಳೆ ಇಶಾನ್ ಕಿಶನ್ ಅವರ ಕಾಲು ನೋವಿಗೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ಮೊದಲ ಪಂದ್ಯದಲ್ಲಿ ಅವರು ಮೂರನೇ ಕ್ರಮಾಂಕದ ಬದಲಿಗೆ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರಬೇಕಾಯಿತು ಮತ್ತು ತಿಲಕ್ ವರ್ಮಾ ಮೂರನೇ ಸ್ಥಾನದಲ್ಲಿ ಕಣಕ್ಕಿಳಿದಿದ್ದರು.
ಗಾಯಕ್ಕೆ ಒಳಗಾದ ಇಶಾನ್ ಕಿಶನ್.. ವೈಭವ್‌ಗೆ ಅವಕಾಶ..
ಬಿಸಿಸಿಐ ತಮ್ಮ ಅಧಿಕೃತ ಪ್ರಕಟಣೆಯಲ್ಲಿ, 'ಇಶಾನ್ ಕಿಶನ್ ಬಲ ತೊಡೆಯ ಭಾಗದ ಗಾಯದಿಂದಾಗಿ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20ಐ ಪಂದ್ಯದಿಂದ ಹೊರಬಿದ್ದಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡವು ಅವರ ಚೇತರಿಕೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ,' ಎಂದು ಸ್ಪಷ್ಟಪಡಿಸಿದೆ. ವರದಿ ಹೊರಬಿದ್ದ ಬಳಿಕವಷ್ಟೇ ಅವರು ಮುಂಬರುವ ಪಂದ್ಯಗಳಲ್ಲಿ ಆಡುವ ಬಗ್ಗೆ ತೀರ್ಮಾನವಾಗಲಿದೆ ಎಂದು ಹೇಳಲಾಗುತ್ತಿದೆ.
ವೈಭವ್ ಸೂರ್ಯವಂಶಿಗೆ ಅವಕಾಶ ಸಾಧ್ಯತೆ ಹೆಚ್ಚು
ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಮತ್ತು ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಬೆಂಚ್ ಕಾಯಬೇಕಾಗಿ ಬಂದಿದ್ದ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಈಗ ಪ್ಲೇಯಿಂಗ್ 11ನಲ್ಲಿ ಜಾಗ ಸಿಗುವ ಬಾಗಿಲು ತೆರೆದಿದೆ. ಆದರೆ ಇದು ಮ್ಯಾನೇಜ್‌ಮೆಂಟ್ ನಿರ್ಧಾರದ ಮೇಲೆ ನಿಂತಿದೆ.
ಎಂಟ್ರಿ ಕೊಡ್ತಾರಾ ವೈಭವ್ ಸೂರ್ಯವಂಶಿ?
ಎರಡನೇ ಪಂದ್ಯಕ್ಕೂ ಮುನ್ನ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ಬ್ಯಾಟಿಂಗ್ ಕೋಚ್ ಸಿಶಾಂಶು ಕೋಟಕ್ ಅವರು, 'ಇಶಾನ್ ಕಿಶನ್ ಶೇಕಡ 100ರಷ್ಟು ಚೇತರಿಸಿಕೊಳ್ಳದಿದ್ದರೆ, ಅವರ ಜಾಗಕ್ಕೆ ವೈಭವ್ ಸೂರ್ಯವಂಶಿ ಬರಲಿದ್ದಾರೆ. ತಂಡದ ಮ್ಯಾನೇಜ್‌ಮೆಂಟ್ ಅವರ ಪ್ರವೇಶದ ಬಗ್ಗೆ ಗಂಭೀರವಾಗಿ ಪರಿಶೀಲಿಸುತ್ತಿದೆ,' ಎಂದು ತಿಳಿಸಿದ್ದಾರೆ.
ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಾಗುತ್ತಾ?
ಇಷ್ಟು ದಿನಗಳ ಕಾಲ ಆರಂಭಿಕರಾದ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅದ್ಭುತ ಫಾರ್ಮ್‌ನಲ್ಲಿದ್ದ ಕಾರಣ ವೈಭವ್‌ಗೆ ಅವಕಾಶ ಸಿಕ್ಕಿರಲಿಲ್ಲ. ಒಂದು ವೇಳೆ ಇಶಾನ್ ಜಾಗದಲ್ಲಿ ವೈಭವ್ ಆಯ್ಕೆಯಾದರೆ, ಅವರು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆಯೇ ಅಥವಾ ಆರಂಭಿಕರಾಗಿ ಬಂದು ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕವನ್ನು ಬದಲಿಸಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ಏನೇ ಆದರೂ, ಇಶಾನ್ ಕಿಶನ್ ಅಲಭ್ಯತೆಯು ಯುವ ತಾರೆ ವೈಭವ್ ಸೂರ್ಯವಂಶಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಅತ್ಯುತ್ತಮ ವೇದಿಕೆಯನ್ನು ಸೃಷ್ಟಿಸಿಕೊಟ್ಟಿದೆ ಎಂದು ಹೇಳಿದರೆ ತಪ್ಪಾಗಲಾರದು. ಅಭಿಮಾನಿಗಳು ವೈಭವ್ ಆಟ ನೋಡಲು ಕಾತರದಿಂದ ಕಾಯುತ್ತಿರುವುದಂತೂ ನಿಜ. ಆದರೆ ಇದೀಗ ಮ್ಯಾನೇಜ್‌ಮೆಂಟ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ ಅಷ್ಟೇ.


Click it and Unblock the Notifications
