IPL-2026 RCB: ಬೆಂಗಳೂರಿನಲ್ಲೇ ಐಪಿಎಲ್ ಉದ್ಘಾಟನಾ ಪಂದ್ಯ: ಕೆಎಸ್‌ಸಿಎ
ಕ್ರಿಕೆಟ್ ಪ್ರಿಯರ ಹಬ್ಬ ಐಪಿಎಲ್-2026 ಸಮೀಪದಲ್ಲಿದೆ. ಈಗಾಗಲೇ ಐಪಿಎಲ್ ತಂಡಗಳು ಕೂಡ ಸಜ್ಜಾಗುತ್ತಿವೆ. ಆರ್‌ಸಿಬಿ ತಂಡವು ಚೊಚ್ಚಲ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ನಂತರ ಅಭಿಮಾನಿಗಳು ಈ ಸಲವೂ ಕಪ್ ನಮ್ದೇ ಎನ್ನಲು ರೆಡಿಯಾಗಿದ್ದಾರೆ. ಇನ್ನು ಐಪಿಎಲ್ ಉದ್ಘಾಟನಾ ಪಂದ್ಯದ ಬಗ್ಗೆ ಮಹತ್ವದ ವಿಚಾರ ಹೊರಬಿದ್ದಿದೆ. ಈ ಬಾರಿ ನಮ್ಮ ಬೆಂಗಳೂರಿನಲ್ಲೇ ಉದ್ಘಾಟನಾ ಪಂದ್ಯ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಸಿದ್ಧತೆ ನಡೆದಿದೆ. ಈ ಬಗ್ಗೆ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ಬೇಕಿತ್ತು. ಈಗಾಗಲೇ ಸರ್ಕಾರ ಮೌಖಿಕ ಒಪ್ಪಿಗೆಯನ್ನು ನೀಡಿದೆ. ಶೀಘ್ರದಲ್ಲೇ ಇದಕ್ಕೆ ಲಿಖಿತ ಅನುಮತಿ ದೊರೆಯಲಿದೆ ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ. ಬೆಳಗಾವಿ ಅಧಿವೇಶನದ ನಂತರ ಗೃಹ ಸಚಿವ ಜಿ.ಪರಮೇಶ್ವರ್ ಅವರೊಂದಿಗೆ ಇದರ ಬಗ್ಗೆ ಚರ್ಚಿಸಲಾಗುವುದು ಎಂದಿದ್ದಾರೆ.

ಕಳೆದ ಐಪಿಎಲ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿರುವುದರಿಂದ ತವರು ನೆಲದಲ್ಲೇ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯಬೇಕು. ಆದರೆ ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಉಂಟಾದ ಕಾಲ್ತುಳಿತ ಪ್ರಕರಣದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳನ್ನು ಮತ್ತೆ ಆಯೋಜಿಸುವ ವಾತಾವರಣ ಸುಲಭವಿರಲಿಲ್ಲ. ಇದಕ್ಕೆ ರಾಜ್ಯದ ಸರ್ಕಾರದ ಬೆಂಬಲವೂ ಬೇಕು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲೇ ಪಂದ್ಯ ಆಯೋಜನೆ ಬಗ್ಗೆ ಬಿಸಿಸಿಐ ಜೊತೆಗೂ ಮಾತನಾಡಿದ್ದೇವೆ. ಅಗತ್ಯ ಸಿದ್ಧತಾ ಕ್ರಮಗಳನ್ನು ತೆಗೆದುಕೊಂಡು ಉದ್ಘಾಟನಾ ಪಂದ್ಯವನ್ನು ಇಲ್ಲೇ ನಡೆಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಎಸ್‌ಸಿಎಗೆ ಹೊಸ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡ ನಂತರ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದೊಂದಿಗೆ ಚರ್ಚೆಗಳನ್ನು ಶುರು ಮಾಡಿದ್ದೇವೆ. ಹೀಗಾಗಿ ನಮಗೆ ಗ್ರೀನ್‌ಸಿಗ್ನಲ್ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಒಪ್ಪಿಗೆ ನೀಡಿದ್ದಾರೆ ಎಂದು ವೆಂಕಟೇಶ್ ಪ್ರಸಾದ್ ಖಚಿತಪಡಿಸಿದ್ದಾರೆ.

ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಅವಕಾಶ ನೀಡುವುದಾಗಿ ಘೋಷಿಸಿದ್ದರು. ಬಿಸಿಸಿಐ ಕೂಡ ನಮ್ಮ ಪ್ರಸ್ತಾಪವನ್ನು ಸಕ್ರಿಯವಾಗಿ ಪರಿಗಣಿಸುತ್ತಿದೆ. ಸಾಂಪ್ರದಾಯಿಕವಾಗಿ ಐಪಿಎಲ್ ಉದ್ಘಾಟನಾ ಪಂದ್ಯವನ್ನು ಹಿಂದಿನ ಸೀಸನ್‌ನಲ್ಲಿ ಟ್ರೋಫಿ ಗೆದ್ದ ತಂಡದ ತವರು ಮೈದಾನದಲ್ಲೇ ನಡೆಸಲಾಗುತ್ತದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವದ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ಕೆಲ ಗೊಂದಲಗಳು ಮೂಡಿದ್ದವು. ಈಗ ಪಂದ್ಯಗಳನ್ನು ಸುಗಮವಾಗಿ ನಡೆಸಲು ಸಂಸ್ಥೆಯು ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಿದೆ ಎಂದಿದ್ದಾರೆ.
ಶೀಘ್ರವೇ ದಿನಾಂಕ ಘೋಷಣೆ
ನಾನು ಗೃಹ ಸಚಿವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದೇನೆ. ಈ ವರ್ಷದ ಐಪಿಎಲ್ ಉದ್ಘಾಟನಾ ಪಂದ್ಯದ ದಿನಾಂಕವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು. ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಿಗಾಗಿ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣ ಸೇರಿದಂತೆ ಬೆಂಗಳೂರಿನಲ್ಲಿ ಮೂರು ಕ್ರೀಡಾಂಗಣಗಳಿವೆ. ಪಂದ್ಯಗಳ ಸ್ಥಳದ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications