KKR Vs RR: 97 ರನ್ ಸಿಡಿಸಿದ ಕ್ವಿಂಟನ್ ಡಿ ಕಾಕ್: ರಾಜಸ್ಥಾನ್ ವಿರುದ್ಧ ಕೆಕೆಆರ್‌ಗೆ ಸುಲಭದ ಜಯ
KKR Vs RR: ಐಪಿಎಲ್ 18 ಆವೃತ್ತಿಯ ಆರನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೆಕೆಆರ್ ಗೆದ್ದು ಬೀಗಿದೆ. ಆರ್‌ಆರ್ ನೀಡಿದ 152 ರನ್‌ಗಳ ಸುಲಭದ ಗುರಿಯನ್ನು 8 ವಿಕೆಟ್‌ಗಳಿಂದ 17.3 ಓವರ್‌ಗಳಿಗೆ ಮುಗಿಸಿ ಕೊಲ್ಕತ್ತಾ ಗೆಲುವಿನ ನಗೆ ಬೀರಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಬಳಿಸುವ ಮೂಲಕ 151 ರನ್‌ಗಳಿಗೆ ಕಟ್ಟಿ ಹಾಕಿತು. ಇನ್ನು 152 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ್ದ ಕೆಕೆಆರ್ ತಂಡವು 17.3 ಓವರ್‌ನಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 153 ರನ್‌ಗಳನ್ನು ಗಳಿಸಿ 8 ವಿಕೆಟ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು.

ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆರಂಭಿಕ ಆಟಗಾರರಾದ ಕ್ವಿಂಟನ್ ಡಿ ಕಾಕ್ 61 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ 97 ರನ್ ಗಳಿಸಿ ನಾಟ್ ಔಟ್ ಆಗಿ ಉಳಿದು ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಮೋಹಿನ್ ಅಲಿ 12 ಬಾಲ್‌ಗಳಿಗೆ 5 ರನ್ ಕಲೆಹಾಕಿ ಔಟ್ ಆಗುವ ಮೂಲಕ ಪೆವಿಲಿಯನ್ ತಲುಪಿದರು.
ಬಳಿಕ ಬಂದ ನಾಯಕ ಅಜಿಂಕ್ಯಾ ರಹಾನೆ 15 ಬಾಲ್‌ಗಳಿಗೆ 18 ರನ್ ಗಳಿಸಿ ಔಟಾದರು, ಇನ್ನೂ ಬಳಿಕ ಬಂದ ಅಂಗ್ರೀಶ್ ರಘುವನ್ಶಿ ಕ್ವಿಂಟನ್ ಡಿ ಕಾಕ್‌ಗೆ ಸಾಥ್ ನೀಡುವ ಮೂಲಕ 2 ಬೌಂಡರಿಗಳ ಸಹಿತ 17 ಬಾಲ್‌ಗಳಿಗೆ 22 ರನ್‌ಗಳನ್ನು ಕಲೆ ಹಾಕಿ ನಾಟ್ ಔಟ್ ಆಗಿ ಉಳಿದುಕೊಂಡರು
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಮೊದಲ ವಿಕೆಟ್‌ಗೆ 33 ರನ್ ಸಿಡಿಸಿ ಉತ್ತಮ ಆರಂಭ ಪಡೆದುಕೊಂಡಿತ್ತು. ನಾಲ್ಕನೇ ಓವರ್‌ನಲ್ಲಿ ವೈಭವ್ ಅರೋರಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸ್ಯಾಮ್ಸನ್ ಅವರನ್ನು ಬೌಲ್ಡ್ ಮಾಡಿದರು. ಅವರು 11 ಎಸೆತಗಳಲ್ಲಿ 13 ರನ್ ಗಳಿಸಿ ಔಟಾದರು. ನಂತರ, ರಿಯಾನ್ ಪರಾಗ್ ಮತ್ತು ಜೈಸ್ವಾಲ್ ಇಬ್ಬರೂ ಎರಡನೇ ವಿಕೆಟ್‌ಗೆ 34 ರನ್‌ಗಳನ್ನು ಸೇರಿಸಿದರು. ತವರಿನಲ್ಲಿ ನಾಯಕ ಪರಾಗ್ ಕೇವಲ 25 ರನ್ ಗಳಿಸಲು ಮಾತ್ರ ಸಾಧ್ಯ ಆಯಿತು.
ನಂತರ ಬಂದ ಯಾವ ಬ್ಯಾಟರ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲುವಲ್ಲಿ ವಿಫಲರಾದರು. ಜುರೆಲ್ 28 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 33 ರನ್ಗಳಿಸಿ ತಂಡದ ಗರಿಷ್ಠ ಸ್ಕೋರ್ ಆಯಿತು. ಜೋಫ್ರಾ ಆರ್ಚರ್ 7 ಎಸೆತಗಳಲ್ಲಿ 2 ಸಿಕ್ಸರ್ಗಳ ಸಹಿತ 16 ರನ್ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ನಿತೀಶ್ ರಾಣಾ 8, ಹಸರಂಗ 4, ಶುಭಂ ದುಬೆ 9, ಶಿಮ್ರಾನ್ ಹೆಟ್ಮಾಯರ್ 7 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಕೆಕೆಆರ್ ಪರ ವೈಭವ್ ಅರೋರಾ, ಹರ್ಷಿತ್ ರಾಣಾ, ಮೊಯಿನ್ ಅಲಿ ಮತ್ತು ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರು. ಜಾನ್ಸನ್ ಕೊನೆಯ ಓವರ್‌ನಲ್ಲಿ ಒಂದು ವಿಕೆಟ್ ಕಬಳಿಸಿದರು.
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮಾಯೆರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ.
ಕೋಲ್ಕತ್ತಾ ನೈಟ್ ರೈಡರ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಮೋಯಿನ್ ಅಲಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.












Click it and Unblock the Notifications