IPL 2023: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಳಗಿದ ಕೊಹ್ಲಿ..ಕೊಹ್ಲಿ.., ಆರ್‌ಸಿಬಿ...ಆರ್‌ಸಿಬಿ..!; ಅಭಿಮಾನಿಗಳ ಅಬ್ಬರ
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಸೀಸನ್‌ಗಾಗಿ ಭಾನುವಾರ, ಮಾರ್ಚ್ 26ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪೂರ್ಣ ತಂಡ ಸೇರಿಕೊಂಡಿದೆ.
ಇದೆ ವೇಳೆ ಅದ್ಧೂರಿ ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್‌ನಲ್ಲಿ ಮಾಜಿ ಆಟಗಾರರಾದ ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಮಾಗಮವಾಗಿದ್ದು, ಆರ್‌ಸಿಬಿ ಅಭಿಮಾನಿಗಳ ಸಂತೋಷವನ್ನು ಇಮ್ಮಡಿಗೊಳಿಸಿದೆ.

ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 2023ರ ಆವೃತ್ತಿಯಲ್ಲಿ ತಮ್ಮ ಮೊದಲ ಅಭ್ಯಾಸ ಆರಂಭಿಸಿದರು. ಈ ವೇಳೆ ಸಾವಿರಾರು ಅಭಿಮಾನಿಗಳು ಕ್ರೀಡಾಂಗಣದಲ್ಲಿ ನೆರೆದಿದ್ದರು. ಈ ವೇಳೆ ಕಿಕ್ಕಿರಿದು ತುಂಬಿದ ಅಭಿಮಾನಿಗಳಿಂದ ಕೊಹ್ಲಿ... ಕೊಹ್ಲಿ... ಮತ್ತು ಆರ್‌ಸಿಬಿ... ಆರ್‌ಸಿಬಿ... ಎಂಬ ಘೋಷಣೆಗಳು ಮೊಳಗಿದವು.
ಅಭಿಮಾನಿಗಳ ಅಬ್ಬರದ ಚೀರಾಟದ ನಡುವೆಯೂ ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿತು. ಪ್ರೇಕ್ಷಕರ ಗ್ಯಾಲರಿಯ ಎಲ್ಲ ಸ್ಟ್ಯಾಂಡ್‌ಗಳು ಭರ್ತಿಯಾಗಿದ್ದವು. ಆರ್‌ಸಿಬಿಯ ಲೆಜೆಂಡ್‌ಗಳಾದ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ಫ್ರಾಂಚೈಸಿ ಗೌರವಿಸಿತು.

ಅಭ್ಯಾಸದ ಅವಧಿಯಲ್ಲಿ ಆರ್‌ಸಿಬಿ ಅಭಿಮಾನಿಗಳ ಮನರಂಜನೆಗಾಗಿ ವೇದಿಕೆಯ ಮೇಲೆ ಡಿಜೆಗಳೊಂದಿಗೆ ಲೈವ್ ಸಂಗೀತ ಕಾರ್ಯಕ್ರಮ ಸಹ ಒಳಗೊಂಡಿದೆ.
ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರೊಂದಿಗೆ ವಿರಾಟ್ ಕೊಹ್ಲಿ ಸುದೀರ್ಘ ಸಮಾಲೋಚನೆ ಮಾಡಿದರು. ಮ್ಯಾಕ್ಸ್‌ವೆಲ್ ಕಾಲಿಗೆ ಪ್ಯಾಡ್ ತೊಟ್ಟು ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದರು. ಐಪಿಎಲ್‌ಗೆ ಮುನ್ನ ಆರ್‌ಸಿಬಿ ತಮ್ಮ ಮೊದಲ ತರಬೇತಿ ಅವಧಿಗೆ ನೆಟ್ ಬೌಲರ್‌ಗಳನ್ನು ಬಳಸುತ್ತಿರುವುದು ಕಂಡುಬಂದಿತು.

ಹೊಸದಾಗಿ ನೇಮಕಗೊಂಡಿರುವ ಮುಖ್ಯ ಕೋಚ್ ಸಂಜಯ್ ಬಂಗಾರ ಅವರು ಆಟಗಾರರ ಅಭ್ಯಾಸ ಅವಧಿಯನ್ನು ನೋಡಿಕೊಂಡರು. ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಪ್ಯಾಡ್ ಧರಿಸಿ ನೆಟ್ಸ್ ಅಭ್ಯಾಸ ಮಾಡಿದರು.
ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವಿಕೆಟ್ ಕೀಪರ್- ಬ್ಯಾಟರ್ ದಿನೇಶ್ ಕಾರ್ತಿಕ್, ಮೊಹಮ್ಮದ್ ಸಿರಾಜ್ ಮತ್ತು ರೀಸ್ ಟೋಪ್ಲೆ ಸೇರಿದಂತೆ ಹಲವು ಆಟಗಾರರು ಅಭ್ಯಾಸದ ಅವಧಿಗೆ ಆಗಮಿಸಿದರು.
ಕಳೆದ 2022ರ ಟಿ20 ಏಷ್ಯಾ ಕಪ್‌ನಲ್ಲಿ ಅಂತಾರಾಷ್ಟ್ರೀಯ ಶತಕದ ಬರವನ್ನು ಕೊನೆಗೊಳಿಸಿದ ನಂತರ ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ ಹೊಸ ಐಪಿಎಲ್ ಸೀಸನ್‌ಗೆ ಮರಳುತ್ತಿದ್ದಾರೆ. 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಶತಕ ಸೇರಿದಂತೆ ವಿರಾಟ್ ಕೊಹ್ಲಿ ಒಟ್ಟು 3 ಶತಕಗಳನ್ನು ಬಾರಿಸಿದ್ದಾರೆ.
3 ವರ್ಷಗಳ ನಂತರ ಮೊದಲ ಬಾರಿಗೆ ತವರಿಗೆ ಮರಳುತ್ತಿರುವ ಕಾರಣ ಆರ್‌ಸಿಬಿ ತಂಡದ ತವರು ಮೈದಾನದಲ್ಲಿ ಅಭಿಮಾನಿಗಳಿಂದ ದೊಡ್ಡ ಬೆಂಬಲ ಪಡೆದುಕೊಂಡಿತು. ಉತ್ಸಾಹವಿತ್ತು. 2019ರ ಐಪಿಎಲ್ ನಂತರ ಮೊದಲ ಬಾರಿಗೆ ತವರಿನ ಮತ್ತು ಎದುರಾಳಿ ನೆಲದಲ್ಲಿ ಆಡುವ ಸ್ವರೂಪಕ್ಕೆ ಮರಳಿದೆ.
ಕೋವಿಡ್ -19 ಕಾರಣದಿಂದಾಗಿ 2020ರ ಸಂಪೂರ್ಣ ಐಪಿಎಲ್ ಸೀಸನ್ ಮತ್ತು 2021ರ ದ್ವಿತೀಯಾರ್ಧವನ್ನು ಯುಎಇಯಲ್ಲಿ ಆಡಲಾಯಿತು. ನಂತರ ಐಪಿಎಲ್ 2022ರ ಆವೃತ್ತಿಯನ್ನು ಮುಂಬೈ ಮತ್ತು ಪುಣೆಯ ಮೈದಾನಗಳಲ್ಲಿ ಆಡಲಾಯಿತು. ಮುಂಬೈ ಇಂಡಿಯನ್ಸ್ ಹೊರತುಪಡಿಸಿ ಯಾವುದೇ ತಂಡಗಳು ತಮ್ಮ ತವರಿನ ಮೈದಾನದಲ್ಲಿ ಆಡಲು ಅವಕಾಶವನ್ನು ಪಡೆಯಲಿಲ್ಲ.
2023ರ ಐಪಿಎಲ್ ಋತುವಿಗಾಗಿ ಎಲ್ಲಾ ತಂಡಗಳು ಪಂದ್ಯಾವಳಿಗೂ ಮುಂಚಿತವಾಗಿ ತಮ್ಮ ತವರು ಮೈದಾನದಲ್ಲಿ ಅಭ್ಯಾಸವನ್ನು ಪ್ರಾರಂಭಿಸಿವೆ. ಇದೇ ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
ಆರ್‌ಸಿಬಿ ತಂಡ ತನ್ನ ಐಪಿಎಲ್ 2023ರ ಅಭಿಯಾನವನ್ನು 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ, ಏಪ್ರಿಲ್ 2ರಂದು ಇದೇ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ.












Click it and Unblock the Notifications