IPL 2023: RCB vs DC ಪಂದ್ಯದ ಸಮಯ, ಸಂಭಾವ್ಯ ಆಡುವ 11ರ ಬಳಗದ ವಿವರ
ಶನಿವಾರ, ಏಪ್ರಿಲ್ 15ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
2023ರ ಐಪಿಎಲ್ ಋತುವಿನ ಐದನೇ ಡಬಲ್-ಹೆಡರ್ ದಿನದ ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೂರನೇ ತವರಿನ ಪಂದ್ಯವಾಗಿದೆ. ಸತತ ಎರಡು ಸೋಲುಗಳ ಬಳಿಕ ಆರ್‌ಸಿಬಿ ತಂಡ ನಾಲ್ಕನೇ ಪಂದ್ಯದಲ್ಲಿ ಇದುವರೆಗೂ ಗೆಲುವೇ ಕಾಣದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆತಿಥ್ಯ ವಹಿಸಲಿದೆ.

ಸತತ 4 ಪಂದ್ಯಗಳನ್ನು ಸೋತಿರುವ ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಈ ಋತುವಿನ ಮೊದಲ ಗೆಲುವಿಗಾಗಿ ಹೋರಾಡಲಿದೆ. ಮತ್ತೊಂದೆಡೆ ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತನ್ನ ಎರಡನೇ ಗೆಲುವಿಗಾಗಿ ಎದುರು ನೋಡುತ್ತಿದೆ.
ಐಪಿಎಲ್ 2023ರಲ್ಲಿ ಡೇವಿಡ್ ವಾರ್ನರ್ ಬಳಗ ಆಡಿದ ಎಲ್ಲಾ ನಾಲ್ಕು ಪಂದ್ಯಗಳನ್ನು ಸೋತು ಹೀನಾಯ ಸ್ಥಿತಿಯಲ್ಲಿದೆ. ಮೊದಲ ಪಂದ್ಯವನ್ನು ಎಲ್‌ಎಸ್‌ಜಿ ವಿರುದ್ಧ 50 ರನ್‌ಗಳಿಂದ ಸೋತರೆ, ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ 6 ವಿಕೆಟ್‌ಗಳಿಂದ ಸೋಲು ಕಂಡಿತು. ನಂತರ ರಾಜಸ್ಥಾನ ರಾಯಲ್ಸ್ ವಿರುದ್ಧ 57 ರನ್‌ಗಳಿಂದ ಮತ್ತೊಂದು ಅವಮಾನಕ ಮುಖಭಂಗ ಅನುಭಿಸಿತು. ತನ್ನ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 6 ರನ್‌ಗಳಿಂದ ಸೋತಿತು.

ಮತ್ತೊಂದೆಡೆ, ಆರ್‌ಸಿಬಿ ತಂಡ ತನ್ನ ಮೊದಲ ಪಂದ್ಯವನ್ನು 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್‌ಗಳ ಅಂತರದ ಗೆಲುವಿನ ಮೂಲಕ ಶುಭಾರಂಭ ಮಾಡಿತ್ತು. ಆದರೆ, ನಂತರ ಸತತ ಎರಡು ಪಂದ್ಯಗಳಲ್ಲಿ ಸೋಲಿಗೆ ಶರಣಾಯಿತು. ಆರ್‌ಸಿಬಿ ತಂಡದ ಪರ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಮಾತ್ರ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಸಹ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡರು.
2023ರ ಐಪಿಎಲ್‌ನಲ್ಲಿ ಸದ್ಯ ಆರ್‌ಸಿಬಿ ತಂಡ ಒಂದು ಗೆಲುವು ಮತ್ತು ಎರಡು ಸೋಲಿನೊಂದಿಗೆ -0.800 ನೆಟ್ ರನ್‌ರೇಟ್ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದೂ ಗೆಲುವು ಕಾಣದೇ -1.567 ನೆಟ್ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸಿದೆ.

ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ವಿವರ
ಸ್ಥಳ ಮತ್ತ ಸಮಯ: ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವು ಶನಿವಾರ, ಏಪ್ರಿಲ್ 15ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭವಾಗಲಿದೆ.
ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ಮಾಹಿತಿ
ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಅಲ್ಲದೇ, Jio Cinema ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮ್ ಆಗಿ ವೀಕ್ಷಿಸಬಹುದು.
ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಆಡುವ 11ರ ಬಳಗ
ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೊರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅನುಜ್ ರಾವತ್, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಡೇವಿಡ್ ವಾರ್ನರ್ (ನಾಯಕ), ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಲಲಿತ್ ಯಾದವ್, ರಿಪಾಲ್ ಪಟೇಲ್, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಮುಸ್ತಾಫಿಜುರ್ ರೆಹಮಾನ್.












Click it and Unblock the Notifications