RR vs DC IPL 2023: ಸೋತ ತಂಡಗಳ ನಡುವಿನ ಕಾದಾಟದಲ್ಲಿ ಗೆಲ್ಲುವವರಾರು?; ಸಂಭಾವ್ಯ ಆಡುವ 11ರ ಬಳಗ
ಶನಿವಾರ, ಏಪ್ರಿಲ್ 8ರಂದು ಗುವಾಹಟಿಯಲ್ಲಿ ನಡೆಯಲಿರುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಋತುವಿನ 11ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ಮತ್ತು ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ರಾಜಸ್ಥಾನ ರಾಯಲ್ಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 72 ರನ್‌ಗಳಿಂದ ಸೋಲಿಸುವ ಮೂಲಕ ಅದ್ಭುತವಾಗಿ ಶುಭಾರಂಭ ಮಾಡಿದ್ದರು. ಆದರೆ, ತನ್ನ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಎದುರು 5 ರನ್‌ಗಳ ರೋಚಕ ಸೋಲು ಕಂಡಿತು.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಎದುರು ಸೋತರೆ, ತನ್ನ ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು ಸೋಲು ಅನುಭವಿಸಿತು. ಇದೀಗ ಐಪಿಎಲ್ 2023ರಲ್ಲಿ ಗೆಲುವಿನ ಖಾತೆ ತೆರೆಯಲು ಹೋರಾಡಬೇಕಿದೆ.
ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್ ಅವರಂತಹ ಸ್ಟಾರ್ ಆಟಗಾರರಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಲೀ ರುಸ್ಸೌ, ಲುಂಗಿ ಎನ್‌ಗಿಡಿ, ಆನ್ರಿಚ್ ನಾರ್ಟ್ಜೆ ಅವರಂತಹ ಆಟಗಾರರನ್ನು ಒಳಗೊಂಡಿದೆ.

2023ರ ಐಪಿಎಲ್ ಅಂಕಪಟ್ಟಿಯಲ್ಲಿ ರಾಜಸ್ಥಾನ ರಾಯಲ್ಸ್ 2 ಪಂದ್ಯಗಳಿಂದ ಒಂದು ಗೆಲುವು ಮತ್ತು ಒಂದು ಸೋಲಿನೊಂದಿಗೆ 2 ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಆಡಿದ 2 ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
ರಾಜಸ್ಥಾನ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ವಿವರ
ಸ್ಥಳ ಮತ್ತು ಸಮಯ: ರಾಜಸ್ಥಾನ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವು ಶನಿವಾರ, ಏಪ್ರಿಲ್ 8ರಂದು ಗುವಾಹಟಿಯ ಬರ್ಸಾಪರ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ.
ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ
ರಾಜಸ್ಥಾನ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನೆಲ್‌ಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಇನ್ನು Jio Cinema ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮ್ ಆಗಿ ವೀಕ್ಷಿಸಬಹುದು.

ಬರ್ಸಾಪರಾ ಪಿಚ್ ವರದಿ
ರಾಜಸ್ಥಾನ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವು ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇಲ್ಲಿನ ಪಿಚ್ ಔಟ್ ಬ್ಯಾಟಿಂಗ್ ಸ್ವರ್ಗವಾಗಿದೆ ಎಂದು ಹೇಳಬಹುದು. ಈ ಪಿಚ್‌ನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 160 ಆಗಿದ್ದು, ಈ ಪಂದ್ಯದಲ್ಲಿ ಎರಡೂ ಕಡೆಗಳಿಂದ ದೊಡ್ಡ ಮೊತ್ತ ಗಳಿಸುವ ನಿರೀಕ್ಷೆ ಇಡಬಹುದು.
ಗುವಾಹಟಿ ಹವಾಮಾನ ವರದಿ
ಭಾರತದ ಈಶಾನ್ಯದಲ್ಲಿರುವ ಗುವಾಹಟಿಯಲ್ಲಿ ಮಂಜು ಮುಸುಕಿದ ವಾತಾವರಣವಿರಲಿದೆ. ಪಂದ್ಯದ ದಿನದಂದು ಗಾಳಿಯ ವೇಗ ಗಂಟೆಗೆ 2.5 ಕಿಮೀ, ಸುಮಾರು 33 ಡಿಗ್ರಿ ಸೆಲ್ಸಿಯಸ್ ತಾಪಮಾನ ಮತ್ತು ಶೇ.66ರಷ್ಟು ತೇವಾಂಶವಿರಲಿದೆ. 5 ಕಿಲೋಮೀಟರ್‌ವರೆಗೂ ಗೋಚರತೆ ಇರಲಿದೆ. ಪಂದ್ಯದ ವೇಳೆ ಶೇ.38ರಷ್ಟು ಮಳೆ ಬರುವ ಸಾಧ್ಯತೆ ಇದೆ.
ರಾಜಸ್ಥಾನ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಸಂಭಾವ್ಯ ಆಡುವ 11ರ ಬಳಗ
ರಾಜಸ್ಥಾನ ರಾಯಲ್ಸ್ ತಂಡ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ / ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಕೆಎಂ ಆಸಿಫ್, ಯುಜ್ವೇಂದ್ರ ಚಾಹಲ್.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್(ನಾಯಕ), ಪೃಥ್ವಿ ಶಾ, ಮಿಚೆಲ್ ಮಾರ್ಷ್, ಸರ್ಫರಾಜ್ ಖಾನ್, ರಿಲೀ ರೊಸ್ಸೌ, ಅಕ್ಸರ್ ಪಟೇಲ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಅಮನ್ ಖಾನ್, ಅನ್ರಿಚ್ ನಾರ್ಟ್ಜೆ, ಮುಖೇಶ್ ಕುಮಾರ್.












Click it and Unblock the Notifications