IPL 2023 Points Table: ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ LSG; ಆರೆಂಜ್, ಪರ್ಪಲ್ ಕ್ಯಾಪ್‌ಗೆ ಪೈಪೋಟಿ
ಸೋಮವಾರ, ಏಪ್ರಿಲ್ 10ರಂದು 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಕೊನೆಯ ಎಸೆತದಲ್ಲಿ 1 ವಿಕೆಟ್‌ನ ರೋಚಕ ಗೆಲುವು ಸಾಧಿಸಿದ ನಂತರ, ಲಕ್ನೋ ಸೂಪರ್ ಜೈಂಟ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಲಕ್ನೋ ಸೂಪರ್ ಜೈಂಟ್ಸ್ 2023ರ ಐಪಿಎಲ್‌ನಲ್ಲಿ ಆಡಿದ 4 ಪಂದ್ಯಗಳಲ್ಲಿ ಮೂರನ್ನು ಗೆದ್ದು 6 ಅಂಕಗಳನ್ನು ಗಳಿಸಿದ ಏಕೈಕ ತಂಡವಾಗಿದೆ. ಇನ್ನು ಆಡಿದ ಮೂರು ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಎರಡು ಸೋಲು ಅನುಭವಿಸಿರುವ ಆರ್‌ಸಿಬಿ ತಂಡ 7ನೇ ಸ್ಥಾನದಲ್ಲಿದೆ.

ಇನ್ನು ಆಡಿದ ಮೂರು ಪಂದ್ಯಗಳಲ್ಲಿ ತಲಾ ಎರಡು ಗೆಲುವು ಮತ್ತು ಒಂದೊಂದು ಸೋಲು ಕಂಡಿರುವ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದಿವೆ. ಕೆಕೆಆರ್‌ಗಿಂತ ಉತ್ತಮ ರನ್‌ರೇಟ್ ಹೊಂದಿರುವ ರಾಜಸ್ಥಾನ ರಾಯಲ್ಸ್ ಎರಡನೇ ಸ್ಥಾನ ಪಡೆದುಕೊಂಡಿದೆ.
ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಒಂದು ಸೋಲು ಅನುಭವಿಸಿದ್ದು, ನಾಲ್ಕನೇ ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ.

ಅದೇ ರೀತಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಒಂದು ಸೋಲುಗಳೊಂದಿಗೆ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 5ನೇ ಸ್ಥಾನದಲ್ಲಿದ್ದರೆ, ಸಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಆರನೇ ಸ್ಥಾನ ಪಡೆದಿದೆ.
ಇನ್ನು ಏಡೆನ್ ಮಾರ್ಕ್ರಾಮ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ಆಡಿದ ಮೂರು ಪಂದ್ಯಗಳಲ್ಲಿ 2 ಸೋಲು ಮತ್ತು 1 ಗೆಲುವಿನೊಂದಿಗೆ 2 ಅಂಕ ಗಳಿಸಿ ಎಂಟನೇ ಸ್ಥಾನದಲ್ಲಿದೆ.

ಇದೇ ವೇಳೆ ಆಡಿದ ಎರಡು ಪಂದ್ಯಗಳಲ್ಲಿ ಯಾವುದೇ ಗೆಲುವು ಕಾಣದೆ ಸೋಲು ಅನುಭವಿಸಿರುವ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕ್ರಮವಾಗಿ 9 ಮತ್ತು 10ನೇ ಸ್ಥಾನ ಪಡೆದಿವೆ. ಈ ತಂಡಗಳು ಮಂಗಳವಾರ, ಏಪ್ರಿಲ್ 11ರಂದು ತಮ್ಮ ಮೊದಲ ಗೆಲುವಿಗಾಗಿ ಪರಸ್ಪರ ಸೆಣಸಾಡಲಿವೆ.
ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮೇಲೇರಿದ ಕೊಹ್ಲಿ, ಡು ಪ್ಲೆಸಿಸ್
ಲಕ್ನೋ ಸೂಪರ್ ಕಿಂಗ್ಸ್ ತಂಡದ ವಿರುದ್ಧ ತಲಾ ಅರ್ಧಶತಕ ಬಾರಿಸಿದ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಜೋಡಿ ಐಪಿಎಲ್ 2023ರ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮೇಲೇರಿದ್ದಾರೆ.
ಫಾಫ್ ಡು ಪ್ಲೆಸಿಸ್ ಈವರೆಗೆ 2 ಅರ್ಧಶತಕಗಳೊಂದಿಗೆ 175 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ 3 ಪಂದ್ಯಗಳಲ್ಲಿ 2 ಅರ್ಧಶತಕಗಳೊಂದಿಗೆ 164 ರನ್ ಗಳಿಸಿದ್ದಾರೆ.
ಆದರೆ, ಸದ್ಯ ಪಂಜಾಬಗ ಕಿಂಗ್ಸ್ ನಾಯಕ ಶಿಖರ್ ಧವನ್ ಆಡಿದ ಮೂರು ಪಂದ್ಯಗಳಲ್ಲಿ 225 ರನ್ ಬಾರಿಸುವುದರೊಂದಿಗೆ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಮೂರು ಪಂದ್ಯಗಳಲ್ಲಿ 189 ರನ್ ಗಳಿಸಿರುವ ರುತುರಾಜ ಗಾಯಕ್ವಾಡ್ 2ನೇ ಸ್ಥಾನದಲ್ಲಿದ್ದಾರೆ.
ಮರಳಿ ಪರ್ಪಲ್ ಕ್ಯಾಪ್ ಪಡೆದ ಮಾರ್ಕ್ ವುಡ್
ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್ ಮಾರ್ಕ್ ವುಡ್ ಕಳೆದ ಆರ್‌ಸಿಬಿ ವಿರುದ್ಧ ಒಂದು ವಿಕೆಟ್ ಪಡೆಯುವ ಮೂಲಕ ಮರಳಿ ಪರ್ಪಲ್ ಕ್ಯಾಪ್ ಪಡೆದರು. ಆಡಿದ ಮೂರು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಕಬಳಿಸಿದ್ದಾರೆ.
ಇನ್ನು ಗುಜರಾತ್ ಟೈಟನ್ಸ್ ತಂಡದ ರಶೀದ್ ಖಾನ್ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ಯುಜ್ವೇಂದ್ರ ಚಹಾಲ್ ಆಡಿದ ಮೂರು ಪಂದ್ಯಗಳಿಂದ ಆಡಿದ ಮೂರು ಪಂದ್ಯಗಳಿಂದ 8 ವಿಕೆಟ್ ಪಡೆದು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.












Click it and Unblock the Notifications