CSK vs RR IPL 2023: ಎಂಎಸ್ ಧೋನಿ vs ಸಂಜು ಸ್ಯಾಮ್ಸನ್ ನಡುವೆ ಗೆಲ್ಲುವವರಾರು?; ಪಂದ್ಯದ ವರದಿ, ಆಡುವ 11ರ ಬಳಗ
ಬುಧವಾರ, ಏಪ್ರಿಲ್ 12ರಂದು ಚೆನ್ನೈನಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 17ನೇ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡಗಳು ಸೆಣಸಾಡಲಿವೆ.
ಸಿಎಸ್‌ಕೆ ನಾಯಕ ಎಂಎಸ್ ಧೋನಿ ಅವರಿಗೆ ಈ ಪಂದ್ಯ ಬಹಳ ವಿಶೇಷವಾಗಿದೆ. ಏಕೆಂದರೆ, ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿ ಎಂಎಸ್ ಧೋನಿ 200ನೇ ಪಂದ್ಯವನ್ನು ತಂಡದ ತವರಿನ ಅಭಿಮಾನಿಗಳ ಎದುರು ಆಡಲಿದ್ದಾರೆ.

ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಒಂದೊಂದು ಸೋಲಿನೊಂದಿಗೆ ನಾಲ್ಕು ಅಂಕಗಳನ್ನು ಹೊಂದಿವೆ. ಉತ್ತಮ ನೆಟ್ ರನ್‌ರೇಟ್ ಹೊಂದಿರುವ ಸಂಜು ಸ್ಯಾಮ್ಸನ್ ಪಡೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ, ಸಿಎಸ್‌ಕೆ 5ನೇ ಸ್ಥಾನದಲ್ಲಿದೆ.
ಅಹಮದಾಬಾದ್‌ನಲ್ಲಿ ನಡೆದ 2023ರ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಮುಖಭಂಗ ಅನುಭವಿಸಿತು. ನಂತರ ನಡೆದ ತವರಿನ ಚೆಪಾಕ್ ಕ್ರೀಡಾಂಗಣದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿದರೆ, ಆ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧ ಅವರದೇ ಮೈದಾನದಲ್ಲಿ ಸೋಲಿನ ರುಚಿ ತೋರಿಸಿತು.

ಇದೀಗ ದೀಪಕ್ ಚಹಾರ್ ಮತ್ತು ಬೆನ್ ಸ್ಟೋಕ್ಸ್ ಅವರ ಅನುಪಸ್ಥಿತಿಯಲ್ಲಿ ಆಡಬೇಕಾದ ಒತ್ತಡದಲ್ಲಿದ್ದರೂ, ಶ್ರೀಲಂಕಾದ ಮಹೀಶ್ ತೀಕ್ಷಣ ಮತ್ತು ಮಥೀಶ್ ಪತಿರಾನ ಅವರ ಸೇರ್ಪಡೆಯಿಂದ ಬೌಲಿಂಗ್ ವಿಭಾಗ ಸುಧಾರಣೆಯಾಗಿದೆ.
ಮತ್ತೊಂದೆಡೆ, ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟರ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದು, ವಿಶೇಷವಾಗಿ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಚೆನ್ನಾಗಿ ಆಡುತ್ತಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡ ಈ ಋತುವಿನಲ್ಲಿ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿ 190 ಪ್ಲಸ್ ಮೊತ್ತ ದಾಖಲಿಸಿದೆ.

ರಾಜಸ್ಥಾನ ರಾಯಲ್ಸ್ ಬೌಲಿಂಗ್ ವಿಭಾಗದಲ್ಲಿ ಟ್ರೆಂಟ್ ಬೌಲ್ಟ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದರೆ, ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಹಾಲ್ ತಂಡದ ವಿಕೆಟ್ ಟೇಕರ್ ಸ್ಪಿನ್ನರ್‌ಗಳಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ ರಾಯಲ್ಸ್ ಪಂದ್ಯದ ವಿವರ
ಸ್ಥಳ ಮತ್ತು ಸಮಯ: ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ ರಾಯಲ್ಸ್ ಪಂದ್ಯವು ಬುಧವಾರ, ಏಪ್ರಿಲ್ 12ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7.30 ಪಂದ್ಯ ಆರಂಭವಾಗಲಿದೆ.
ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ
ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ ರಾಯಲ್ಸ್ ಪಂದ್ಯವು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನೆಲ್‌ಗಳಲ್ಲಿ ನೇರಪ್ರಸಾರವಾಗಲಿದೆ. ಇನ್ನು Jio Cinema ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮ್ ಆಗಿ ವೀಕ್ಷಿಸಬಹುದು.
ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ ರಾಯಲ್ಸ್ ಸಂಭಾವ್ಯ ಆಡುವ 11ರ ಬಳಗ
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಡ್ವೈನ್ ಪ್ರಿಟೋರಿಯಸ್, ಎಂಎಸ್ ಧೋನಿ (ನಾಯಕ/ ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ.
ರಾಜಸ್ಥಾನ ರಾಯಲ್ಸ್ ತಂಡ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ ಜುರೆಲ್, ಜೇಸನ್ ಹೋಲ್ಡರ್, ರವಿಚಂದ್ರನ್ ಅಶ್ವಿನ್, ಮುರುಗನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಾಲ್.












Click it and Unblock the Notifications