IPL 2023: ರಾಜಸ್ಥಾನ ರಾಯಲ್ಸ್ vs ಪಂಜಾಬ್ ಕಿಂಗ್ಸ್ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಹೆಸರಿಸಿದ ಆಕಾಶ್ ಚೋಪ್ರಾ
ಬುಧವಾರ, ಏಪ್ರಿಲ್ 5ರಂದು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 8ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
2023ರ ಐಪಿಎಲ್ ಸದ್ಯ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಇಂದಿನ ಪಂದ್ಯವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಈ ಎಲ್ಲದರ ನಡುವೆ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಆಕಾಶ್ ಚೋಪ್ರಾ ಪಂದ್ಯದ ಬಗ್ಗೆ ಕೆಲವು ಕುತೂಹಲಕಾರಿ ಭವಿಷ್ಯ ನುಡಿದಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ಮತ್ತು ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಈ ಇಬ್ಬರು ಆಟಗಾರರು ತಲಾ 80ಕ್ಕಿಂತ ಹೆಚ್ಚು ರನ್ ಗಳಿಸುತ್ತಾರೆ ಎಂದು ಭವಿಷ್ಯ ನುಡಿದರು. ಹೆಚ್ಚಿನ ಸ್ಕೋರಿಂಗ್ ಪಿಚ್ ಮತ್ತು ಇಬ್ಬನಿಯ ಸಾಮರ್ಥ್ಯವನ್ನು ಉಲ್ಲೇಖಿಸಿ ಈ ಮಾತು ಹೇಳಿದ್ದಾರೆ.
ಯುಜ್ವೇಂದ್ರ ಚಹಾಲ್ ಮತ್ತು ಅರ್ಶ್‌ದೀಪ್ ಸಿಂಗ್ ಅವರು ಬೌಲಿಂಗ್‌ನಲ್ಲಿ ತಲಾ ಮೂರು ಅಥವಾ ಹೆಚ್ಚಿನ ವಿಕೆಟ್‌ಗಳನ್ನು ಪಡೆಯಲಿದ್ದಾರೆ ಎಂದು ಆಕಾಶ್ ಚೋಪ್ರಾ ತಿಳಿಸಿದರು. ಹಿಂದಿನ ಪಂದ್ಯದಲ್ಲಿ ಯುಜ್ವೇಂದ್ರ ಚಾಹಲ್ ರಾಯಲ್ಸ್ ತಂಡದ ಪರ ನಾಲ್ಕು ವಿಕೆಟ್‌ಗಳೊಂದಿಗೆ ಪ್ರಭಾವಶಾಲಿ ಪ್ರದರ್ಶನ ನೀಡಿದರು. ಇನ್ನು ಅರ್ಶ್‌ದೀಪ್ ಸಿಂಗ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮೂರು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.
ಮತ್ತೊಂದು ಕುತೂಹಲಕಾರಿ ವಿಷಯ ಬಹಿರಂಗಪಡಿಸಿದ್ದು, ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯದ ವೇಳೆ ಇಬ್ಬರು ಬ್ಯಾಟರ್‌ಗಳು ಬೌಲ್ಡ್ ಆಗುತ್ತಾರೆ ಎಂದು ಹೇಳಿದ ಆಕಾಶ್ ಚೋಪ್ರಾ, ನಾನು ಹೇಳುವುದೇ ನಡೆಯುತ್ತದೆ ಎನ್ನುವುದಿಲ್ಲ. ಇದು ನನ್ನ ಅಂತಃಪ್ರಜ್ಞೆಯನ್ನು ಆಧರಿಸಿ ಹೇಳಿದ್ದೇನೆ ಎಂದರು.

ಎಲ್ಲದಕ್ಕಿಂತ ಮುಖ್ಯವಾಗಿ, ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗೆಲುವಿನ ಬಲವಿದೆ ಎಂದು ಆಕಾಶ್ ಚೋಪ್ರಾ ತಿಳಿಸಿದರು. ಕೊನೆಯ ಪಂದ್ಯದಲ್ಲಿ ರಾಜಸ್ಥಾನ ತಂಡದ ಅಗ್ರ ಮೂವರು ಆಟಗಾರರು ಅರ್ಧಶತಕಗಳನ್ನು ಬಾರಿಸುವುದರೊಂದಿಗೆ ಬಲಿಷ್ಠ ಬ್ಯಾಟಿಂಗ್ ಲೈನ್-ಅಪ್ ಹೊಂದಿದ್ದಾರೆ. ಅಲ್ಲದೇ, ಟ್ರೆಂಟ್ ಬೌಲ್ಟ್, ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಾಹಲ್ ಅವರ ಉತ್ತಮ ಬೌಲಿಂಗ್ ಪಡೆಯನ್ನು ಹೈಲೈಟ್ ಮಾಡಿ ಹೇಳಿದರು.
ಆಕಾಶ್ ಚೋಪ್ರಾ ಅವರ ಪಂದ್ಯದ ಭವಿಷ್ಯ ಮತ್ತು ವಿಶ್ಲೇಷಣೆಯೊಂದಿಗೆ ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವು ರೋಚಕ ಮತ್ತು ಕುತೂಹಲ ಘಟ್ಟ ತಲುಪುವುದು ಖಚಿತವಾಗಿದೆ. ಆಕಾಶ್ ಚೋಪ್ರಾ ಅವರ ಭವಿಷ್ಯವಾಣಿ ನಿಜವಾಗುತ್ತದೆಯೇ ಮತ್ತು ಯಾವ ತಂಡವು ಗೆಲುವು ಸಾಧಿಸುತ್ತದೆ ಎಂದು ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ರಾಜಸ್ಥಾನ ರಾಯಲ್ಸ್ vs ಪಂಜಾಬ್ ಕಿಂಗ್ಸ್ ಸಂಭಾವ್ಯ ಆಡುವ 11ರ ಬಳಗ
ರಾಜಸ್ಥಾನ ರಾಯಲ್ಸ್ ತಂಡ: ಶಿಖರ್ ಧವನ್ (ನಾಯಕ), ಪ್ರಭ್‌ಸಿಮ್ರಾನ್ ಸಿಂಗ್, ಭಾನುಕ ರಾಜಪಕ್ಸೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಿಕಂದರ್ ರಝಾ, ಶಾರುಖ್ ಖಾನ್, ಸ್ಯಾಮ್ ಕರ್ರಾನ್, ನಾಥನ್ ಎಲ್ಲಿಸ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಹಾರ್, ಅರ್ಶ್‌ದೀಪ್ ಸಿಂಗ್.

ಪಂಜಾಬ್ ಕಿಂಗ್ಸ್ ತಂಡ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ/ ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಜೇಸನ್ ಹೋಲ್ಡರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಕೆಎಂ ಆಸಿಫ್, ಯುಜ್ವೇಂದ್ರ ಚಾಹಲ್.












Click it and Unblock the Notifications