IND Vs PAK Match: ಪಾಕಿಸ್ತಾನ ತಂತ್ರಕ್ಕೆ ರಣತಂತ್ರ ರೂಪಿಸಿದ ಸೂರ್ಯ ಪಡೆ: ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ
IND Vs PAK Match: ಕೊಲೊಂಬೊದಲ್ಲಿ ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಗುಂಪು ಹಂತದ ಹೈವೋಲ್ಟೇಜ್ ಪಂದ್ಯದಲ್ಲಿ ಇಂದು (ಫೆಬ್ರವರಿ 15) ಮುಖಾಮುಖಿಯಾಗಲಿವೆ. ಈ ಪಂದ್ಯ ವೀಕ್ಷಣೆ ಮಾಡಲು ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ. ಇನ್ನೂ ಈ ಮ್ಯಾಚ್ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ, ಯಾರೆಲ್ಲ ಇನ್ ಹಾಗೂ ಯಾರು ಔಟ್ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟಿ20 ವಿಶ್ವಕಪ್‌ನ 2026ರ ಗುಂಪು ಹಂತದ ಅತ್ಯಂತ ಹೈವೋಲ್ಟೇಜ್ ಮಹಾಸಮರದಲ್ಲಿ ಪಾಕಿಸ್ತಾನವನ್ನು ಎದುರಿಸಲು ಭಾರತ ತಂಡ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹಣಾಹಣಿಯಲ್ಲಿ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಇರುವುದರಿಂದ, ಟೀಂ ಇಂಡಿಯಾ ತನ್ನ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳಲು ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಟೀಂ ಇಂಡಿಯಾ ಬೌಲಿಂಗ್ ವಿಭಾಗ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳಿಗೆ ಅವಕಾಶ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ. ಇದರಿಂದಾಗಿ ಭಾರತದ ಪ್ಲೇಯಿಂಗ್ 11ನಲ್ಲಿ ಬದಲಾವಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನೂ ಕೊಲಂಬೊ ಪಿಚ್‌ಗೆ ತಕ್ಕಂತೆ ಭಾರತ ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಬಹುದು. ಇದರಲ್ಲಿ ಇಬ್ಬರು ಸ್ಪಿನ್ ಆಲ್‌ರೌಂಡರ್‌ಗಳ ಜೊತೆಗೆ ಇಬ್ಬರು ಪಕ್ಕಾ ಸ್ಪಿನ್ನರ್‌ಗಳು ಇರಲಿದ್ದಾರೆ. ಆ ಪ್ರಕಾರ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಪ್ರಮುಖ ಆಯ್ಕೆ ಆಗಿದ್ದಾರೆ.
ಹೊಡಿಬಡಿ ದಾಂಡಿಗನ ಆಗಮನ
ಅನಾರೋಗ್ಯದ ಕಾರಣದಿಂದ ಹಿಂದಿನ ಪಂದ್ಯವದಲ್ಲಿ ಕಾಣಿಸಿಕೊಂಡಿರದ ಅಭಿಷೇಕ್ ಶರ್ಮಾ ಈಗ ಚೇತರಿಸಿಕೊಂಡಿದ್ದು, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. ಅವರು ಇಶಾನ್ ಕಿಶನ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ನಿನ್ನೆ ಪಾಕಿಸ್ತಾನ ನಾಯಕ ಅಘಾ ಅಭಿಷೇಕ್ ಶರ್ಮಾ ಗುಣಮುಖರಾಗಿ ಆಡಬೇಕು ಎಂದು ಬಯಸಿದ್ದೇವೆ ಎಂದು ಹೇಳಿದ್ದರು. ಇದಕ್ಕೆ ಸೂರ್ಯಕುಮಾರ್ ಯಾದವ್ ನೀವು ಬಯಸಿದರೆ ಅವರು ಖಂಡಿತಾ ಆಡುತ್ತಾರೆ ಎಂದು ನಗುತ್ತಲೇ ಸವಾಲು ಸ್ವೀಕರಿಸಿದ್ದರು.
ಬ್ಯಾಟಿಂಗ್ ವಿಭಾಗದಲ್ಲಿನ ಬದಲಾವಣೆ
ಇನ್ನೂ ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಆಡಲಿದ್ದು, ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟ್ ಬೀಸಲಿದ್ದಾರೆ. ಐದನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, ಆರನೇ ಕ್ರಮಾಂಕದಲ್ಲಿ ಶಿವಂ ದುಬೆ ಅವಕಾಶ ಪಡೆಯಬಹುದು. ಇತ್ತೀಚಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಪ್ರದರ್ಶನದಲ್ಲಿ ವಿಫಲರಾದ ರಿಂಕು ಸಿಂಗ್ ಈ ಬಾರಿ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನೂ ಬೌಲಿಂಗ್ ವಿಭಾಗದಲ್ಲಿ ವೇಗಿ ಅರ್ಷದೀಪ್ ಸಿಂಗ್ ಬದಲು ಸ್ಪಿನ್ನರ್ ಕುಲ್ದೀಪ್ ಯಾದವ್‌ಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ಇನ್ನೂ ಮಾರಕ ಬೌಲಿಂಗ್ ದಾಳಿಯನ್ನು ಮುನ್ನಡೆಸುವ ಜವಾಬ್ದಾರಿ ಜಸ್ಪ್ರಿತ್ ಬೂಮ್ರಾ ಅವರ ಮೇಲಿದೆ.
ಭಾರತದ ಸಂಭಾವ್ಯ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ.












Click it and Unblock the Notifications